

ವಿಜಯವಾಣಿ ಸುದ್ದಿಜಾಲ ಗದಗ
ರಾಜ್ಯ ಸೇರಿದಂತೆ ಜಿಲ್ಲೆಯಲ್ಲಿ ಕೆಲವು ದಿನಗಳಿಂದ ಮಳೆ ಸುರಿಯುತ್ತಿದ್ದು ಯಾವುದೇ ಸಂದರ್ಭದಲ್ಲಾದರೂ ಸಹ ಪ್ರವಾಹ ಪರಿಸ್ಥಿತಿ ಎದುರಾಗಬಹುದು. ಪ್ರವಾಹ ಪರಿಸ್ಥಿತಿ ನಿಭಾವಣೆಗಾಗಿ ನಿಯೋಜಿಸಲಾದ ಅಧಿಕಾರಿಗಳು ಯುದ್ಧೋಪಾದಿಯಲ್ಲಿ ಕಾರ್ಯನಿರ್ವಹಿಸುವ ಮೂಲಕ ಜನಜಾನುವಾರು ಜೀವ ಹಾನಿ ತಪ್ಪಿಸಲು ಮುಂದಾಗಬೇಕು ಎಂದು ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್. ತಿಳಿಸಿದರು.
ಜಿಲ್ಲಾಧಿಕಾರಿಗಳ ಕಾರ್ಯಾಲಯದಲ್ಲಿ ಗುರುವಾರ ಆಯೋಜಿಸಿದ್ದ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಪ್ರವಾಹ ಎದುರಾಗಬಹುದಾದ ತಾಲೂಕುಗಳಲ್ಲಿ ಈಗಾಗಲೇ ಗ್ರಾಮಗಳನ್ನು ಗುರುತಿಸಲಾಗಿದೆ. ಈ ಗ್ರಾಮಗಳಲ್ಲಿ ಪ್ರವಾಹ ಪರಿಸ್ಥಿತಿ ತಲೆದೋರಿದರೆ ತಕ್ಷಣ ನಿಯೋಜಿತ ಅಧಿಕಾರಿಗಳು ಸ್ಪಂದಿಸಿ ಎದುರಾಗಬಹುದಾದ ಅನಾಹುತವನ್ನು ತಪ್ಪಿಸಬೇಕು. ಸಾರ್ವಜನಿಕರ ಸಂರಕ್ಷಣೆ ಸರ್ಕಾರದ ಆದ್ಯಕರ್ತವ್ಯ. ಈ ಕಾರ್ಯವನ್ನು ಅಧಿಕಾರಿ ವಲಯ ಅಚ್ಚುಕಟ್ಟಾಗಿ ನಿರ್ವಹಿಸಬೇಕು. ಇದರಲ್ಲಿ ಯಾವುದೇ ರೀತಿಯ ನಿಷ್ಕಾಳಜಿ ಸಹಿಸಲಾಗದು ಎಂದು ಹೇಳಿದರು.
ಪ್ರವಾಹ ಪರಿಸ್ಥಿತಿ ನಿರ್ವಹಣೆಗಾಗಿ ಸ್ಥಳೀಯವಾಗಿ ಲಭ್ಯವಿರುವ ಅಧಿಕಾರಿಗಳು ತಕ್ಷಣ ಸ್ಪಂದಿಸುವ ಕಾರ್ಯ ಮಾಡಬೇಕು. ಅಲ್ಲದೇ ಜಿಲ್ಲಾಡಳಿತದೊಂದಿಗೆ ನಿರಂತರ ಸಮನ್ವಯ ಸಾಧಿಸಿ ಸಂರಕ್ಷಣಾ ಕಾರ್ಯವನ್ನು ಮುಂದುವರೆಸಬೇಕು. ಒಟ್ಟಾರೆ ಜನಜಾನುವಾರು ಜೀವಹಾನಿ ತಡೆಗೆ ಸರ್ವ ಸನ್ನದ್ಧರಾಗಿ ಕಾರ್ಯನಿರ್ವಹಿಸುವಂತೆ ಸೂಚಿಸಿದ ಅವರು ಈ ಕಾರ್ಯಕ್ಕಾಗಿ ಅಗತ್ಯ ಸಾಧನಾ ಸಲಕರಣೆಗಳನ್ನು ಸಿದ್ಧವಾಗಿಟ್ಟುಕೊಳ್ಳುವಂತೆ ತಿಳಿಸಿದರು.
