ಪ್ರವಾಹಬಂದರೂ ತುಂಬದ ಅಮಾನಿಕೆರೆ!

06-GPT-4-NALLURU AMNI JALASHAYA
ಪ್ರವಾಹಬಂದರೂ ತುಂಬದ ಅಮಾನಿಕೆರೆ!
Published on

ಗುಂಡ್ಲುಪೇಟೆ: ಕೆಲವು ದಿನಗಳಿಂದ ಗುಂಡ್ಲು ನದಿ ಪಾತ್ರದಲ್ಲಿ ಉತ್ತಮ ಮಳೆ ಬೀಳುತ್ತಿರುವ ಪರಿಣಾಮ ಹಲವಾರು ವರ್ಷಗಳಿಂದ ತುಂಬದ ಕೆರೆಕಟ್ಟೆಗಳು ಕೋಡಿ ಬೀಳುತ್ತಿದ್ದರೂ ತಾಲೂಕಿನ ಏಕೈಕ ಜಲಾಶಯವಾದ ನಲ್ಲೂರು ಅಮಾನಿ ಕೆರೆಗೆ ಮಾತ್ರ ನೀರು ಹರಿಯದಿರುವುದು ಈ ಭಾಗದ ಜನರಲ್ಲಿ ನಿರಾಸೆ ಮೂಡಿಸಿದೆ.


ತಾಲೂಕಿನ ತೆರಕಣಾಂಬಿ, ಬೇಗೂರು ಹಾಗೂ ಹಂಗಳ ಹೋಬಳಿಯ ಕೆರೆಗಳಿಗೆ ನದಿ ಮೂಲದಿಂದ ನೀರು ತುಂಬಿಸುತ್ತಿರುವ ಪರಿಣಾಮ ಬಹುತೇಕ ಪ್ರದೇಶಗಳಲ್ಲಿ ಅಂತರ್ಜಲಮಟ್ಟ ವೃದ್ಧಿಯಾಗಿದೆ. ಅಲ್ಲದೆ, ನಿರಂತರ ಮಳೆಯಿಂದ ಭೂಮಿ ತನಗೆ ಅಗತ್ಯವಾದ ಪ್ರಮಾಣದಲ್ಲಿ ನೀರು ಕುಡಿದಿರುವುದರಿಂದ ಮಳೆನೀರು ಹರಿದು ಹೋಗುತ್ತಿದೆ.


ಗುಂಡ್ಲು ನದಿ ಪಾತ್ರದ ಪೂರ್ವ ಹಾಗೂ ಉತ್ತರಾರ್ಧ ಭಾಗಗಳಲ್ಲಿ ದೊಡ್ಡ ಪ್ರಮಾಣದ ನೀರು ಹರಿಯುತ್ತಿದೆ. ಈಗಾಗಲೇ ಗೋಪಾಲಸ್ವಾಮಿ ಬೆಟ್ಟದ ತಪ್ಪಲಿನ ಹಿರೀಕೆರೆ ಹಾಗೂ ದೊಡ್ಡಕೆರೆಗಳು ತುಂಬಿದ ನೀರು ಮತ್ತು ಇತ್ತ ಬೇರಂಬಾಡಿಯ ಕೆಂಪುಸಾಗರ ಕೆರೆ, ಕಣ್ಣೇಗಾಲ ಕೆರೆ ತುಂಬಿ 250 ಎಕರೆ ವಿಸ್ತೀರ್ಣದ ಮಲ್ಲಯ್ಯನಪುರ ಕೆರೆಗೆ ಹರಿದು ಕೋಡಿ ಬಿದ್ದು ಪಟ್ಟಣದ ವಿಜಯಪುರ ಅಮಾನಿ ಕೆರೆಗೆ ನೀರು ಹರಿಯುತ್ತಿದೆ. ಬೇಗೂರು ಹೋಬಳಿಯ ಕೋಟೆಕೆರೆ ಕೆರೆ, ಬೆಳಚಲವಾಡಿ ಕೆರೆಗಳು ತುಂಬಿ ಕಮರಹಳ್ಳಿ ಮಾರ್ಗವಾಗಿ ಗುಂಡ್ಲು ಪಾತ್ರಕ್ಕೆ ಸೇರುತ್ತಿದೆ. ಚಿಕ್ಕಾಟಿ ಹಾಗೂ ತೊಂಡವಾಡಿ ಕೆರೆಗಳಲ್ಲಿ ಕೋಡಿ ಬಿದ್ದ ನೀರು ನಂಜನಗೂಡು ತಾಲೂಕಿನ ಬಾಗೂರು ಕಿರು ಅಣೆಕಟ್ಟೆಗೆ ಹರಿದು 28 ವರ್ಷಗಳ ನಂತರ ಕೋಡಿ ಬಿದ್ದು ದೊಡ್ಡಪ್ರಮಾಣದ ನೀರು ಕಬಿನಿಯತ್ತ ಭೋರ್ಗರೆದು ಹೋಗುತ್ತಿದೆ.


