

ಹಾಸನ: ಸಾಲುಮರದ ತಿಮ್ಮಕ್ಕ ಗ್ರೀನರಿ ಅವಾರ್ಡ್ ಪ್ರಶಸ್ತಿ ಪಡೆದ ರವಿ ನಾಗಲಗೂಡು, ಕರ್ನಾಟಕ ಸಾಹಿತ್ಯ ಅಕಾಡೆಮಿ ವತಿಯಿಂದ ಸಾಹಿತ್ಯ ಶ್ರೀ ಪ್ರಶಸ್ತಿಗೆ ಭಾಜನರಾಗಿರುವ ಚಲಂ ಹಾಡ್ಲಹಳ್ಳಿ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪಡೆದ ಪಿ.ಎ. ಶ್ರೀನಿವಾಸ್, ರಂಗಸ್ವಾಮಿ ಅವರನ್ನು ಸೋಮವಾರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ಆತ್ಮೀಯವಾಗಿ ಸನ್ಮಾನಿಸಿ ಗೌರವಿಸಲಾಯಿತು.
ಸಮಾರಂಭದಲ್ಲಿ ರಾಜ್ಯ ಪತ್ರಕರ್ತರ ಸಂಘದ ಅಧ್ಯಕ್ಷ ಟಿ.ಬಿ.ಶಿವಾನಂದ ತಗಡೂರು ಮಾತನಾಡಿ, ಜಿಲ್ಲಾ ಪತ್ರಕರ್ತರ ಸಂಘ ಇಡೀ ರಾಜ್ಯಕ್ಕೆ ಮಾದರಿಯಾಗಿದೆ. ಜಿಲ್ಲೆಯ ಪತ್ರಕರ್ತರು ಸಂಘಟನೆಯಲ್ಲಿ ತೊಡಗಿಸಿಕೊಳ್ಳುವ ಮೂಲಕ ವಿವಿಧ ಕ್ಷೇತ್ರಗಳಲ್ಲಿ ಇಂದು ಸನ್ಮಾನಕ್ಕೆ ಪಾತ್ರರಾಗಿರುವ ಹಿರಿಯ ಪತ್ರಕರ್ತ ಎಚ್.ಬಿ.ಮದನ ಗೌಡ ಹಾಗೂ ರವಿ ನಾಕಲಗೂಡು, ಚಲಂ ಹಾಡ್ಲಹಳ್ಳಿ, ಪಿ.ಎ. ಶ್ರೀನಿವಾಸ್ ಮತ್ತು ರಂಗಸ್ವಾಮಿ ಅವರು ಹಲವು ವರ್ಷಗಳಿಂದ ಪತ್ರಕರ್ತರಾಗಿ ಸೇವೆ ಸಲ್ಲಿಸುತ್ತಾ ಬಂದಿದ್ದಾರೆ. ಇವರೆಲ್ಲರಿಗೂ ಕೂಡ ಅಭಿನಂದನೆ ಸಲ್ಲಿಸುವುದಾಗಿ ತಿಳಿಸಿದರು.
ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ಎಚ್. ವೇಣು ಕುಮಾರ್ ಮಾತನಾಡಿ, ಪತ್ರಕರ್ತರ ಸಂಘ ಎಂದರೆ ಒಂದು ಕುಟುಂಬ. ಕುಟುಂಬದ ಸದಸ್ಯರಿಗೆ ಪ್ರಶಸ್ತಿ ಬಂದಿರುವುದನ್ನು ನಾವು ಸಂಭ್ರಮಿಸಬೇಕು. ಆ ಹಿನ್ನೆಲೆಯಲ್ಲಿ ಸಂಘದ ವತಿಯಿಂದ ಸನ್ಮಾನಿತರನ್ನು ಗೌರವಿಸುವಂತಹ ಕೆಲಸವನ್ನು ನಮ್ಮ ಪದಾಧಿಕಾರಿಗಳು ಮಾಡಿದ್ದಾರೆ ಎಂದು ಹೇಳಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ರವಿನಾಗಲಗೂಡು, ಜಿಲ್ಲಾ ಪತ್ರಕರ್ತರ ಸಂಘಕ್ಕೆ ಹಲವು ವರ್ಷಗಳ ಇತಿಹಾಸವಿದ್ದು ಹಿರಿಯರ ಮಾರ್ಗದರ್ಶನದಲ್ಲಿ ಹಲವರ ಪರಿಶ್ರಮದಿಂದ ಸಂಘ ಗಟ್ಟಿಯಾಗಿ ನೆಲೆ ನಿಂತಿದೆ. ಎಲ್ಲ ಪತ್ರಕರ್ತರನ್ನು ಒಗ್ಗಟ್ಟಿನಿಂದ ಒಗ್ಗೂಡಿಸಿಕೊಂಡು ಹೋಗುವ ನಿಟ್ಟಿನಲ್ಲಿ ಹಿರಿಯರ ಮಾರ್ಗದರ್ಶನ ಕಿರಿಯರ ಸಹಕಾರದಿಂದ ಸಂಘ ಹಲವು ವಿನೂತನ ಕಾರ್ಯಕ್ರಮಗಳನ್ನು ಹಿಂದಿನಿಂದಲೂ ಕೂಡ ಮಾಡಿಕೊಂಡು ಬಂದಿದೆ. ಈ ಬಾರಿ ಪ್ರಶಸ್ತಿ ಬಂದಂತವರನ್ನು ಸನ್ಮಾನಿಸಿ ಗೌರವಿಸುತ್ತಿರುವುದು ನಿಜಕ್ಕೂ ಸಂತೋಷ ತಂದಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷರಾದ ಶೇಷಾದ್ರಿ, ಲೀಲಾವತಿ, ಕೆ.ಆರ್. ಮಂಜುನಾಥ್, ಪ್ರಸನ್ನ ಕುಮಾರ್, ಮಾಜಿ ಕಾರ್ಯದರ್ಶಿ ಕೆ.ಜಿ. ಸುರೇಶ್, ಸಂಘದ ಪ್ರಧಾನ ಕಾರ್ಯದರ್ಶಿ ಬಿ.ಸಿ. ಶಶಿಧರ್, ಸಂಘದ ಉಪಾಧ್ಯಕ್ಷರಾದ ಕೆ.ಎಂ. ಹರೀಶ್, ಮೋಹನ್ ಕುಮಾರ್, ಕಾರ್ಯದರ್ಶಿ ನಟರಾಜ್, ಸಂತೋಷ್, ಖಜಾಂಚಿ ಕುಮಾರ್ ಇತರರಿದ್ದರು.