

ಮೈಸೂರು: ದಕ್ಷಿಣ ಕನ್ನಡ ಜಿಲ್ಲೆಯ ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ಖಂಡಿಸಿ ಪಕ್ಷದ ಕಾರ್ಯಕರ್ತರು ಗುರುವಾರ ಪ್ರತಿಭಟನೆ ನಡೆಸಿದರು.
ನಗರದ ಗಾಂಧಿ ವೃತ್ತದಲ್ಲಿ ಜಮಾವಣೆಗೊಂಡ ಪ್ರತಿಭಟನಾಕಾರರು ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಹಿಂದುಗಳ ಮೇಲೆ ನಿರಂತರ ದಾಳಿ ನಡೆಯುತ್ತಿರುವುದು ಖಂಡನೀಯ. ಹಿಂದು ಮತ್ತು ಬಿಜೆಪಿ ಕಾರ್ಯಕರ್ತರ ಮೇಲೆ ಹಲ್ಲೆ ಮತ್ತು ಹತ್ಯೆ ಮಾಡಿ ನಮ್ಮ ಧ್ವನಿ ಅಡಗಿಸಲು ಸಾಧ್ಯವಿಲ್ಲ. ಸರ್ಕಾರ ಇನ್ನಷ್ಟು ಚುರುಕಾಗಬೇಕು. ಬಿಜೆಪಿ, ಹಿಂದು ಕಾರ್ಯಕರ್ತರಿಗೆ ರಕ್ಷಣೆ ನೀಡಬೇಕು. ಅಲ್ಲದೆ, ಸಮಾಜಘಾತುಕರ ವಿರುದ್ಧ ಕಟ್ಟೆಚ್ಚರ ವಹಿಸಬೇಕು ಎಂದು ಒತ್ತಾಯಿಸಿದರು
ರಾಜ್ಯದಲ್ಲಿ ನಮ್ಮದೇ ಸರ್ಕಾರವಿದ್ದು, ಮುಖ್ಯಮಂತ್ರಿ, ಗೃಹಸಚಿವರು ಪೊಲೀಸ್ ಅಧಿಕಾರಿಗಳಿಗೆ ಹೆಚ್ಚಿನ ಅಧಿಕಾರ ನೀಡಿ ಸೂಕ್ತ ತನಿಖೆ ನಡೆಸಬೇಕು. ತಪ್ಪಿತಸ್ಥರನ್ನು ಬಂಧಿಸಿ ಕಠಿಣ ಶಿಕ್ಷೆ ನೀಡಬೇಕು. ಅಪರಾಧಿಗಳನ್ನು ಶಿಕ್ಷಿಸಬೇಕು. ಭವಿಷ್ಯದಲ್ಲಿ ಈ ರೀತಿಯ ಘಟನೆ ಮರುಕಳಿಸದಂತೆ ಮುನ್ನೆಚ್ಚರಿಕೆ ವಹಿಸಬೇಕು ಎಂದು ಆಗ್ರಹಿಸಿದರು.
ಮೇಯರ್ ಸುನಂದಾ ಪಾಲನೇತ್ರ, ಪಾಲಿಕೆ ಸದಸ್ಯ ಶಿವಕುಮಾರ್, ಬಿಜೆಪಿ ನಗರಾಧ್ಯಕ್ಷ ಶ್ರೀವತ್ಸ, ಜಿಲ್ಲಾಧ್ಯಕ್ಷೆ ಮಂಗಳಾ ಸೋಮಶೇಖರ್, ಮೈಸೂರು ವಿಭಾಗೀಯ ಪ್ರಭಾರಿ ಮೈ.ವಿ.ರವಿಶಂಕರ್, ಮಾಜಿ ಮೇಯರ್ ಸಂದೇಶ್ ಸ್ವಾಮಿ, ಮುಖಂಡರಾದ ಅನಿಲ್ ಥಾಮಸ್, ಸೋಮಸುಂದರ್, ಜಯಪ್ರಕಾಶ್, ಬಿ.ಎಂ.ರಘು, ಸು.ಮುರಳಿ, ಗಿರಿಧರ್, ಎಲ್.ಆರ್.ಮಹದೇವಸ್ವಾಮಿ ಸೇರಿದಂತೆ ಹಲವರು ಭಾಗವಹಿಸಿದ್ದರು.