

ಅಂಟೋನಿ ಸಿದ್ದಾಪುರ
ಕೊಡಗು: ಸಿದ್ದಾಪುರ ಹಾಗೂ ನೆಲ್ಲಿಹುದಿಕೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಾವೇರಿ ನದಿ ಪ್ರವಾಹದಿಂದ ಸೂರು ಕಳೆದುಕೊಂಡಿರುವ ಸಂತ್ರಸ್ತರು ಈಗಲೂ ಆತಂಕದಲ್ಲಿ ದಿನ ದೂಡುವಂತಾಗಿದೆ.
2018 ಹಾಗೂ 2019ರಲ್ಲಿ ಸುರಿದ ಭಾರಿ ಮಳೆಗೆ ಕಾವೇರಿ ತುಂಬಿ ಹರಿದ ಪರಿಣಾಮ ವಿರಾಜಪೇಟೆ ತಾಲೂಕಿನ ಸಿದ್ದಾಪುರ ವ್ಯಾಪ್ತಿಯ ಕರಡಿಗೋಡು, ಗುಹ್ಯ ಹಾಗೂ ಸೋಮವಾರಪೇಟೆ ತಾಲೂಕಿನ ನೆಲ್ಲಿಹುದಿಕೇರಿ ಬೆಟ್ಟದ ಕಾಡು, ಬರಡಿ, ಕುಂಬಾರ ಗುಂಡಿ, ನದಿ ದಡದ ಪ್ರದೇಶಗಳಲ್ಲಿನ ಊರುಗಳಲ್ಲಿ ಮನೆಗಳು ನೆಲಸಮವಾಗಿದ್ದವು. ಇದರಿಂದಾಗಿ ನೂರಾರು ಕುಟುಂಬಗಳು ಬೀದಿಗೆ ಬಂದಿದ್ದವು.
ಬಳಿಕ ಸರಕಾರ ಸಂತ್ರಸ್ತರಿಗೆ ಪರಿಹಾರ ಕೇಂದ್ರದಲ್ಲಿ ತಾತ್ಕಾಲಿಕ ವಸತಿ ವ್ಯವಸ್ಥೆಯನ್ನು ಮಾಡಿ ಸರ್ಕಾರದ ವತಿಯಿಂದ ನಿವೇಶನ ಹಾಗೂ ಸೂರು ನೀಡುವುದಾಗಿ ಭರವಸೆ ನೀಡಿತ್ತು. ಆದರೆ, 5 ವರ್ಷ ಕಳೆದರೂ ಸಂತ್ರಸ್ತರಿಗೆ ಶಾಶ್ವತ ಸೂರು ಎನ್ನುವುದು ಗಗನ ಕುಸುಮವಾಗಿಯೇ ಉಳಿದುಕೊಂಡಿದೆ. ಇದರಿಂದ ಅನಿಶ್ಚಿತತೆಯಲ್ಲಿ ಬದುಕು ಸಾಗಿಸುವ ಪರಿಸ್ಥಿತಿ ಸಂತ್ರಸ್ತರದಾಗಿದೆ.
