

ಧಾರವಾಡ: ತಾಲೂಕಿನ ಹಾರೋಬೆಳವಡಿ ಬಳಿ ತುಂಡಾದ ಸೇತುವೆ ಪಕ್ಕದ ತಾತ್ಕಾಲಿಕ ರಸ್ತೆಯಲ್ಲಿ ಸಂಭವಿಸಬಹುದಾಗಿದ್ದ ದುರಂತವೊಂದು ಕೂದಲೆಳೆ ಅಂತರದಲ್ಲಿ ತಪ್ಪಿದೆ. ಶನಿವಾರ ನಡೆದ ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಕಳೆದ ವರ್ಷದ ಭಾರಿ ಮಳೆಗೆ ಹಾರೋಬೆಳವಡಿ- ಇನಾಮಹೊಂಗಲ ಮಧ್ಯದ ಬೃಹತ್ ಸೇತುವೆ ತುಂಡಾಗಿತ್ತು. ಧಾರವಾಡ- ಸವದತ್ತಿ ಸಂರ್ಪಸುವ ರಾಜ್ಯ ಹೆದ್ದಾರಿ ಇದಾಗಿದ್ದು, ವಾಹನಗಳ ಸಂಚಾರಕ್ಕೆ ಸೇತುವೆ ಪಕ್ಕದಲ್ಲಿ ತಾತ್ಕಾಲಿಕ ರಸ್ತೆ ನಿರ್ವಿುಸಲಾಗಿದೆ.
ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ತಾತ್ಕಾಲಿಕ ರಸ್ತೆ ಮೇಲೆ ನೀರು ಹರಿಯುತ್ತಿದೆ. ಸವದತ್ತಿ ಕಡೆಯಿಂದ ಧಾರವಾಡಕ್ಕೆ ಬರುತ್ತಿದ್ದ ಸಾರಿಗೆ ಸಂಸ್ಥೆಯ ಬಸ್ ಚಾಲಕ ಹರಿಯುತ್ತಿದ್ದ ನೀರಲ್ಲೇ ಚಲಾಯಿಸಿದ್ದಾನೆ. ಬಸ್ನಲ್ಲಿ 50ರಷ್ಟು ಪ್ರಯಾಣಿಕರಿದ್ದರು ಎನ್ನಲಾಗಿದೆ.
ಪ್ರವಾಹ ಬಂದಿದ್ದರಿಂದ ಹತ್ತಾರು ಜನ ಸೇತುವೆ ಮೇಲೆ ನಿಂತು ನೋಡುತ್ತಿದ್ದರು. ಪ್ರವಾಹ ಲೆಕ್ಕಿಸದ ಚಾಲಕ ಹುಂಬತನದಿಂದ ಸೆಳವಿನಲ್ಲಿ ಬಸ್ ಚಲಾಯಿಸಿದ್ದಾನೆ. ಪ್ರಯಾಣಿಕರ ಜೀವ ಪಣಕ್ಕಿಟ್ಟು ಬಸ್ ಚಲಾಯಿಸಿದಾಗ ಅರ್ಧ ಸಾಗಿ ಹದಗೆಟ್ಟ ರಸ್ತೆಯಲ್ಲಿ ನಿಂತಿದೆ. ಈ ವೇಳೆ ಭಯಭೀತರಾದ ಪ್ರಯಾಣಿಕರು ಬಾಯಿ ಬಡಿದುಕೊಂಡಿದ್ದಾರೆ. ಕೊನೆಗೆ ಚಾಲಕ ಬಸ್ಅನ್ನು ಇನ್ನೊಂದು ಭಾಗಕ್ಕೆ ಸುರಕ್ಷಿತವಾಗಿ ತೆಗೆದುಕೊಂಡು ಹೋಗುವಲ್ಲಿ ಯಶಸ್ವಿಯಾಗಿದ್ದಾನೆ. ಒಳಗಡೆ ಇದ್ದ ಪ್ರಯಾಣಿಕರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.