ಆದರೆ, ಇವುಗಳ ನಡುವೆಯಿರುವ ನಲ್ಲೂರು ಅಮಾನಿ ಕೆರೆ ಜಲಾಶಯಕ್ಕೆ ಮಾತ್ರ ಸ್ವಲ್ಪವೂ ನೀರು ಬಂದಿಲ್ಲದಿರುವುದು ಈ ಭಾಗದ ರೈತರ ಹತಾಶೆಗೆ ಕಾರಣವಾಗಿದೆ. ತಾಲೂಕಿನ ನಲ್ಲೂರು ಅಮಾನಿ ಜಲಾಶಯ ಗುಂಡ್ಲುಹೊಳೆಗೆ ಗೋಪಾಲಸ್ವಾಮಿಬೆಟ್ಟ, ಪಾರ್ವತಿ ಬೆಟ್ಟ, ಅರಣ್ಯಪ್ರದೇಶದಿಂದ ಹರಿದುಬರುತ್ತಿದ್ದ ನೀರಿನ ಮೂಲಗಳು ಬಂದ್ ಆಗಿದ್ದರಿಂದ ಜಲಾಶಯ ಕಳೆದ 25 ವರ್ಷಗಳಿಂದ ಬರಿದಾಗಿದೆ.


ಮಳೆಗಾಲದಲ್ಲಿ ತನ್ನ ಪಾತ್ರದಲ್ಲಿ ಸುಮಾರು ಅರ್ಧ ಕಿಲೋಮೀಟರ್ ಅಗಲಕ್ಕೆ ಭೋರ್ಗರೆದು ಹರಿಯುತ್ತಿದ್ದ ಗುಂಡ್ಲು ಹೊಳೆ ನೀರನ್ನು ವ್ಯವಸಾಯಕ್ಕೆ ಬಳಸಿಕೊಳ್ಳಲು ಅಂದಿನ ಶಾಸಕಿ ದಿ.ಕೆ.ಎಸ್. ನಾಗರತ್ನಮ್ಮ ನಳೂರು ಸಮೀಪ 400 ಎಕರೆ ವಿಸ್ತೀರ್ಣದಲ್ಲಿ 5.5 ಕೋಟಿ ರೂ. ವೆಚ್ಚದಲ್ಲಿ ಜಲಾಶಯ ನಿರ್ಮಿಸಿದ್ದರು. 4,500 ಎಕರೆ ಭೂಮಿಗೆ ನೀರುಣಿಸುತ್ತಿದ್ದ ಈ ಜಲಾಶಯ 1984ರಲ್ಲಿ ಒಮ್ಮೆ ಮಾತ್ರ ತುಂಬಿತ್ತು. 1994ರಲ್ಲಿ ಹೆಚ್ಚಿನ ನೀರು ಬಂದಿತ್ತು. ನಂತರ ನದಿಪಾತ್ರದಲ್ಲಿ ಒತ್ತುವರಿ, ಮರಳುಗಾರಿಕೆ, ಅವೈಜ್ಞಾನಿಕವಾಗಿ ಚೆಕ್ ಡ್ಯಾಂ ನಿರ್ಮಾಣ ಮುಂತಾದ ಕಾರಣಗಳಿಂದ ನೀರು ತುಂಬಲಿಲ್ಲ.

ಸದ್ಯ ಕೆರೆಗಳಿಗೆ ನೀರು ತುಂಬಿಸುವ ಯೋಜನೆಯಲ್ಲಿ ತೆರಕಣಾಂಬಿ, ಬೇಗೂರು ಹಾಗೂ ಹಂಗಳ ಹೋಬಳಿಯ ಹಲವಾರು ಕೆರೆಗಳಿಗೆ ನೀರು ತುಂಬಿಸಲಾಗಿದೆ. ಆದರೆ, ಸುಮಾರು ಇಪ್ಪತ್ತು ಗ್ರಾಮಗಳಿಗೆ ನೀರಿನ ಮೂಲವಾದ ನಲ್ಲೂರು ಅಮಾನಿ ಜಲಾಶಯಕ್ಕೆ ನೀರು ತುಂಬಿಸದ ಪರಿಣಾಮ ಸಾವಿರಾರು ಅಡಿ ಕೊರೆಸಿದರೂ ಕೊಳವೆ ಬಾವಿಗಳಲ್ಲಿ ನೀರಿಲ್ಲವಾಗಿದೆ. ಜಲಾಶಯ ನಿರ್ಮಾಣಕ್ಕೆ ಸಾವಿರಾರು ರೈತರು ತಮ್ಮ ಜಮೀನುಗಳನ್ನು ಬಿಟ್ಟುಕೊಟ್ಟಿದ್ದರೂ ನೀರುಣಿಸದ ಪರಿಣಾಮ ಅತಂತ್ರರಾಗಿದ್ದಾರೆ. ಅದ್ದರಿಂದ ಇನ್ನಾದರೂ ಜಲಾಶಯದಲ್ಲೇ ನೀರು ಹರಿಸಲು ಕ್ರಮಕೈಗೊಳ್ಳಬೇಕು.
ಕಾತ್ಯಾಯಿನಿ, ವೀರನಪುರ ಗ್ರಾಮಸ್ಥೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net