ಪ್ರಶಾಂತ ವಾತಾವರಣದಿಂದ ಶಾಂತಿ ನೆಮ್ಮದಿ

2BK2_C
Published on

ಬಸವಕಲ್ಯಾಣ: ಇತಿಹಾಸ ಪ್ರಸಿದ್ಧ ಪುಣ್ಯ ಭೂಮಿ ಕಲ್ಯಾಣ. ಇದನ್ನು ಅಂತಾರಾಷ್ಟಿçÃಯ ಧಾರ್ಮಿಕ, ಆಧ್ಯಾತ್ಮಿಕ, ಪ್ರವಾಸಿ ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಸರ್ಕಾರದಿಂದ ಹಲವು ಅಭಿವೃದ್ಧಿ ಕಾರ್ಯ ನಡೆಯುತ್ತಿವೆ ಎಂದು ಪರಿಸರ, ಜೈವಿಕ ಹಾಗೂ ಅರಣ್ಯ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಹೇಳಿದರು.

ಬಸವಕಲ್ಯಾಣ ಅಭಿವೃದ್ಧಿ ಮಂಡಳಿಯಿಂದ ನಿರ್ಮಿಸಿದ ೪.೫೭ ಕೋಟಿ ರೂ. ವೆಚ್ಚದ ಬಂಧವರ ಓಣಿ ಕಲ್ಯಾಣ ಮಂಟಪ ಹಾಗೂ ತ್ರಿಪುರಾಂತ ಕೆರೆ ದಡದಲ್ಲಿ ೩.೩೫ ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿರುವ ಮಕ್ಕಳ ಉದ್ಯಾನವನ ಸಂಗೀತ ಕಾರಂಜಿ ಬುಧವಾರ ಸಂಜೆ ಉದ್ಘಾಟಿಸಿ ಮಾತನಾಡಿ, ಆಧುನಿಕತೆ ನಿದ್ದೆ ಕೆಡಿಸಿ ಬಿಟ್ಟಿದೆ. ಸ್ಪರ್ಧಾತ್ಮಕ ಯುಗದಲ್ಲಿ ತೀವ್ರ ಪೈಪೋಟಿಯಿಂದ ಒತ್ತಡ ಬದುಕಿನಿಂದ ಮನಸ್ಸಿಗೆ ಶಾಂತಿ ಇಲ್ಲದಾಗಿದೆ. ಬಿಪಿ, ಶುಗರ್ ಸೇರಿ ಇತರ ರೋಗಗಳಿಂದ ಆರೋಗ್ಯ ಕೆಡುತ್ತಿದೆ. ಶಾಂತಿ ನೆಮ್ಮದಿಗಾಗಿ ಉದ್ಯಾನ, ಕಾರಂಜಿಯಂತ ಪ್ರಶಾಂತ ವಾತಾವರಣದ ಅವಶ್ಯಕತೆ ಇದೆ ಎಂದರು.

ಅನುಭವ ಮಂಟಪ ಟ್ರಸ್ಟ್ ಅಧ್ಯಕ್ಷ ಶ್ರೀ ಡಾ.ಬಸವಲಿಂಗ ಪಟ್ಟದ್ದೇವರು ಮಾತನಾಡಿ, ೧೨ನೇ ಶತಮಾನದ ಬಸವಕಲ್ಯಾಣ ವೈಭವ ೨೧ನೇ ಶತಮಾನಕ್ಕೆ ಮರುಕಳಿಸುತ್ತಿದೆ. ಜಗತ್ತಿನ ಜನ ಕಲ್ಯಾಣದ ಕಡೆ ತಿರುಗಿದೆ. ಬಸವ ತತ್ವ ಎಲ್ಲರೂ ಒಪ್ಪುವಂತಹ ತತ್ತ್ವವಾಗಿದೆ. ವಚನಗಳನ್ನು ಮನಸ್ಸಿನಲ್ಲಿ ಬದುಕಿನಲ್ಲಿ ಅಳವಡಿಸಿಕೊಂಡಾಗ ಕಲ್ಯಾಣ ರಾಜ್ಯ ನಿರ್ಮಾಣವಾಗುತ್ತದೆ ಎಂದರು.