ಪ್ಲಾಸ್ಟಿಕ್ ಶೆಡ್‌ಗಳಲ್ಲೇ ವಾಸ: ಮನೆ ಕಳೆದುಕೊಂಡ ಸಂತ್ರಸ್ತರು ಈ ಹಿಂದೆ ತಮ್ಮ ಮನೆಗಳಿದ್ದ ಜಾಗದಲ್ಲಿ ಪ್ಲಾಸ್ಟಿಕ್ ಹೊದಿಕೆಯ ಶೆಡ್‌ಗಳನ್ನು ನಿರ್ಮಿಸಿಕೊಂಡು ಜೀವನ ಸಾಗಿಸುತ್ತಿದ್ದಾರೆ. ನೂರಾರು ಮನೆಗಳಲ್ಲಿ ಗೋಡೆ ಬಿರುಕು ಬಿದ್ದು ವಾಸಕ್ಕೆ ಯೋಗ್ಯವಲ್ಲದ ಅಪಾಯಕಾರಿ ಸ್ಥಿತಿಯಲ್ಲಿವೆ. ಕೆಲವು ಸಂತ್ರಸ್ತರು ಬಾಡಿಗೆ ಮನೆಯಲ್ಲಿ ವಾಸವಾಗಿದ್ದು, ಇದುವರೆಗೂ ಬಾಡಿಗೆ ಹಣ ಕೂಡ ಸಿಕ್ಕಿಲ್ಲ. ಈ ಭಾಗದಲ್ಲಿ ಬಹುತೇಕರು ಕೂಲಿ ಕಾರ್ಮಿಕರಾಗಿದ್ದು, ಸ್ವಂತ ಸೂರು ಎಂಬುದು ದೂರದ ಮಾತಾಗಿಯೇ ಉಳಿದಿದೆ.
ಹಂಚಿಕೆ ಆಗದ ನಿವೇಶನ: ನೆಲ್ಲಿಹುದಿಕೇರಿ ವ್ಯಾಪ್ತಿಯ ಸಂತ್ರಸ್ತರಿಗೆ ಅಬ್ಯತ್‌ಮಂಗಲ ಗ್ರಾಮದಲ್ಲಿ ಒತ್ತುವರಿಯಾಗಿದ್ದ 8 ಎಕರೆ ಜಾಗವನ್ನು ಜಿಲ್ಲಾಡಳಿತ ತೆರವುಗೊಳಿಸಿ ಸಂತ್ರಸ್ತರಿಗೆ ಪುನರ್‌ವಸತಿ ಕಲ್ಪಿಸಲು ಮೀಸಲಿಟ್ಟಿತ್ತು. ಆದರೆ, ವರ್ಷಗಳು ಉರುಳಿದರೂ ನಿವೇಶನ ಹಂಚಿಕೆ ಆಗಿಲ.್ಲ ಸಂತ್ರಸ್ತರಿಗೆ ನೀಡಲು ಗುರುತಿಸಿರುವ ಜಾಗ ನಿರ್ವಹಣೆ ಇಲ್ಲದೆ ಗಿಡಗಂಟಿಗಳು ಬೆಳೆದು ಕಾಡಿನಂತಾಗಿದೆ. ಈ ಜಾಗಕ್ಕೆ ತೆರಳುವ ಮಾರ್ಗದಲ್ಲಿ ತೋಡು ಇದ್ದು, ಕಾಮಗಾರಿ ಮುಕ್ತಾಯದ ಹಂತದಲ್ಲಿದೆ. ಆದರೆ, ನಿವೇಶನ ನಿರ್ಮಾಣಕ್ಕೆ ಸಂಬಂಧಿಸಿದಂತೆ ಯಾವುದೇ ಕೆಲಸಗಳು ನಡೆದಿಲ್ಲ.
ಸಿದ್ದಾಪುರ ವ್ಯಾಪ್ತಿಯ ಸಂತ್ರಸ್ತರಿಗೆ ಮಾಲ್ದಾರೆಯ ಸರ್ವೇ ನಂಬರ್ 72/15ರ ಸುಮಾರು 10.60 ಏಕರೆ ಖಾಸಗಿ ಜಾಗ ಖರೀದಿಸುವ ಪ್ರಸ್ತಾಪನೆಯನ್ನು ಸರಕಾರಕ್ಕೆ ಕಳುಹಿಸಲಾಗಿದೆ. ಆದರೆ, ಜಿಲ್ಲಾಡಳಿತ ಇದುವರೆಗೂ ಪೈಸಾರಿ ಜಾಗವನ್ನು ಗುರುತಿಸಿ ನಿವೇಶನ ನೀಡಲು ಯಾವುದೇ ಕ್ರಮ ಕೈಗೊಂಡಿಲ್ಲ. ನೂತನ ಜಿಲ್ಲಾಧಿಕಾರಿ, ಜನಪ್ರತಿನಿಧಿಗಳು ಹಾಗೂ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ನಿವೇಶನ ನಿರ್ಮಾಣಕ್ಕೆ ಮುಂದಾಗಬೇಕೆಂದು ಸಂತ್ರಸ್ತರು ಒತ್ತಾಯಿಸಿದ್ದಾರೆ.
