ಪ್ರವಾಸೋದ್ಯಮ ಕೇಂದ್ರವಾಗಿ ಮೇಲುಕೋಟೆ

16mlk-1
Published on

ಮೇಲುಕೋಟೆ: ರಾಮಾನುಜರ ಕರ್ಮಭೂಮಿಯನ್ನು ಸರ್ಕಾರ ಪ್ರವಾಸೋದ್ಯಮ ಕೇಂದ್ರವಾಗಿ ಅಭಿವೃದ್ಧಿ ಮಾಡುತ್ತಿದ್ದು, ಪ್ರಥಮವಾಗಿ ಚೆಲುವನಾರಾಯಣಸ್ವಾಮಿ ದೇಗುಲದ ಸುತ್ತ ಕಾಂಕ್ರೀಟ್ ರಸ್ತೆ ಕಾಮಗಾರಿ ಮಾಡುವ ಮೂಲಕ ಈ ಕಾರ್ಯಕ್ಕೆ ಚಾಲನೆ ನೀಡಲಾಗಿದೆ ಎಂದು ಶಾಸಕ ದರ್ಶನ್ ಪುಟ್ಟಣ್ಣಯ್ಯ ತಿಳಿಸಿದರು.


ಪ್ರವಾಸೋದ್ಯಮ ಇಲಾಖೆ ವತಿಯಿಂದ ಶ್ರೀ ಚೆಲುವನಾರಾಯಣಸ್ವಾಮಿ ದೇವಾಲಯದ ಸುತ್ತ ಒಂದು ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸುತ್ತಿರುವ ಕಾಂಕ್ರೀಟ್ ರಸ್ತೆ ನಿರ್ಮಾಣಕ್ಕೆ ಶನಿವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.


ದೇವಾಲಯದ ಸುತ್ತ ರಸ್ತೆ ನಿರ್ಮಾಣಕ್ಕೆ ಹಲವು ವರ್ಷಗಳಿಂದ ಇದ್ದ ತೊಡಕನ್ನು ನಿವಾರಿಸಲಾಗಿದ್ದು, ಕಾಮಗಾರಿಗೆ ಚಾಲನೆ ನೀಡಲಾಗಿದೆ. ಚೆಲುವನಾರಾಯಣಸ್ವಾಮಿ ದೇವಸ್ಥಾನ ಭಾರತೀಯ ಸಂರಕ್ಷಿತ ಸ್ಮಾರಕವಾಗಿರುವ ಕಾರಣ ಕೇಂದ್ರ ಪುರಾತತ್ವ ಇಲಾಖೆಯಿಂದ ನಿರಪೇಕ್ಷಣಾಪತ್ರ ಪಡೆದು ನಂತರವೇ ಕಾಮಗಾರಿ ಕಾರ್ಯ ಆರಂಭಿಸಲು ಮತ್ತು ಇಲಾಖಾ ಅಧಿಕಾರಿಗಳ ಸಮಕ್ಷಮದಲ್ಲೇ ಕೆಲಸ ನಿರ್ವಹಿಸಲು ಭೂಸೇನಾ ನಿಗಮದ ಕಾರ್ಯಪಾಲಕ ಇಂಜಿನಿಯರ್‌ಗೆ ಸೂಚಿಸಿದ್ದೇನೆ.


ಅನುಮತಿ ದೊರೆತ ನಂತರ ಕಾಮಗಾರಿ ಆರಂಭಿಸಿ ಗುಣಮಟ್ಟದೊಂದಿಗೆ ಶೀಘ್ರ ರಸ್ತೆ ನಿರ್ಮಾಣವನ್ನು ಪೂರ್ಣಗೊಳಿಸಲು ಗುತ್ತಿಗೆದಾರರಿಗೂ ಸೂಚಿಸಿದ್ದೇನೆ. ಪ್ರತಿಹಂತದಲ್ಲೂ ನಾನೇ ನಿಂತು ಕಾಮಗಾರಿಯ ಗುಣಮಟ್ಟವನ್ನು ಪರಿಶೀಲಿಸುತ್ತೇನೆ ದೇವಾಲಯ ಕೈಂಕರ್ಯಪರರೂ ಹಾಗೂ ನಾಗರೀಕರೂ ರಸ್ತೆ ನಿರ್ಮಾಣದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು ಎಂದರು.