ಪ್ರವಾಹ ಪರಿಸ್ತಿತಿ ತಲೆದೋರಿದಲ್ಲಿ ಸಾರ್ವಜನಿಕರನ್ನು ಬೇರೆಡೆ ಸ್ಥಳಾಂತರಿಸಲು ಹಾಗೂ ಆಹಾರ, ವೈದ್ಯಕೀಯ ಸೇವೆ ಶೀಘ್ರ ತಲುಪುವಂತೆ ಕ್ರಮ ಕೈಗೊಳ್ಳಬೇಕು. ಅಲ್ಲದೇ ಜಾನುವಾರುಗಳನ್ನು ಗೋಶಾಲೆ ತೆರೆದು ಅವುಗಳಿಗೆ ಅಗತ್ಯ ಮೇವು ದೊರಕಿಸಲು ಸಂಬಂಧಿತ ಇಲಾಖಾಧಿಕಾರಿಗಳು ಸಿದ್ಧತೆ ಮಾಡಿಟ್ಟುಕೊಳ್ಳುವಂತೆ ಹೇಳಿದರು
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ ದೇವರಾಜು ಮಾತನಾಡಿ, ಪ್ರವಾಹ ಪರಿಸ್ಥಿತಿ ನಿರ್ವಹಣೆಗೆ ಪೊಲೀಸ್ ಅಧಿಕಾರಿಗಳು ಅಗ್ನಿಶಾಮಕ ಇಲಾಖೆ ಹಾಗೂ ಹೋಮ್ ಗಾರ್ಡ ನುರಿತ ಅಧಿಕಾರಿ ಸಿಬ್ಬಂದಿಗಳು ತಾಲೂಕು ಆಡಳಿತದೊಂದಿಗೆ ಸಮನ್ವಯ ಸಾಧಿಸಿ ಜೀವ ಸಂರಕ್ಷಣೆಗೆ ಮುಂದಾಗಬೇಕು.ಈ ಕಾರ್ಯಕ್ಕೆ ಅಗತ್ಯವಿರುವ ಲೈಫ್‍ಜಾಕೆಟ್, ಬೋಟ್ ಸೇರಿದಂತೆ ಸಂರಕ್ಷಣಾ ಸಲಕರಣೆಗಳನ್ನು ಸಿದ್ಧವಾಗಿಟ್ಟುಕೊಳ್ಳುವ ಮೂಲಕ ಪರಿಸ್ಥಿತಿ ನಿರ್ವಹಣೆಗೆ ಸಿದ್ಧತೆ ಮಾಡಿಕೊಳ್ಳುವಂತೆ ಸೂಚಿಸಿದರು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಸುಶೀಲಾ ಬಿ ಮಾತನಾಡಿ, ಪ್ರವಾಹ ಎದುರಾಗಬಹುದಾದ ಗ್ರಾಮಗಳನ್ನು ಗುರುತಿಸಲಾಗಿದ್ದು, ಈ ಭಾಗದಲ್ಲಿ ಮುಂಜಾಗ್ರತಾ ಕ್ರಮವಾಗಿ ಸಾರ್ವಜನಿಕರಲ್ಲಿ ಡಂಗುರ ಸಾರುವ ಮೂಲಕ ಪ್ರವಾಹ ಕುರಿತು ಜಾಗೃತಿ ಮೂಡಿಸಬೇಕು. ತಗ್ಗು ಪ್ರದೇಶದ ಮನೆಗಳಲ್ಲಿ ವಾಸಿಸುವವರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರ ಮಾಡಬೇಕು. ಅಲ್ಲದೇ ಗುರುತಿಸಲಾದ ಕಾಳಜಿ ಕೇಂದ್ರಗಳಲ್ಲಿ ಅಗತ್ಯ ಮೂಲಭೂತ ಸೌಲಭ್ಯಗಳು ದೊರಕುವಂತೆ ನೋಡಿಕೊಳ್ಳಬೇಕು ಎಂದರು.