ರಾಷ್ಟ್ರಪತಿಗೆ ಪತ್ರ ಬರೆದ ಸಂತ್ರಸ್ತೆ
ಪ್ರವಾಹದಲ್ಲಿ ಮನೆ ಕಳೆದುಕೊಂಡು ಪುನರ್ ವಸತಿ ಕೋರಿ ಸಂಬಂಧಪಟ್ಟ ಇಲಾಖೆಗೆ ಹಲವು ಅರ್ಜಿಗಳನ್ನು ಸಲ್ಲಿಸಿದ್ದರೂ ಪ್ರಯೋಜನವಾಗದ ಕಾರಣ ಸಂತ್ರಸ್ತೆಯೊಬ್ಬರು ರಾಷ್ಟ್ರಪತಿಗೆ ಪತ್ರ ಬರೆದಿದ್ದಾರೆ. ತನಗೆ ಮನೆ ನಿರ್ಮಿಸಿ ಕೊಡಿ, ಇಲ್ಲವಾದರೆ ಆತ್ಮಹತ್ಯೆಗೆ ಅವಕಾಶ ಮಾಡಿಕೊಡಿ ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಪತ್ರದಲ್ಲಿ ತಿಳಿಸಿದ್ದರು. ಈ ಹಿನ್ನೆಲೆಯಲ್ಲಿ ದೆಹಲಿಯಿಂದ ಅಧಿಕಾರಿಗಳು ಸಂತ್ರಸ್ತೆಗೆ ದೂರವಾಣಿ ಕರೆ ಮಾಡಿ ಮಾಹಿತಿ ಪಡೆದುಕೊಂಡಿದ್ದಾರೆ. ಅಲ್ಲದೆ, ಈ ಸಂಬಂಧ ಮಾಹಿತಿ ನೀಡುವಂತೆ ಜಿಲ್ಲಾಧಿಕಾರಿಗೂ ಸೂಚನೆ ನೀಡಲಾಗಿದೆ. ನೂತನ ಜಿಲ್ಲಾಧಿಕಾರಿ ವೆಂಕಟ್‌ರಾಜ ಅವರು ಸಂತ್ರಸ್ತೆಯ ಮಾಹಿತಿಯನ್ನು ಪಡೆದುಕೊಂಡಿದ್ದಾರೆ.
ಸಂತ್ರಸ್ತರ ಪುನರ್ವಸತಿಗಾಗಿ ಮಾಲ್ದಾರೆಯಲ್ಲಿ ಖರೀದಿ ಮಾಡಲು ಉದ್ದೇಶಿಸಿರುವ ಜಾಗ ಅರಣ್ಯ ಪ್ರದೇಶವಾಗಿದೆ. ಕಸ್ತೂರಿ ರಂಗನ್ ವರದಿ ಸೇರಿದಂತೆ ಅರಣ್ಯ ಕಾನೂನುಗಳಿಗೆ ಒಳಪಡುವ ಪ್ರದೇಶವಾಗಿದೆ. ವರ್ಷಪೂರ್ತಿ ಭಯದಲ್ಲಿ ಬದುಕು ನಡೆಸಬೇಕಾದ ಪರಿಸ್ಥಿತಿ ಎದುರಿಸಬೇಕಾಗುತ್ತದೆ.