ಹುಲಸೂರಿನ ಶ್ರೀ ಡಾ.ಶಿವಾನಂದ ಸ್ವಾಮೀಜಿ ಮಾತನಾಡಿ, ಬಸವಕಲ್ಯಾಣವನ್ನು ಎಲ್ಲರೂ ಮನಸ್ಸು ಮಾಡಿ ಜಿಲ್ಲೆಯನ್ನಾಗಿ ಮಾಡಿದರೆ ಅಭಿವೃದ್ಧಿಯಾಗುತ್ತದೆ. ಅಗತ್ಯ ಬಿದ್ದರೆ ಹೋರಾಟ ಕೈಗೊಳ್ಳಲಾಗುವುದು ಎಂದು ಹೇಳಿದರು.

ಬಸವ ಮಹಾಮನೆ ಸಂಸ್ಥೆಯ ಶ್ರೀ ಡಾ.ಸಿದ್ಧರಾಮ ಶರಣರು ಬೆಲ್ದಾಳ ಮಾತನಾಡಿ, ಇಲ್ಲಿ ಶಾಂತಿ, ಸೌಹಾರ್ದತೆ, ಸಮಾನತೆಗಳಂತಹ ಮಾನವೀಯ ಮೌಲ್ಯ ಸಾರುವ ಯೋಜನೆ ಜಾರಿಯಾಗಿ, ಶರಣ ಸಂಸ್ಕೃತಿ ಭವನ ನಿರ್ಮಾಣವಾಗಬೇಕು. ಬಸವಾದಿ ಶರಣರ ಕಾಯಕದ ಮಹತ್ವ, ಸಮಾನತೆ ದಾಸೋಹ ಸಾರುವಂತಹ ಮ್ಯೂಸಿಯಂ ನಿರ್ಮಿಸಬೇಕಾಗಿರುವುದು ಅವಶ್ಯ ಎಂದರು.

ಶಾಸಕ ಶರಣು ಸಲಗರ ಮಾತನಾಡಿದರು. ಪೂಜ್ಯ ಡಾ.ಗಂಗಾಂಬಿಕಾ ಅಕ್ಕ, ಬೇಲೂರಿನ ಶ್ರೀ ಪಂಚಾಕ್ಷರಿ ಸ್ವಾಮೀಜಿ, ಶ್ರೀ ಶಿವಕುಮಾರ ಸ್ವಾಮೀಜಿ, ಶ್ರೀ ಶಿವಾನಂದ ಸ್ವಾಮೀಜಿ, ಜಿಲ್ಲಾಧಿಕಾರಿ ಗೋವಿಂದರೆಡ್ಡಿ, ಜಿಪಂ ಸಿಇಒ ಶಿಲ್ಪಾ ಎಂ, ಪೊಲೀಸ್ ವರಿಷ್ಠಾಧಿಕಾರಿ ಚನ್ನಬಸವಣ್ಣ ಲಂಗೋಟಿ, ಎಸಿ ಪ್ರಕಾಶ ಕುದರಿ, ತಹಸೀಲ್ದಾರ್ ಶಾಂತಗೌಡ ಬಿರಾದಾರ, ಮುಖಂಡರಾದ ಶಶಿಕಾಂತ ದುರ್ಗೆ, ವೈಜನಾಥ ಕಾಮಶೆಟ್ಟಿ, ನೀಲಕಂಠ ರಾಠೋಡ, ಜಿ.ಆರ್.ಪಾಟೀಲ್, ಅಜರ್‌ಅಲಿ ನವರಂಗ, ಬಸವರಾಜ ಮುರುಡೆ, ಜಿ.ಆರ್ ಪಾಟೀಲ್, ರಿಯಾಜುದ್ದೀನ್ ಇತರರಿದ್ದರು. ಬಿಕೆಡಿಬಿ ಆಯುಕ್ತ ರಮೇಶ ಕೋಲಾರ ಸ್ವಾಗತಿಸಿದರು. ಶಿವಕುಮಾರ ಜಡಗೆ ನಿರೂಪಣೆ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net