ಪ್ರವಾಸೋದ್ಯಮ ತಾಣವಾಗಿ ಅಭಿವೃದ್ಧಿ ಆಗಲಿದೆ ಬದವನಾಳು  ಖಾದಿ ಗ್ರಾಮೋದ್ಯೋಗ ಕೇಂದ್ರ

mysore
Published on

ಮೈಸೂರು: ಮಹಾತ್ಮ ಗಾಂಧೀಜಿ ಅವರು ಎರಡು ಬಾರಿ ಭೇಟಿ ನೀಡಿರುವ ಐತಿಹಾಸಿಕ ಸ್ಥಳವಾದ ನಂಜನಗೂಡು ತಾಲೂಕಿನ ಬದವನಾಳು ಗ್ರಾಮದ ಖಾದಿ ಗ್ರಾಮೋದ್ಯೋಗ ಕೇಂದ್ರವನ್ನು ಪ್ರವಾಸೋದ್ಯಮ ತಾಣವನ್ನಾಗಿ ಅಭಿವೃದ್ಧಿ ಪಡಿಸಲಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಆಯುಕ್ತೆ ಅರುಂಧತಿ ಚಂದ್ರಶೇಖರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

ರಾಜ್ಯ ಸರ್ಕಾರವು ಗ್ರಾಮದ ಖಾದಿ ಗ್ರಾಮೋದ್ಯೋಗ ಕೇಂದ್ರವನ್ನು ಪ್ರವಾಸಿ ತಾಣವನ್ನಾಗಿ ಪುನಶ್ಚೇತನಗೊಳಿಸುವ ಸಲುವಾಗಿ ಸಬರಮತಿ ಆಶ್ರಮ ಅಭಿವೃದ್ಧಿಪಡಿಸಲು 45 ಕೋಟಿ ರೂ. ಬಜೆಟ್‌ನಲ್ಲಿ ಘೋಷಣೆ ಮಾಡಲಿದ್ದು, ಈ ಹಿನ್ನೆಲೆ ಇದರ ರೂಪು ರೇಷೆಗಳನ್ನು ಪರಿಶೀಲಿಸಲು ಸೋಮವಾರ ಭೇಟಿ ನೀಡಿದ್ದ ಆಯುಕ್ತರು, ನೀಲಿನಕ್ಷೆಯನ್ನು ಪರಿಶೀಲಿಸಿದರು.

ಕೆಆರ್‌ಐಡಿಎಲ್‌ನ ಎಇಇ ಅವರಿಂದ ಆಶ್ರಮ ನಿರ್ಮಾಣದ ಕ್ರಿಯಾಯೋಜನೆ, ಅನುದಾನ ಬಳಕೆ ಬಗ್ಗೆ ಕೂಲಂಕಷವಾಗಿ ಮಾಹಿತಿ ಪಡೆದು ಪ್ರಗತಿ ಹಂತದ ಕಾಮಗಾರಿಯ ಸ್ಥಿತಿಗತಿ ವೀಕ್ಷಿಸಿದರು.

ಬಳಿಕ, ಕೈಮಗ್ಗ ಯಂತ್ರಗಾರಕ್ಕೆ ಭೇಟಿ ನೀಡಿ ಕಾರ್ಯನಿರತ ಚರಕ ಕಾರ್ಮಿಕರೊಂದಿಗೆ ಚರ್ಚಿಸಿದ್ದು, ಕಾರ್ಮಿಕರು ವೇತನ ಹೆಚ್ಚಿಸುವಂತೆ ಮನವಿಮಾಡಿದರು. ಈ ಬಗ್ಗೆ ಚರ್ಚಿಸುತ್ತೇವೆ ಎಂದ ಅವರು ಖಾದಿ ಕೇಂದ್ರವನ್ನು ಪುನಶ್ಚೇತನಗೊಳಿಸುವ ಮೂಲಕ ಗ್ರಾಮೀಣ ಗುಡಿ ಕೈಗಾರಿಕೆ ಮಹತ್ವ ಹೆಚ್ಚಾಗಲಿದೆ ಎಂದರು.

ಇನ್ನೂ ಗ್ರಾಮದಲ್ಲಿ ಕೈಗೊಳ್ಳಬೇಕಾದ ಅಭಿವೃದ್ಧಿ ಕಾರ್ಯಗಳ ಬಗ್ಗೆ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಸದಸ್ಯರು, ಗ್ರಾಮಸ್ಥರೊಂದಿಗೆ ಚರ್ಚಿಸಿ ಮಾಹಿತಿ ಕಲೆಹಾಕಿದರು.

ಈ ವೇಳೆ ಆರ್‌ಡಿಪಿಆರ್ ಇಲಾಖೆಯ ಸಮಾಲೋಚಕಿ ವಸುಂದರಾ ದೇವಿ, ಜಿಲ್ಲಾ ಪಂಚಾಯಿತಿ ಸಿಇಒ ಕೆ.ಎಂ.ಗಾಯತ್ರಿ, ಮುಖ್ಯ ಯೋಜನಾಧಿಕಾರಿ ಪ್ರಭುಸ್ವಾಮಿ, ಎಸ್‌ಐಆರ್‌ಡಿ ಜಂಟಿ ನಿರ್ದೇಶಕಿ ಕವಿತಾ ಸೇರಿದಂತೆ ತಾಲೂಕು ಪಂಚಾಯಿತಿ ಹಾಗೂ ಗ್ರಾಮ ಪಂಚಾಯಿತಿ ಪಿಡಿಒ ಹಾಗೂ ಸಂಜೀವಿನಿ ಒಕ್ಕೂಟದ ಸದಸ್ಯರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net