-ಯುಮುನಾ, ನಿರಾಶ್ರಿತರ ಹೋರಾಟ ಸಮಿತಿ ಅಧ್ಯಕ್ಷೆ
ಚುನಾವಣೆ ಸಂದರ್ಭದಲ್ಲಿ ನಿರಾಶ್ರಿತರ ಬಗ್ಗೆ ಕಾಳಜಿ ತೋರುವ ಜನಪ್ರತಿನಿಧಿಗಳು ನಂತರ ನಮ್ಮನ್ನು ಮರೆತುಬಿಡುತ್ತಾರೆ.ಲೋಕಸಭೆ ಚುನಾವಣೆಗೂ ಮುಂಚಿತವಾಗಿ ನಮಗೆ ಮನೆ ಸಿಗದಿದ್ದರೆ ಮತದಾನವನ್ನು ಬಹಿಷ್ಕಾರ ಮಾಡುವ ನಿರ್ಧಾವನ್ನು ಕೈಗೊಳ್ಳಬೇಕಾಗುತ್ತದೆ.
- ಪ್ರೇಮಾ, ಸಂತ್ರಸ್ತೆ
ಪ್ರವಾಹ ಸಂತ್ರಸ್ತರಿಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಮಾಲ್ದಾರೆಯ ಸರ್ವೇ ನಂಬರ್ 72/15ರ ಸುಮಾರು 10.60 ಎಕರೆಯಷ್ಟು ಖಾಸಗಿ ಜಾಗವನ್ನು ಖರೀದಿಸುವ ಸಂಬಂಧ ಪ್ರಸ್ತಾಪನೆಯನ್ನು ಸರಕಾರಕ್ಕೆ ಕಳುಹಿಸಿಕೊಡಲಾಗಿದೆ.
- ರಾಮಚಂದ್ರ, ತಹಸೀಲ್ದಾರ್, ವಿರಾಜಪೇಟೆ ತಾಲೂಕು
ಪ್ರವಾಹ ಸಂದರ್ಭದಲ್ಲಿ ಮನೆ ಕಳೆದುಕೊಂಡು ಬಾಡಿಗೆ ಮನೆಯಲ್ಲಿ ವಾಸವಾಗಿದ್ದು, ಬಾಡಿಗೆ ನೀಡಲಾಗದೆ ಪುನರ್ ವಸತಿ ಕೋರಿ ರಾಷ್ಟ್ರಪತಿಗೆ ದಯಾಮರಣ ಪತ್ರ ಕಳಿಸಲಾಗಿತ್ತು. ಸಮಸ್ಯೆ ಬಗ್ಗೆ ಮಾಹಿತಿ ಕೇಳಿದ್ದು, ಸೂರು ದೊರಕುವ ವಿಶ್ವಾಸ ಮೂಡಿದೆ.
-ಶಾಂತಾ, ದಯಾಮರಣ ಪತ್ರ ಬರೆದಿದ್ದ ಸಂತ್ರಸ್ತೆ
ಪ್ರವಾಹಕ್ಕೆ ತುತ್ತಾಗಿ ಮನೆ-ಆಸ್ತಿ ಕಳೆದುಕೊಂಡು ಸಂಕಷ್ಟದಲ್ಲಿರುವ ಕುಟುಂಬಗಳಿಗೆ ಶಾಶ್ವತ ಸೂರು ಕಲ್ಪಿಸುವಲ್ಲಿ ಆಡಳಿತ ವಿಫಲವಾಗಿದೆ. ಈಗಾಗಲೇ ಗುರುತಿಸಿರುವ ಜಾಗ ನಿರ್ವಹಣೆ ಇಲ್ಲದೆ ಅಲ್ಲಿ ಕಾಡು ಗಿಡಗಳು ಬೆಳೆದು ನಿಂತಿವೆ. ನಿವೇಶನ ನಿರ್ಮಾಣಕ್ಕೆ ಸಂಬಂಧಿಸಿದಂತೆ ಯಾವುದೇ ಕಾಮಗಾರಿ ಇನ್ನೂ ಆರಂಭಗೊಳ್ಳದಿರುವುದು ನೋವಿನ ಸಂಗತಿ.
- ಕೃಷ್ಣ, ಸಾಮಾಜಿಕ ಕಾರ್ಯಕರ್ತ