

ಕೊಪ್ಪ: ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರ್ ಹತ್ಯೆ ಖಂಡಿಸಿ ವಿಶ್ವ ಹಿಂದು ಪರಿಷತ್, ಬಜರಂಗದಳ ಕರೆ ನೀಡಿದ್ದ ಕೊಪ್ಪ ಬಂದ್ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ಪಟ್ಟಣ, ಜಯಪುರ, ಬಸರೀಕಟ್ಟೆ ಭಾಗದಲ್ಲಿ ಅಂಗಡಿ ಮುಂಗ್ಗಟ್ಟುಗಳನ್ನು ಬಂದ್ ಮಾಡಲಾಗಿತ್ತು. ಬಜರಂಗದಳ ಕಾರ್ಯಕರ್ತರು ಬಸ್ ನಿಲ್ದಾಣದ ಮುಂಭಾಗ ಟೈಯರ್ಗೆ ಬೆಂಕಿ ಹಚ್ಚಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಭಟನಾ ಸಮಾವೇಶದಲ್ಲಿ ಬಜರಂಗದಳ ತಾಲೂಕು ಸಂಚಾಲಕ ರಾಕೇಶ್ ಹಿರೇಕೊಡಿಗೆ ಮಾತನಾಡಿ, ಹಿಂದು ಸಮಾಜ ಒಗ್ಗೂಡುವವರೆಗೆ ಇಂಥ ಹತ್ಯೆಗಳು ನಡೆಯುತ್ತಿರುತ್ತವೆ. ಮತಾಂಧ ಶಕ್ತಿಯ ವಿರುದ್ಧ ಹಿಂದುಗಳು ಜಾಗೃತಗೊಳ್ಳಬೇಕು ಎಂದು ಹೇಳಿದರು. ಹಿಂದುಗಳು ಶಾಂತವಾಗಿದ್ದ ಪರಿಣಾಮವಾಗಿ ಹತ್ಯೆಗಳು ನಡೆಯುತ್ತಿವೆ. ಕಾರ್ಯಕರ್ತನ ಜೀವಕ್ಕೆ ರಕ್ಷಣೆ ನೀಡುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ಆಪಾದಿಸಿದರು. ಬಜರಂಗದಳದ ಮಾಜಿ ಸಂಚಾಲಕ ಶರತ್ ಕಾರಂಗಿ ಮಾತನಾಡಿ, ಹಿಂದು ಕಾರ್ಯಕರ್ತರ ಬಲದಿಂದ ಅಧಿಕಾರಕ್ಕೆ ಬಂದ ಬಿಜೆಪಿ ಹಿಂದುತ್ವ ಉಳಿಸುತ್ತದೆ ಎಂಬ ನಂಬಿಕೆ ಹುಸಿಯಾಗಿದೆ ಎಂದರು. ಹರ್ಷನ ಹತ್ಯೆ ಮಾಡಿದವರು ಜೈಲಿನಲ್ಲಿ ರಾಜಾತಿಥ್ಯ ಪಡೆದಿದ್ದಾರೆ. ಬಿಜೆಪಿ ಸರ್ಕಾರ ಹಿಂದು ಕಾರ್ಯಕರ್ತರ ಹತ್ಯೆಯ ರಕ್ತವನ್ನು ಹಚ್ಚಿಕೊಂಡು ಆಳ್ವಿಕೆ ನಡೆಸುತ್ತಿದೆ. ಆರಗ ಜ್ಞಾನೇಂದ್ರ ಅವರನ್ನು ಗೃಹಮಂತ್ರಿಯಾಗಿ ಮುಂದುವರಿಸುವುದು ಬೇಡ ಎಂದು ಆಗ್ರಹಿಸಿದರು.</p>