ಪ್ರವೇಶಾತಿ ಹೆಚ್ಚಳಕ್ಕೆ ಕಡಿವಾಣ ಹಾಕುವ ಮೈಸೂರು ವಿವಿ ನಿರ್ಧಾರಕ್ಕೆ ಎಐಡಿಎಸ್‌ಒ ಖಂಡನೆ

mysore
Published on

ಮೈಸೂರು: ಸರ್ಕಾರಿ ಕಾಲೇಜುಗಳಲ್ಲಿ ಪ್ರವೇಶಾತಿ ಹೆಚ್ಚಳಕ್ಕೆ ಕಡಿವಾಣ ಹಾಕಲು ಮುಂದಾಗಿರುವ ಮೈಸೂರು ವಿಶ್ವವಿದ್ಯಾಲಯದ ನಿರ್ಧಾರವನ್ನು ಎಂದು ಆಲ್ ಇಂಡಿಯಾ ಡೆಮಾಕ್ರೆಟಿಕ್ ಸ್ಟೂಡೆಂಟ್ ಆರ್ಗನೈಸೇಷನ್(ಎಐಡಿಎಸ್‌ಒ) ಖಂಡಿಸಿದೆ.

ಮೈಸೂರು ವಿಶ್ವವಿದ್ಯಾಲಯದ ಶೈಕ್ಷಣಿಕ ಮಂಡಳಿ ಸಭೆಯಲ್ಲಿ ಪ್ರವೇಶಾತಿ ಸೀಟ್‌ಗಳ ಸಂಖ್ಯೆಯನ್ನು ಶೇ.15ಕ್ಕಿಂತ ಹೆಚ್ಚಿಸಬಾರದು ಎಂದು ಕುಲಪತಿ ಪ್ರೊ.ಎನ್.ಕೆ.ಲೋಕನಾಥ್ ಸೂಚಿಸಿದ್ದಾರೆ.

ಮಹಾರಾಣಿ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜಿನ ಪ್ರವೇಶಾತಿ ಮಿತಿಯನ್ನು 690ರಿಂದ 1100ಕ್ಕೇರಿಸಿರುವ ಕ್ರಮದ ಬಗ್ಗೆ ಕುಲಪತಿ ಆಕ್ಷೇಪ ವ್ಯಕ್ತಪಡಿಸಿರುವುದು ಶಿಕ್ಷಣ ವಿರೋಧಿ ನಿಲುವಾಗಿದೆ ಎಂದು ಸಂಘಟನೆಯ ರಾಜ್ಯ ಉಪಾಧ್ಯಕ್ಷೆ ಸ್ವಾತಿ ಪ್ರಕಟಣೆಯಲ್ಲಿ ಕಿಡಿಕಾರಿದ್ದಾರೆ.

ಸರ್ಕಾರಿ ಶಾಲಾ-ಕಾಲೇಜುಗಳನ್ನು ಆಯ್ಕೆ ಮಾಡಿಕೊಳ್ಳುವವರಲ್ಲಿ ಬಡ ರೈತರು, ಕಾರ್ಮಿಕರು, ದಲಿತರ ಮಕ್ಕಳು ಅಧಿಕ. ಅವರು ಕಾಲೇಜಿಗೆ ಹೆಚ್ಚಿನ ಸಂಖ್ಯೆಯಲ್ಲಿ ದಾಖಲಾದರೆ ಅದನ್ನು ಸ್ವಾಗತಿಸಬೇಕು.

ಅದನ್ನು ಬಿಟ್ಟು ಕಾಲೇಜಿನಲ್ಲಿ ಮೂಲಸೌಕರ್ಯಗಳು ಇಲ್ಲ ಎಂದು ಹೇಳಿ ಹೆಚ್ಚಿನ ಪ್ರವೇಶಾತಿಗೆ ಕಡಿವಾಣ ಹಾಕಿರುವುದು ವಿದ್ಯಾರ್ಥಿ ವಿರೋಧಿ ಧೋರಣೆಯಾಗಿದ್ದು, ಈ ನಿರ್ಧಾರವನ್ನು ವಾಪಸ್ ಪಡೆಯಬೇಕು ಎಂದು ಆಗ್ರಹಿಸಿದರು.

ಪ್ರವೇಶಾತಿ ಕಡಿಮೆ ಮಾಡಿ ಖಾಸಗಿ ಕಾಲೇಜುಗಳಿಗೆ ದಾಖಲಾಗುವಂತೆ ನಿರ್ಧಾರ ತೆಗೆದುಕೊಂಡಿರುವುದು ವಿಶ್ವವಿದ್ಯಾಲಯದ ವ್ಯಾಪಾರಿ ಧೋರಣೆ ಎದ್ದು ಕಾಣುತ್ತಿದೆ. ಸರ್ಕಾರ ಹೇಳುವಂತೆ ಯಾವುದೇ ವಿದ್ಯಾರ್ಥಿ ಕೂಡ ಕಾಲೇಜಿಗೆ ಬಂದು ಪ್ರವೇಶಾತಿ ಕೇಳಿದರೆ, ಆ ವಿದ್ಯಾರ್ಥಿಗೆ ಪ್ರವೇಶಾತಿ ಕೊಟ್ಟು ಶಿಕ್ಷಣ ಪಡೆದುಕೊಳ್ಳುವಂತೆ ಮಾಡಬೇಕು ಎಂದು ಹೇಳುತ್ತದೆ.

ಇದಕ್ಕೆ ವಿರುದ್ಧವಾಗಿ ವಿವಿ ನಿರ್ಧಾರ ತೆಗೆದುಕೊಂಡಿರುವುದು, ಇದಕ್ಕೆ ಜಂಟಿ ನಿರ್ದೇಶಕಿ ವಿಜಯಲಕ್ಷ್ಮೀ ಅವರು ಕೂಡ ಒಪ್ಪಿಗೆ ಕೊಟ್ಟಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ವಿದ್ಯಾರ್ಥಿ ವಿರೋಧಿಗಳ ನಿಲುವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ವಿಶ್ವವಿದ್ಯಾನಿಲಯ ಹಾಗೂ ಸರ್ಕಾರವು ಮೂಲಸೌಕರ್ಯಗಳನ್ನು ಹೆಚ್ಚಿಸುವ ಜವಾಬ್ದಾರಿ ತೆಗೆದುಕೊಳ್ಳಬೇಕೇ ವಿನಾ ಈ ರೀತಿಯ ಶಿಕ್ಷಣ ವಿರೋಧಿ ನೀತಿ ತೆಗೆದುಕೊಳ್ಳಬಾರದು ಎಂದು ಒತ್ತಾಯಿಸಿದ್ದಾರೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net