ಅಪರ ಜಿಲ್ಲಾಧಿಕಾರಿ ಅನ್ನಪೂರ್ಣ ಮಾತನಾಡಿ, ಜಿಲ್ಲೆಯಲ್ಲಿ ಜನೆವರಿಯಿಂದ ಈವರೆಗೆ ವಾಡಿಕೆ ಮಳೆಗಿಂತ ಶೇ. 71 ರಷ್ಟು ಅಧಿಕ ಮಳೆಯಾಗಿದೆ. ಪ್ರವಾಹ ಹಾಗೂ ಅತೀವೃಷ್ಟಿ ಪರಿಸ್ಥಿತಿ ಕಡಿಮೆಯಾದ ತಕ್ಷಣ ಕೃಷಿ ಹಾಗೂ ತೋಟಗಾರಿಕೆ ಇಲಾಖೆ ಅಧಿಕಾರಿಗಳು ಬೆಳೆಹಾನಿ ಕುರಿತು ಜಂಟಿ ಸಮೀಕ್ಷೆ ಕೈಗೊಂಡು ಪರಿಹಾರ ವಿತರಣೆಗೆ ಮುಂದಾಗಬೇಕು. ಅದೇ ರೀತಿ ಅತೀವೃಷ್ಟಿಯಿಂದ ಹಾನಿಗೊಳಗಾದ ಮನೆಹಾನಿಗೆ ಸರ್ಕಾರ ನಿಗದಿಪಡಿಸಿದ ಪರಿಹಾರ ಶೀಘ್ರ ಒದಗಿಸಲು ಕ್ರಮ ವಹಿಸುವಂತೆ ಹೇಳಿದರು.
ಸಭೆಯಲ್ಲಿ ಪ್ರವಾಹ ಸಂಭವಿಸಬಹುದಾದ ತಾಲೂಕುಗಳ ತಹಸೀಲ್ದಾರರು, ನಿಯೋಜಿತ ನೋಡಲ್ ಅಧಿಕಾರಿಗಳು ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಕುರಿತು ಹಾಗೂ ಗಂಜಿ ಕೇಂದ್ರಗಳ ವ್ಯವಸ್ಥೆ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳಿಗೆ ವಹಿಸಲಾದ ಕರ್ತವ್ಯಗಳ ಕುರಿತು ಚರ್ಚಿಸಲಾಯಿತು.
ಜಿಲ್ಲಾ ವಿಪತ್ತು ನಿರ್ವಹಣಾ ತಜ್ಞ ಶಿವಾನಂದ ರಾಜನಾಳ ಮಾತನಾಡಿ, ಮಲಪ್ರಭಾ ಹಾಗೂ ಬೆಣ್ಣೆಹಳ್ಳ ಪ್ರವಾಹದಿಂದ ನರಗುಂದ ತಾಲೂಕಿನ 16 ಹಾಗೂ ರೋಣ ತಾಲೂಕಿನ 16 ಗ್ರಾಮಗಳು ಮತ್ತು ತುಂಗಭದ್ರಾ ನದಿ ಪ್ರವಾಹದಿಂದ ಶಿರಹಟ್ಟಿ ತಾಲೂಕಿನ 10 , ಮುಂಡರಗಿ ತಾಲೂಕಿನ 11 ಗ್ರಾಮಗಳು ಪ್ರವಾಹ ಪೀಡಿತಕ್ಕೊಳಗಾಗುವ ಗ್ರಾಮಗಳೆಂದು ಗುರುತಿಸಲಾಗಿದೆ. ಅಗತ್ಯವಿದ್ದಲ್ಲಿ ಕೊಣ್ಣೂರು, ಹೊಳೆ ಆಲೂರು, ಕೊರ್ಲಳ್ಳಿ, ಮಜ್ಜೂರು ಗ್ರಾಮಗಳಲ್ಲಿ ಗೋಶಾಲೆ ತೆರೆಯಲು ಮುಂಜಾಗ್ರತಾ ಕ್ರಮವಾಗಿ ಸ್ಥಳ ಗುರುತಿಸಲಾಗಿದೆ ಎಂದರು.
ಸಭೆಯಲ್ಲಿ ಜಿ.ಪಂ. ಉಪಕಾರ್ಯದರ್ಶಿ ಬಸವರಾಜ ಅಡವಿಮಠ, ಜಂಟಿ ಕೃಷಿ ನಿರ್ದೇಶಕ ಜಿಯಾವುಲ್ಲಾ ಕೆ, ಡಿಡಿಪಿಐ ಬಸವಲಿಂಗಪ್ಪ, ಡಿಡಿಪಿಯು ಎಂ.ಎನ್. ಕಾಂಬಳೆ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಮಾರುತಿ, ಆಹಾರ ಇಲಾಖೆಯ ಉಪನಿರ್ದೇಶಕ ಮಲ್ಲಿಕಾರ್ಜುನ, ನಗರಸಭೆ ಪೌರಾಯುಕ್ತ ರಮೇಶ ಸುಣಗಾರ, ಸಂಖ್ಯಾ ಸಂಗ್ರಹಣಾಧಿಕಾರಿ ಎ.ಎ.ಕಂಬಾಳಿಮಠ, ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಸೇರಿದಂತೆ ಆಯಾ ತಾಲೂಕುಗಳ ತಹಸೀಲ್ದಾರರು ಇದ್ದರು.