

ಗದಗ: ಜಿಲ್ಲಾದ್ಯಂತ ಅತಿಯಾದ ಮಳೆಯಿಂದಾಗಿ ಪ್ರವಾಹ ಪರಿಸ್ಥಿತಿ ಎದುರಾಗಿದೆ. ಪ್ರವಾಹ ಪರಿಸ್ಥಿತಿಯನ್ನು ಅತ್ಯಂತ ಸಮರ್ಥವಾಗಿ ವಿವಿಧ ಇಲಾಖೆಗಳ ಸಮನ್ವಯದೊಂದಿಗೆ ನಿಭಾಯಿಸಬೇಕು ಎಂದು ಜಿಲ್ಲಾ ವಿಪತ್ತು ಪ್ರಾಧಿಕಾರದ ಅಧ್ಯಕ್ಷೆ, ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್., ಅವರು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದರು.
ಜಿಲ್ಲಾಡಳಿತ ಭವನದ ವಿಡಿಯೋ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಿಲ್ಲೆಯ ಹಲವೆಡೆ ರಸ್ತೆ, ಕೆರೆ, ಕಟ್ಟಡ, ಮನೆ, ಬೆಳೆ ಹಾನಿಗೊಳಗಾಗಿವೆ. ಅವುಗಳನ್ನು ಎಸ್ಡಿಆರ್ಎಫ್ ಹಾಗೂ ಎನ್ಡಿಆರ್ಎಫ್ ಮಾರ್ಗಸೂಚಿಗಳನ್ವಯ ಸಮೀಕ್ಷೆ ನಡೆಸಿ ಪರಿಹಾರ ಕಾರ್ಯ ಕೈಗೊಳ್ಳಬೇಕು. ತಾಲೂಕಿಗೆ ಒಬ್ಬರಂತೆ ಜಿಲ್ಲಾ ಮಟ್ಟದ ಅಧಿಕಾರಿಗಳನ್ನು ಪ್ರವಾಹ ಪರಿಸ್ಥಿತಿ ನಿರ್ವಹಣೆಗಾಗಿ ನೋಡಲ್ ಅಧಿಕಾರಿಗಳನ್ನಾಗಿ ನಿಯೋಜಿಸಲಾಗಿದೆ. ನಿಯೋಜಿತ ಅಧಿಕಾರಿಗಳು ತಮ್ಮ ವ್ಯಾಪ್ತಿಯ ತಾಲೂಕಿನಲ್ಲಿ ತಾಲೂಕು ಆಡಳಿತದೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿದ್ದು, ಪ್ರವಾಹ ಪರಿಸ್ಥಿತಿ ಎದುರಿಸಬೇಕು. ಕರ್ತವ್ಯ ನಿರ್ವಹಣೆಯಲ್ಲಿ ನಿಷ್ಕಾಳಜಿ ತೋರುವ ಇಲಾಖಾಧಿಕಾರಿಗಳ ಮೇಲೆ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದರು.
ತಾಲೂಕಾಡಳಿತಗಳು ಪ್ರವಾಹ ಪರಿಸ್ಥಿತಿಯನ್ನು ಅಗ್ನಿಶಾಮಕ, ಪೊಲೀಸ್ ಸೇರಿ ವಿವಿಧ ಇಲಾಖೆಗಳ ಅಧಿಕಾರಿಗಳ ಸಮನ್ವಯದೊಂದಿಗೆ ನಿರ್ವಹಿಸಬೇಕು. ಎಲ್ಲ ನೌಕರರು ಕೇಂದ್ರ ಸ್ಥಾನದಲ್ಲಿದ್ದು, ಪ್ರವಾಹ ಪರಿಸ್ಥಿತಿ ನಿಭಾಯಿಸಬೇಕು ಎಂದರು.
ಜಿಪಂ ಸಿಇಒ ಡಾ. ಸುಶೀಲಾ ಬಿ., ಮಾತನಾಡಿ, ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ಮಳೆಯಿಂದಾಗಿ ಕಟ್ಟಿದ ಚರಂಡಿಗಳ ಸ್ವಚ್ಛತೆ ಮಾಡಬೇಕು. ಮಳೆ ನೀರು ಸರಾಗವಾಗಿ ಮುಂದೆ ಸಾಗಲು ಅನುವು ಮಾಡಬೇಕು. ಪ್ರವಾಹಕ್ಕೆ ತುತ್ತಾದ ಕುಟುಂಬಗಳನ್ನು ಹತ್ತಿರದ ಕಾಳಜಿ ಕೇಂದ್ರಗಳಿಗೆ ಸ್ಥಳಾಂತರಿಸಬೇಕು. ಕಾಳಜಿ ಕೇಂದ್ರಗಳಲ್ಲಿ ಮೂಲಸೌಕರ್ಯಗಳು ಇರುವಂತೆ ಕ್ರಮ ವಹಿಸಬೇಕು ಎಂದರು. ಎಸ್ಪಿ ಶಿವಪ್ರಕಾಶ ದೇವರಾಜು ಮಾತನಾಡಿ, ಮಾನವ ಜೀವ ಸಂರಕ್ಷಣೆ ಪ್ರಥಮಾದ್ಯತೆಯಾಗಿರಬೇಕು. ಜಾನುವಾರು, ಆಸ್ತಿ ಸಂರಕ್ಷಣೆ ನಂತರದ್ದಾಗಿ ರಬೇಕು. ಯಾವುದೇ ಪರಿಸ್ಥಿತಿಯಲ್ಲೂ ಅಧಿಕಾರಿಗಳು ಸ್ಥಳದಲ್ಲಿ ಹಾಜರಿದ್ದು, ಸಾರ್ವಜನಿಕರಿಗೆ ಸ್ಪಂದಿಸಬೇಕು ಎಂದರು.