ಮುಖ್ಯಮಂತ್ರಿ ಸಿದ್ದರಾಮಯ್ಯ ಡಿಸಿಎಂ ಡಿ.ಕೆ. ಶಿವಕುಮಾರ್, ಜಿಲ್ಲಾ ಉಸ್ತುವಾರಿ ಸಚಿವ ಚೆಲುವರಾಯಸ್ವಾಮಿ ಸೇರಿದಂತೆ ಸರ್ಕಾರ ಮೇಲುಕೋಟೆ ಅಭಿವೃದ್ಧಿಗೆ ಪ್ರೋತ್ಸಾಹ ನೀಡುತ್ತಿದ್ದು, ಹಲವು ಸಚಿವರೂ ಸಹಕಾರ ನೀಡುತ್ತಿದ್ದಾರೆ. ವೈರಮುಡಿ ಉತ್ಸವದ ವೇಳೆಗೆ ಮೇಲುಕೋಟೆಯಲ್ಲಿ ಅತ್ಯಾಧುನಿಕ ಮಾದರಿಯ ಶೌಚಗೃಹಗಳು, ಶುದ್ಧೀಕರಿಸಿದ ಕುಡಿಯುವ ನೀರಿನ ಟ್ಯಾಂಕ್‌ಗಳನ್ನು ನಿರ್ಮಿಸುವುದರ ಜತೆಗೆ ಎಲ್ಲ ಮೂಲಸೌಕರ್ಯಗಳನ್ನು ಕಲ್ಪಿಸಲಾಗುತ್ತದೆ. ವೈರಮುಡಿ ಉತ್ಸವವನ್ನು ಕಳೆದ ಬಾರಿಗಿಂತ ಈ ಬಾರಿ ವೈಭವವಾಗಿ ನಡೆಸಲಾಗುತ್ತದೆ. ಈ ಐತಿಹಾಸಿಕ ಉತ್ಸವದ ಮೂಲಕ ಪ್ರವಾಸೋದ್ಯಮ ಚಟುವಟಿಕೆಯನ್ನು ಉತ್ತೇಜಿಸಲಾಗುತ್ತದೆ. ಒಟ್ಟಾರೆ ಮೇಲುಕೋಟೆಯನ್ನು ಸುಸಜ್ಜಿತ ಪ್ರವಾಸಿ ಕೇಂದ್ರವಾಗಿ ರೂಪಿಸಲು ಪ್ರಾಮಾಣಿಕವಾಗಿ ಪ್ರಯತ್ನ ಮಾಡುತ್ತೇನೆ. ಪಕ್ಷಾತೀತವಾಗಿ ಎಲ್ಲರೂ ಶ್ರೀಕ್ಷೇತ್ರದ ಅಭಿವೃದ್ಧಿಗೆ ಸಹಕಾರ ನೀಡಬೇಕು ಎಂದರು.


ಭೂಸೇನಾ ನಿಗಮ ಸಹಾಯಕ ಕಾರ್ಯಪಾಲಕ ಅಭಿಯಂತರೆ ಚೈತ್ರಾ, ಕೆಆರ್‌ಐಡಿಎಲ್ ಕಾರ್ಯಪಾಲಕ ಅಭಯಂತರ ಸೋಮಶೇಖರ್, ರಸ್ತೆ ಗುತ್ತಿಗೆದಾರ ಮನ್‌ಮುಲ್ ನಿರ್ದೇಶಕ ಕಾಡೇನಹಳ್ಳಿ ರಾಮಚಂದ್ರು, ಪ್ರಥಮ ಸ್ಥಾನೀಕ ಕರಗಂ ರಾಮಪ್ರಿಯ, ಗ್ರಾ.ಪಂ. ಸದಸ್ಯ ಜಯರಾಮು, ರೈತಸಂಘದ ಮುಖಂಡರಾದ ನ್ಯಾಮನಹಳ್ಳಿ ಬಿ.ಶಿವರಾಮೇಗೌಡ, ಗ್ರಾ.ಪಂ. ಮಾಜಿ ಅಧ್ಯಕ್ಷೆ ಜಯಲಕ್ಷ್ಮೀ, ತಾಲೂಕು ರೈತಸಂಘದ ಉಪಾಧ್ಯಕ್ಷ ಈಶಮುರುಳಿ, ಪುಳಿಯೋಗರೆ ಸುಬ್ಬಣ್ಣ, ದಿಲೀಪ್, ಗಂಗಾ, ಯೋಗಿ, ನಾಗೇಗೌಡ, ಲಕ್ಷ್ಮೀನರಸಿಂಹೇಗೌಡ, ನ್ಯಾಮನಹಳ್ಳಿ ಎನ್.ಎಸ್. ನಾಗರಾಜು, ಬಳಿಘಟ್ಟ ಪುಟ್ಟರಾಜು, ಬೋರಾಪುರ ಉಮೇಶ್, ದೊಡ್ಡಿಘಟ್ಟ ಸುರೇಶ್, ಹೊಸಹಳ್ಳಿ ಯೋಗಣ್ಣ ಕಾಂಗ್ರೆಸ್ ಮುಖಂಡ ಯೋಗಾನರಸಿಂಹೇಗೌಡ ಸೇರಿದಂತೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net