ಪ್ರವಾಸೋದ್ಯಮದಿಂದ ಉದ್ಯೋಗ ಸೃಷ್ಟಿ

27SGN01
Published on

ಶಿಗ್ಗಾಂವಿ: ದೇಶದ ಆರ್ಥಿಕ ಅಭಿವೃದ್ಧಿ ಹಾಗೂ ನಿರುದ್ಯೋಗ ನಿವಾರಣೆಯಲ್ಲಿ ಪ್ರವಾಸೋದ್ಯಮ ಮಹತ್ವದ ಪಾತ್ರ ನಿರ್ವಹಿಸುತ್ತಿದೆ. ಗ್ರಾಮೀಣ ಪ್ರದೇಶಗಳಲ್ಲಿ ಪ್ರವಾಸಿ ತಾಣಗಳು ಸ್ಥಳೀಯರಿಗೆ ಉದ್ಯೋಗಾವಕಾಶ ಒದಗಿಸುವುದರೊಂದಿಗೆ ಗ್ರಾಮೀಣಾಭಿವೃದ್ಧಿಯತ್ತ ದಿಟ್ಟ ಹೆಜ್ಜೆ ಇಟ್ಟಿರುವುದು ಪ್ರಶಂಸನೀಯ ಎಂದು ಜಿಲ್ಲಾಧಿಕಾರಿ ಎಸ್.ಬಿ. ಶೆಟ್ಟಣ್ಣವರ ಹೇಳಿದರು.

ತಾಲೂಕಿನ ಗೊಟಗೋಡಿ ಗ್ರಾಮದಲ್ಲಿನ ಉತ್ಸವ ರಾಕ್ ಗಾರ್ಡನ್​ನ ಜಾನಪದ ರಂಗಮಂದಿರದಲ್ಲಿ ಭಾನುವಾರ ಆಯೋಜಿಸಿದ್ದ ವಿಶ್ವ ಪ್ರವಾಸೋದ್ಯಮ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಕೋವಿಡ್-2019 ಮಹಾಮಾರಿ ರೋಗದಿಂದ ವಿಶ್ವವೇ ತತ್ತರಿಸಿದ್ದು ದುಡಿಯುವ ಕೈಗಳಿಗೆ ಕೆಲಸವಿಲ್ಲದಂತಾಗಿದೆ. ದೇಶದ ಜನತೆಯ ಸುರಕ್ಷತೆಗಾಗಿ ಕೇಂದ್ರ ಸರ್ಕಾರ ಲಾಕ್ ಡೌನ್ ಪದ್ಧತಿ ಅನುಸರಿಸಿದ್ದರಿಂದ ದೇಶಾದ್ಯಂತ ಪ್ರವಾಸಿ ತಾಣಗಳು, ಪುಣ್ಯ ಕ್ಷೇತ್ರಗಳು ಸೇರಿದಂತೆ ಪ್ರವಾಸಿಗರನ್ನು ಆಕರ್ಷಿಸುವ ಎಲ್ಲ ಮನರಂಜನಾ ಸ್ಥಳಗಳನ್ನು ಬಂದ್ ಮಾಡಲಾಗಿತ್ತು. ಕೇಂದ್ರ ಹಾಗೂ ರಾಜ್ಯ ಸರ್ಕಾರ ಅಧಿಸೂಚನೆ ಮೇರೆಗೆ ವಿಶ್ವ ಪ್ರವಾಸೋದ್ಯಮ ದಿನದಿಂದ ಪುನರಾರಂಭಿಸಲು ಅನುಮತಿ ನೀಡಲಾಗಿದೆ. ಸಂತ ಶಿಶುನಾಳ ಷರೀಫರ ಜನ್ಮಸ್ಥಳ ಶಿಶುನಾಳವನ್ನು ಪ್ರವಾಸೋದ್ಯಮ ಕ್ಷೇತ್ರವಾಗಿ ಅಭಿವೃದ್ಧಿ ಪಡಿಸಲು 25 ಕೋಟಿ ರೂ. ಮಂಜೂರಾಗಿದ್ದು ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ ಅವರ ಸೂಚನೆ ಮೇರೆಗೆ ಜಿಲ್ಲಾಡಳಿತದಿಂದ 5 ಕೋಟಿ ರೂ.ಬಿಡುಗಡೆ ಮಾಡಲಾಗುತ್ತದೆ’ ಎಂದರು.

ಪ್ರವಾಸೋದ್ಯಮ ಕ್ಷೇತ್ರಗಳಲ್ಲಿ ಕೇಂದ್ರ ಗೃಹ ಸಚಿವಾಲಯದ ಕೊವೀಡ್ ನಿರ್ದೇಶನಗಳು, ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಎಸ್​ಒಪಿ ಮಾರ್ಗಸೂಚಿಯನ್ನು ಕಟ್ಟು ನಿಟ್ಟಾಗಿ ಪಾಲಿಸಬೇಕು ಎಂದು ಜಿಲ್ಲಾಧಿಕಾರಿ ಸೂಚಿಸಿದರು.

ಉತ್ಸವ ರಾಕ್ ಗಾರ್ಡನ್ ಸಮಿತಿ ಅಧ್ಯಕ್ಷೆ ವೇದಾರಾಣಿ ದಾಸನೂರ ಮಾತನಾಡಿ, ಪ್ರವಾಸೋದ್ಯಮ ಸೇರಿದಂತೆ ಎಲ್ಲ ಕ್ಷೇತ್ರಗಳ ಮೇಲೆ ಕರೊನಾ ಛಾಯೆ ಆವರಿಸಿದ್ದರೂ ಎದೆಗುಂದದೆ ಅವುಗಳ ಅಭಿವೃದ್ಧಿಗೆ ಮತ್ತೆ ಎಲ್ಲರೂ ಕೈಜೋಡಿಸೋಣ ಎಂದರು.

ಜಿ.ಪಂ. ಸಿಇಒ ರಮೇಶ ದೇಸಾಯಿ, ಎಡಿಸಿ ಜೆ.ಯೋಗೀಶ್ವರ, ಕರ್ನಾಟಕ ಬಯಲಾಟ ಅಕಾಡೆಮಿ ಅಧ್ಯಕ್ಷ ಡಾ.ಟಿ.ಬಿ. ಸೊಲಬಕ್ಕನವರ ಮಾತನಾಡಿದರು. ಹಾವೇರಿ ಉಪ ವಿಭಾಗಾಧಿಕಾರಿ ಡಾ.ದಿಲೀಷ್ ಶಶಿ, ಶಿಗ್ಗಾಂವಿ ತಹಸೀಲ್ದಾರ್ ಪ್ರಕಾಶ ಕುದರಿ, ಸಹಾಯಕ ನಿರ್ದೇಶಕ ಮಲ್ಲಿಕಾರ್ಜುನ ಮಠದ, ಸತೀಶ ಎಸ್. ಹುಲಸೋಗಿ, ಅನ್ನಪೂರ್ಣ ಸಾಲಿಮಠ ಇತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net