

ವಿಜಯವಾಣಿ ಸುದ್ದಿಜಾಲ ಧಾರವಾಡ
ಜಾರ್ಖಂಡ ರಾಜ್ಯದಲ್ಲಿನ ಜೈನ್ ಧರ್ಮದ ತೀರ್ಥ ಕ್ಷೇತ್ರವಾದ ಸಮ್ಮೇದ ಶಿಖರ್ಜಿಯನ್ನು ಅಲ್ಲಿನ ಸರ್ಕಾರ ಪ್ರವಾಸಿತಾಣವಾಗಿ ಘೋಷಿಸಿದ್ದನ್ನು ಖಂಡಿಸಿ ಸಮಾಜದ ವತಿಯಿಂದ ಬುಧವಾರ ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಯಿತು.
ನಗರದ ಕಲಾಭವನದಿಂದ ಪ್ರತಿಭಟನಾ ರ‌್ಯಾಲಿ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿದ ಪ್ರತಿಭಟನಾಕಾರರು, ಸಮ್ಮೇದ ಶಿಖರ್ಜಿ ಜೈನ ಧರ್ಮೀಯರ ಪವಿತ್ರಕ್ಷೇತ್ರ. 24 ಜನ ತೀರ್ಥಂಕರರಲ್ಲಿ 20 ಜನ ತೀರ್ಥಂಕರರು ಹಾಗೂ ಸಾವಿರಾರು ಮುನಿಗಳು ಸಮಾಧಿ ಮರಣ ಹೊಂದಿದ ತಪೋಭೂಮಿ. ಇಂತಹ ಕ್ಷೇತ್ರವನ್ನು ಸರ್ಕಾರ ಪ್ರವಾಸಿ ತಾಣವಾಗಿ ಘೋಷಿಸಿದೆ. ಇದರಿಂದ ಕ್ಷೇತ್ರದ ಧಾರ್ಮಿಕ ಮಹತ್ವ ಕಳೆದು ಹೋಗಲಿದೆ. ಕೂಡಲೇ ಘೋಷಣೆ ರದ್ದುಪಡಿಸಿ ಕ್ಷೇತ್ರದ ಪಾವಿತ್ರೃತೆ ಕಾಪಾಡಬೇಕು ಎಂದು ಆಗ್ರಹಿಸಿದರು.
ಪ್ರವಾಸಿ ತಾಣವಾದರೆ ಅಲ್ಲಿ ಹೋಟೆಲ್, ಅತಿಥಿ ಗೃಹ, ರೆಸಾರ್ಟ್, ಜೂಜು ಕೇಂದ್ರಗಳು, ಬಾರ್‌ಗಳು ತಲೆ ಎತ್ತುತ್ತವೆ. ಜೈನ ಧರ್ಮದ ಬಗೆಗೆ ಅರಿವು, ಒಲವು, ಆಸಕ್ತಿ ಇಲ್ಲದ, ಕ್ಷೇತ್ರದ ಮಹತ್ವ ಅರಿಯದ ಅನ್ಯ ಜನರು ಕೇವಲ ಪಿಕ್‌ನಿಕ್ ಆಚರಿಸಲು ಬಂದು ಜಾಗ ಹಾಳಾಗಿ ಕೂಟಗಳ ಪವಿತ್ರತೆಗೆ ಧಕ್ಕೆ ಬರಲಿದೆ. ಜನರ ಬರು ಹೋಗುವಿಕೆ ಹೆಚ್ಚಾದಲ್ಲಿ ಕೂಟಗಳನ್ನು ವಿರೂಪಗೊಳಿಸುವ, ಬೇರೆ ಪ್ರತಿಮೆಗಳನ್ನು ಸ್ಥಾಪಿಸಿ ತಮ್ಮದೆ ಕ್ಷೇತ್ರ ಎಂದು ಹಕ್ಕು ಸಾಧಿಸುವ ಘಟನೆಗಳಿಗೂ ನಾಂದಿ ಆಗಬಹುದು. ಹೀಗಾಗಿ ಸಮ್ಮೇದಗಿರಿ ಕ್ಷೇತ್ರವನ್ನು ಜೈನ ಧರ್ಮೀಯರ ಪವಿತ್ರ ಕ್ಷೇತ್ರ ಎಂದು ಪರಿಗಣಿಸಿ ಪ್ರಧಾನಮಂತ್ರಿ ಹಾಗೂ ಜಾರ್ಖಂಡ ಮುಖ್ಯಮಂತ್ರಿ ಸಮಾಲೋಚಿಸಿ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ನಂತರ ಜಿಲ್ಲಾಡಳಿತದ ಮೂಲಕ ಕೇಂದ್ರ ಸರ್ಕಾರಕ್ಕೆ ಮನವಿಪತ್ರ ರವಾನಿಸಿದರು. ಶ್ರೀಕ್ಷೇತ್ರ ಸೋಂದಾ ಜೈನ ಮಠದ ಸ್ವಾಮೀಜಿ ಭಟ್ಟಾಕಲಂಕ ಭಟ್ಟಾರಕರು, ವರೂರು ನವಗ್ರಹ ತೀರ್ಥ ಕ್ಷೇತ್ರದ ಸ್ವಸ್ತಿಶ್ರೀ ಧರ್ಮಸೇನ ಭಟ್ಟಾರಕ ಸ್ವಾಮೀಜಿ, ಎಸ್‌ಡಿಎಂ ಮೆಡಿಕಲ್ ಕಾಲೇಜಿನ ಡಾ. ನಿರಂಜನಕುಮಾರ, ಪದ್ಮಲತಾ ನಿರಂಜನಕುಮಾರ, ಡಾ. ಅಜಿತಪ್ರಸಾದ, ಜೀವಂಧರಕುಮಾರ, ದತ್ತಾ ಡೋರ್ಲೆ, ತವನಪ್ಪ ಅಷ್ಟಗಿ, ಪಾರ್ಶ್ವನಾಥ ಶೆಟ್ಟಿ, ಅಶೋಕ ಬಾಳಿಕಾಯಿ, ಮಹಾವೀರ ಉಪಾಧ್ಯೆ, ಜಿನದತ್ತ ಹಡಗಲಿ, ಲಲಿತ ಭಂಡಾರಿ, ಜಿನ್ನಪ್ಪ ಕುಂದಗೋಳ, ಅಶೋಕ ಬಾಗಿ, ಚಾರುದತ್ತ ಬಾಗಿ, ವರ್ಧಮಾನ ದೇಸಾಯಿ, ಶ್ರೀಧರ ಬಸ್ತಿ, ಸುಜಾತಾ ಹಡಗಲಿ, ಆದಿನಾಥ ಜಿನಮಂದಿರ, ಸನ್ಮತಿ ಜಿನಮಂದಿರ, ಸಮ್ಯಕ್ ಪ್ರಜ್ಞಾನ ಮಹಿಳಾ ಮಂಡಳ, ಜೈನ ಮಿಲನ್, ಜೈನ ಮಿಲನ್ ಉತ್ತರ, ಸನ್ಮತಿ ಸೇವಾ ಸಮಾಜ ಸದಸ್ಯರು, ವಿವಿಧ ಗ್ರಾಮಗಳ ಜನರು, ಇತರರು ಇದ್ದರು.