

ವಿಜಯವಾಣಿ ಸುದ್ದಿಜಾಲ ಧಾರವಾಡ
ಶಾಲಾ ಶಿಕ್ಷಣದ ಪದವಿಗಳಾದ ಬಿಇಡಿ., ಎಂಇಡಿ ಸೇರಿ ವಿವಿಧ ಡಿಪ್ಲೋಮಾ ಕೋರ್ಸ್‌ಗಳನ್ನು ನಡೆಸುವ ರಾಜ್ಯದ ಎಲ್ಲ ಕಾಲೇಜುಗಳ ಶಿಕ್ಷಕರ ತರಬೇತಿಯನ್ನು ಕ್ರಿಯಾಪ್ರೇರಕಗೊಳಿಸುವಲ್ಲಿ ಅಗತ್ಯವಾದ ಪ್ರಶಿಕ್ಷಣ ವಿಶ್ವ ವಿದ್ಯಾಲಯವನ್ನು (ಯುನಿರ್ವಸಿಟಿ ಆಫ್ ಟೀಚರ್ ಎಜ್ಯುಕೇಶನ್) ಧಾರವಾಡ ಡಯಟ್ ಆವರಣದಲ್ಲಿ ಆರಂಭಿಸುವಂತೆ ಆಗ್ರಹಿಸಲಾಗಿದೆ.
ನಗರದ ಡಯಟ್ ಆವರಣದಲ್ಲಿ ಭಾನುವಾರ ಏರ್ಪಡಿಸಿದ್ದ ಪ್ರತಿಷ್ಠಿತ ಗಂಡು ಮಕ್ಕಳ ಸರ್ಕಾರಿ ಟ್ರೇನಿಂಗ್ ಕಾಲೇಜಿನ ಹಳೇ ವಿದ್ಯಾರ್ಥಿಗಳ ಸಮಾವೇಶದಲ್ಲಿ ಈ ಕುರಿತು ಸರ್ವಾನುಮತದ ನಿರ್ಣಯ ಅಂಗೀಕರಿಸಲಾಗಿದೆ.
ಪ್ರಶಿಕ್ಷಣ ವಿವಿ ಜತೆಗೆ ಶಾಲಾ ಶಿಕ್ಷಣ ಇಲಾಖೆ ಒಡೆತನಕ್ಕೆ ಒಳಪಟ್ಟ ಹಿರಿಯ ಪಾರಂಪರಿಕ ನಿಯತಕಾಲಿಕ ಜೀವನ ಶಿಕ್ಷಣ ಶೈಕ್ಷಣಿಕ ಮಾಸಪತ್ರಿಕೆ ಪ್ರಕಟಣಾ ವೆಚ್ಚ ಭರಿಸಲು 50 ಲಕ್ಷ ರೂ. ವಿಶೇಷ ಅನುದಾನ, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಂವರ್ಧನೆಗೆ ಮೀಸಲಾಗಿರುವ ಡೆಪ್ಯೂಟಿ ಚೆನ್ನಬಸಪ್ಪ ಪ್ರಾಥಮಿಕ ಶಿಕ್ಷಣ ಪ್ರತಿಷ್ಠಾನ ಹಾಗೂ ಡಾ.ಎಚ್.ಎಫ್. ಕಟ್ಟಿಮನಿ ಪ್ರೌಢ ಶಿಕ್ಷಣ ಪ್ರತಿಷ್ಠಾನಗಳ ಚಟುವಟಿಕೆಗಳ ನಿರ್ವಹಣೆಗೆ ವಾರ್ಷಿಕ 50 ಲಕ್ಷ ರೂ. ಮೊತ್ತವನ್ನು ರಾಜ್ಯ ಸರ್ಕಾರ ಪ್ರತಿ ವರ್ಷದ ಆಯವ್ಯಯದಲ್ಲಿ ಒದಗಿಸುವಂತೆ ಒತ್ತಾಯಿಸಲಾಯಿತು.
167 ವರ್ಷಗಳ ಹಿಂದೆಯೇ ಕನ್ನಡ ಶಾಲಾ ಶಿಕ್ಷಕರ ತರಬೇತಿಗೆ ಸ್ಥಾಪಿತವಾದ ಧಾರವಾಡದ ಪ್ರತಿಷ್ಠಿತ ಡಯಟ್‌ನ ಒಟ್ಟು ಆವರಣದಲ್ಲಿನ ಎಲ್ಲ ಕಟ್ಟಡಗಳಿಗೆ ನೂರು ವರ್ಷ ಪೂರೈಸಿದ್ದು, ರಾಜ್ಯ ಸರ್ಕಾರ ಇದನ್ನು ಪಾರಂಪರಿಕ ಕಟ್ಟಡಗಳ ಆವರಣ ಎಂದು ಪರಿಗಣಿಸಿ ಅಭಿವೃದ್ಧಿಗೆ ಆದೇಶ ಹೊರಡಿಸಬೇಕು. ಕನ್ನಡದ ಕಟ್ಟಾಳು ಡೆಪ್ಯೂಟಿ ಚೆನ್ನಬಸಪ್ಪನವರ ಹೆಸರಿನಲ್ಲಿ ಡೆಪ್ಯೂಟಿ ಚೆನ್ನಬಸಪ್ಪ ಕನ್ನಡ ವಿಕಾಸ ರತ್ನ ಪ್ರಶಸ್ತಿ ಸ್ಥಾಪಿಸಬೇಕು ಎಂದು ಆಗ್ರಹಿಸಲಾಯಿತು.
ಸಮಾವೇಶದ ಸಂಚಾಲಕ ಡಾ. ಗುರುಮೂರ್ತಿ ಯರಗಂಬಳಿಮಠ ನಿರ್ಣಯಗಳನ್ನು ಮಂಡಿಸಿದರು. ಸಮಾವೇಶ ಉದ್ಘಾಟಿಸಿದ ಕರ್ನಾಟಕ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಚಂದ್ರಕಾಂತ ಬೆಲ್ಲದ, ಹಿರಿಯ ಶಿಕ್ಷಣ ತಜ್ಞ ಶಿವಶಂಕರ ಹಿರೇಮಠ, ಶಿಕ್ಷಣ ಇಲಾಖೆ ನಿವೃತ್ತ ಜಂಟಿ ನಿರ್ದೇಶಕ ಎಂ.ಎಸ್.ಪಾಟೀಲ, ನಿವೃತ್ತ ಪ್ರಶಿಕ್ಷಕರಾದ ಬಿ.ಬಿ.ಕೊಟಬಾಗಿ, ಹಳೇ ವಿದ್ಯಾರ್ಥಿಗಳಾದ ಪಿ.ಎಂ. ಕಂಬಳಿ, ಟಿ.ಟಿ. ದಾಸರ, ವಸಂತ ಪತ್ತಾರ, ಎಸ್.ಎಸ್. ಭಲಾರಿ, ಆನಂದ ಕುಲಕರ್ಣಿ, ಬಸವರಾಜ ಪರಡ್ಡಿ ಮಾತನಾಡಿದರು.
ಡಯಟ್ ಪ್ರಾಚಾರ್ಯ ಜೆ.ಜಿ.ಸೈಯ್ಯದ್ ಅಧ್ಯಕ್ಷತೆ ವಹಿಸಿದ್ದರು. ಮಾಲತೇಶ ಕರ್ಜಗಿ ಸ್ವಾಗತಿಸಿದರು. ಆರ್.ಬಿ. ಮಡಿವಾಳರ ವಂದಿಸಿದರು.