

ಕೊಡೇಕಲ್: ಜಿಲ್ಲೆಯ ಕೃಷ್ಣಾ ಮತ್ತು ಭೀಮಾ ನದಿಗೆ ಪ್ರವಾಹ ಉಂಟಾದರೆ ಅದನ್ನು ಸಮರ್ಥವಾಗಿ ಎದುರಿಸಲು ಜಿಲ್ಲಾಡಳಿತ ಎಲ್ಲ ರೀತಿಯಿಂದ ಸಿದ್ಧತೆ ಮಾಡಿಕೊಂಡಿದೆ ಎಂದು ಜಿಲ್ಲಾಧಿಕಾರಿ ಡಾ.ಸುಶೀಲಾ ಹೇಳಿದರು.
ಬಸವಸಾಗರ ಜಲಾಶಯಕ್ಕೆ ದಿನದಿಂದ ದಿನಕ್ಕೆ ನೀರಿನ ಪ್ರಮಾಣ ಹೆಚ್ಚುತ್ತಿರುವುದರಿಂದ ಬುಧವಾರ ಭೇಟಿ ನೀಡಿ, ಅಧಿಕಾರಿಗಳಿಂದ ಅಗತ್ಯ ಮಾಹಿತಿ ಪಡೆದು ಮಾತನಾಡಿದ ಅವರು, ಈಗಾಗಲೇ ಜಲಾಶಯದಿಂದ ಕೃಷ್ಣಾನದಿಗೆ 2.26 ಲಕ್ಷ ಕ್ಯೂಸೆಕ್ ನೀರು ಬುಧವಾರ ಹರಿಸಲಾಗುತ್ತಿದೆ ಎಂದರು.
ಈಗಾಗಲೇ ಮಹಾರಾಷ್ಟ್ರ ಸೇರಿ ಕೃಷ್ಣಾ ಜಲಾನಯನ ಪ್ರದೇಶಗಳಲ್ಲಿ ಸುರಿಯುತ್ತಿರುವ ಮಳೆಯಿಂದ ಕೃಷ್ಣಾ ನದಿಗೆ ಪ್ರವಾಹ ಬಂದು ಅವಳಿ ಜಲಾಶಯಗಳು ಭರ್ತಿಯಾಗಿದ್ದು ಅದರಂತೆ ನಾರಾಯಣಪುರ ಬಸವಸಾಗರ ಜಲಾಶಕ್ಕೆ ಕಳೆದ ಒಂದು ವಾರದಿಂದ ನೀರಿನ ಒಳಹರಿವು ಹೆಚ್ಚಾಗಿ ಬುಧವಾರ 2 ಲಕ್ಷ ಕ್ಯೂಸೆಕ್ ನೀರು ಒಳಹರಿವು ಉಂಟಾಗಿದೆ. ಒಂದು ವೇಳೆ 3 ಲಕ್ಷ ಕ್ಯೂಸೆಕ್ ನೀರು ನದಿಗೆ ಹರಿಸಿದರೆ ನೀಲಕಂಠರಾಯನಗಡ್ಡಿಗೆ ಅಪಾಯ ಎದುರಾಗಲಿದೆ ಎಂದರು.
ಹೀಗಾಗಿ ಮುಂಜಾಗ್ರತವಾಗಿ ತಹಸೀಲ್ದಾರ್ ಮತ್ತು ಕಂದಾಯ ಇಲಾಖೆ ಸಿಬ್ಬಂದಿ ನದಿ ತೀರದ ಗ್ರಾಮಗಳಲ್ಲಿ ಪ್ರವಾಹ ಕುರಿತು ಮುಂಜಾಗ್ರತೆ ವಹಿಸುವಂತೆ ಈಗಾಗಲೇ ಸೂಚನೆ ನೀಡಲಾಗಿದೆ. ಅಲ್ಲದೆ ತಾಪಂವತಿಯಿಂದ ಗ್ರಾಪಂ ಮಟ್ಟದ ನೋಡಲ್ ಅಧಿಕಾರಿಗಳು ಕೂಡಾ ಪ್ರವಾಹ ಸ್ಥಿತಿ ಅವಲೋಕಿಸುತ್ತಾ ಜನರಿಗೆ ಜಾಗೃತಿ ಮೂಡಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ ಎಂದು ಹೇಳಿದರು.
ನಿಗಮದ ಅಧಿಕಾರಿಗಳೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿದ್ದು, ನೀರಿನ ಒಳ ಮತ್ತು ಹೊರ ಹರಿವುಗಳ ಬಗ್ಗೆ ಕ್ಷಣ ಕ್ಷಣದ ಮಾಹಿತಿ ಪಡೆಯಲಾಗುತ್ತಿದೆ. ಇನ್ನೂ ಮೂರು ನಾಲ್ಕು ದಿನಗಳವರೆಗೆ ಪ್ರವಾಹ ಮುಂದುವರೆಲಿದ್ದು, ಯಾವುದೇ ಕಾರಣಕ್ಕೂ ಕುರಿಗಾಹಿಗಳು, ಮೀನುಗಾರರು ಮತ್ತು ಜನರು ನದಿ ತೀರಕ್ಕೆ ತೆರಳಬಾರದು ಎಂದರು.
ನಿವಾಸಿಗಳ ಭೇಟಿಯಾದ ಡಿಸಿ: ಈ ವೇಳೆ ಜಲಾಶಯದ ಪಕ್ಕದ ನಿರ್ಭಂದಿತ ಪ್ರದೇಶದಲ್ಲಿ ವಾಸವಿರುವ ಮೇಲಿನ ಗಡ್ಡಿಯ 10 ಕುಟುಂಬಗಳಿರುವ ಸ್ಥಳಕ್ಕೆ ಜಿಲ್ಲಾಧಿಕಾರಿ ಡಾ.ಸುಶೀಲಾ ಭೇಟಿ ನೀಡಿ ಮಾಹಿತಿ ಪಡೆದರು. ಜಲಾಶಯಕ್ಕೆ ಇನ್ನೂ ಹೆಚ್ಚಿನ ನೀರು ಬಂದರೆ ಅಪಾಯವಾಗು ಸಾಧ್ಯತೆ ಇದ್ದು, ಕೂಡಲೇ ಸ್ಥಳಾಂತರವಾಗಬೇಕು ಎಂದರು. ಈ ವೇಳೆ ಹುಣಸಗಿ ತಹಸೀಲ್ದಾರ್ ಬಸಲಿಂಗಪ್ಪ ನೈಕೋಡಿ, ಉಪ ತಹಸೀಲ್ದಾರ್ ಕಲ್ಲಪ್ಪ ಜಂಜಿಗಡ್ಡಿ, ಆಣೆಕಟ್ಟು ವಿಭಾಗದ ಅಧಿಕಾರಿಗಳಾದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತ ವಿಜಯಕುಮಾರ ಅರಳಿ, ನಾಗೇಶ, ಸಹಾಯಕ ನಿರೀಕ್ಷಕ ಮಲ್ಲಿಕಾರ್ಜುನ, ಶರಣಗೌಡ, ಅಭಿಯಂತರರಾದ ಶಿವರಾಜ, ಕಂದಾಯ ನಿರೀಕ್ಷಕ ಶಾಂತಗೌಡ, ವಿಎ ಅಪ್ಪಣ್ಣ ಗುಡಿಮನಿ ಇತರರಿದ್ದರು.