ಪ್ರವೀಣ್ ಹತ್ಯೆ ಖಂಡಿಸಿ ಬಿಜೆಪಿ ಪದಾಧಿಕಾರಿಗಳ ರಾಜೀನಾಮೆ

Published on

ಹಾಸನ: ಬಿಜೆಪಿ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ಖಂಡಿಸಿ, ಪಕ್ಷದ ವಿರುದ್ಧ ಅಸಮಾಧಾನದ ಕ್ರಮವಾಗಿ ವಿವಿಧ ಘಟಕಗಳ ಪದಾಧಿಕಾರಿಗಳು ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡುವ ಬೆಳವಣಿಗೆಗಳು ಜಿಲ್ಲೆಯಲ್ಲೂ ಮುಂದುವರಿದಿವೆ.
ಜಿಲ್ಲಾ ಬಿಜೆಪಿ ಯುವ ಮೋರ್ಚಾ ಖಂಜಾಚಿ ಯುವರಾಜ್ ಅವರು ಸರ್ಕಾರ ಮತ್ತು ಪಕ್ಷದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿ ಬುಧವಾರ ಸಂಜೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಗುರುವಾರ ಆ ಸಾಲಿಗೆ ಮತ್ತಷ್ಟು ಪದಾಧಿಕಾರಿಗಳು ಸೇರಿಕೊಂಡಿದ್ದಾರೆ.
ಬಿಜೆಪಿ ರಾಜ್ಯ ಪರಿಷತ್ ಸದಸ್ಯ ಎಚ್.ಎನ್. ನಾಗೇಶ್ ಅವರು ಗುರುವಾರ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ದೀನ ದಯಾಳ್ ಉಪಾಧ್ಯಾಯ, ಶಾಮ ಪ್ರಸಾದ್ ಮುಖರ್ಜಿ, ಅಟಲ್ ಬಿಹಾರಿ ವಾಜಪೇಯಿ, ಎಲ್.ಕೆ. ಆಡ್ವಾಣಿ ಅವರಂತಹ ಮಹಾನ್ ನಾಯಕರು ಕಟ್ಟಿದ ಪಕ್ಷದಲ್ಲಿ ಈ ರೀತಿಯ ಬೆಳವಣಿಗೆಗಳಾಗುತ್ತಿರುವುದು ದುರಂತ. ಹಿಂದುಗಳನ್ನು ಮತ್ತು ಪಕ್ಷದ ಕಾರ್ಯಕರ್ತರನ್ನು ಉಳಿಸಿಕೊಳ್ಳಲಾಗದ ಸ್ಥಿತಿ ತಲುಪಿರುವುದು ದುರದೃಷ್ಟಕರ ಎಂದು ಜಿಲ್ಲಾ ಬಿಜೆಪಿ ಅಧ್ಯಕ್ಷರಿಗೆ ಸಲ್ಲಿಸಿರುವ ರಾಜೀನಾಮೆ ಪತ್ರದಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಆಲೂರು-ಕಟ್ಟಾಯ ಮಂಡಲದ ಯುವ ಮೋರ್ಚಾ ಅಧ್ಯಕ್ಷ ಮತ್ತು ಪದಾಧಿಕಾರಿಗಳು ತಮ್ಮ ಸ್ಥಾನಗಳಿಗೆ ಸಾಮೂಹಿಕ ರಾಜೀನಾಮೆ ನೀಡಿದ್ದಾರೆ. ಆಲೂರು ಕಟ್ಟಾಯ ಮಂಡಲ ಅಧ್ಯಕ್ಷ ನಾಗರಾಜು ಹುಲ್ಲಹಳ್ಳಿ, ಉಪಾಧ್ಯಕ್ಷರು, ಪ್ರಧಾನ ಕಾರ್ಯದರ್ಶಿ, ಕಾರ್ಯದರ್ಶಿ ಸೇರಿದಂತೆ ಒಟ್ಟು 12 ಮಂದಿ ರಾಜೀನಾಮೆ ಸಲ್ಲಿಸಿದ್ದಾರೆ.
ಪ್ರವೀಣ್ ಹತ್ಯೆ ಹಿಂದೂ ಸಮಾಜಕ್ಕೆ ತುಂಬಲಾರದ ನಷ್ಟವಾಗಿದೆ. ಕೊಲೆಗಡುಕರನ್ನು ಕೂಡಲೇ ಬಂಧಿಸಿ ಕಠಿಣ ಕ್ರಮ ಕೈಗೊಳ್ಳಬೇಕು. ಮುಂದೆ ಇಂಥ ಘಟನೆ ಮರುಕಳಿಸದಂತೆ ಕ್ರಮವಹಿಸಬೇಕು ಎಂದು ಒತ್ತಾಯಿಸಿದ್ದಾರೆ.
ಅರಸೀಕೆರೆಯ ವಿವಿಧ ಪ್ರಕೋಷ್ಠಗಳ ಪದಾಧಕಾರಿಗಳು ಸಹ ರಾಜೀನಾಮೆ ನೀಡಿದ್ದಾರೆ. ಕಾರ್ಯಕರ್ತರಿಗೆ ಭದ್ರತೆ ನೀಡದ ಪಕ್ಷದಲ್ಲಿ ಇರುವುದು ಅವಮಾನ ಮತ್ತು ಅಪಾಯಕಾರಿ ಎಂಬುದನ್ನು ಮನಗಂಡು ರಾಜೀನಾಮೆ ನೀಡುತ್ತಿದ್ದೇವೆ ಎಂದು ಎಸ್.ಎಲ್.ಎನ್. ವಿಜಯಕುಮಾರ್ ಮತ್ತಿತರರು ರಾಜೀನಾಮೆ ಪತ್ರದಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net