ಪ್ರವೀಣ್ ಹತ್ಯೆಗೆ ಆಕ್ರೋಶ, ಜಿಲ್ಲಾ ಯುವ ಮೋರ್ಚಾದ 207 ಮಂದಿ ರಾಜೀನಾಮೆ
Published on:
Copied
Follow Us
ದಾವಣಗೆರೆ: ದಕ್ಷಿಣ ಕನ್ನಡ ಜಿಲ್ಲೆಯ ಬಿಜೆಪಿ ಯುವ ಮೋರ್ಚಾ ಕಾರ್ಯಕಾರಣಿ ಸದಸ್ಯ ಪ್ರವೀಣ್ ನೆಟ್ಟಾರು ಹತ್ಯೆಗೆ ಕಿಡಿ ಕಾರಿರುವ ಬಿಜೆಪಿ ಜಿಲ್ಲಾ ಮೋರ್ಚಾ ಹಾಗೂ ಎಲ್ಲ 8 ಮಂಡಲದ ಅಧ್ಯಕ್ಷರು ಸೇರಿ ಒಟ್ಟು 207 ಜನ ಸದಸ್ವತ್ವಕ್ಕೆ ರಾಜೀನಾಮೆ ನೀಡಿದ್ದಾರೆ.
ಬುಧವಾರ ಸಂಜೆ ಜಯದೇವ ವೃತ್ತದಲ್ಲಿ ಶ್ರದ್ಧಾಂಜಲಿ ಸಭೆ ನಡೆಸಿದ ಕಾರ್ಯಕರ್ತರು ಬಿಜೆಪಿ ಸರ್ಕಾರದ ಮೌನದ ಬಗ್ಗೆ ಆತಂಕ ವ್ಯಕ್ತಪಡಿಸಿದರು. ಹಿಂದುತ್ವದ ಮೇಲೆ ಅಧಿಕಾರಕ್ಕೆ ಬಂದ ಸರ್ಕಾರ ಕಾರ್ಯಕರ್ತರ ನಿರಂತರ ಕಗ್ಗೊಲೆಗೆ ಸೂಕ್ತ ಉತ್ತರ ನೀಡುತ್ತಿಲ್ಲ. ಹೀಗಾಗಿ ಜಿಹಾದಿಗಳ ಅಟ್ಟಹಾಸ ಮುಂದುವರಿದಿದೆ. ಹಂತಕರನ್ನು ಎನ್‌ಕೌಂಟರ್ ಮಾಡಬೇಕು. ಇಲ್ಲವಾದರೆ ಕಾರ್ಯಕರ್ತರೇ ಶಸ್ತ್ರಾಸ್ತ್ರ ಹಿಡಿದು ಪ್ರತ್ಯುತ್ತರ ನೀಡಬೇಕಾಗುತ್ತದೆ ಎಂದು ಎಚ್ಚರಿಸಿದರು.
ಸಿಎಂ ಹಾಗೂ ಗೃಹ ಮಂತ್ರಿಗಳು ಏನು ಮಾಡುತ್ತಿದ್ದಾರೆ ಎಂಬುದಾಗಿ ಕಾರ್ಯಕರ್ತರು ಪ್ರಶ್ನೆ ಕೇಳುತ್ತಿದ್ದಾರೆ. ಹೀಗಾಗಿ ಅನಿವಾರ್ಯವಾಗಿ ನಾವು ರಾಜೀನಾಮೆ ನೀಡುತ್ತಿದ್ದು, ಬಿಜೆಪಿ ಜಿಲ್ಲಾಧ್ಯಕ್ಷ ವೀರೇಶ್ ಹನಗವಾಡಿ ಅವರಿಗೆ ಪತ್ರ ಸಲ್ಲಿಸಲಾಗುವುದು ಎಂದು ಬಿಜೆಪಿ ಯುವ ಮೋರ್ಚಾ ಜಿಲ್ಲಾಧ್ಯಕ್ಷ ಆರ್.ಎಲ್. ಶಿವಪ್ರಕಾಶ್ ತಿಳಿಸಿದರು.
ಸಭೆಯಲ್ಲಿ ಮಾಜಿ ಮೇಯರ್ ಎಸ್.ಟಿ.ವೀರೇಶ್, ಶ್ರೀನಿವಾಸ ದಾಸಕರಿಯಪ್ಪ, ಎನ್.ರಾಜಶೇಖರ್, ಪಿ.ಸಿ.ಶ್ರೀನಿವಾಸ್, ಟಿಂಕರ್ ಮಂಜಣ್ಣ, ಶಿವನಗೌಡ ಪಾಟೀಲ್ ಇತರರಿದ್ದರು.