

ಗುಂಡ್ಲುಪೇಟೆ: ಬಂಡೀಪುರ ಸಫಾರಿಗೆ ಹೆಚ್ಚಿನ ಪ್ರವಾಸಿಗರನ್ನು ಆಕರ್ಷಿಸಲು ಅರಣ್ಯ ಇಲಾಖೆ ನಾನಾ ಕ್ರಮಗಳನ್ನು ಕೈಗೊಳ್ಳುತ್ತಿದೆ. ಬಂಡೀಪುರದಲ್ಲಿದ್ದ ಸಫಾರಿ ಟಿಕೆಟ್ ಕೌಂಟರನ್ನು ಮೇಲುಕಾಮನಹಳ್ಳಿಗೆ ಸ್ಥಳಾಂತರಿಸಿದ ನಂತರ ಪ್ರತಿದಿನವೂ ಸಾವಿರಾರು ಪ್ರವಾಸಿಗರು ಆಗಮಿಸುವ ಸ್ಥಳವನ್ನು ಅಭಿವೃದ್ಧಿಪಡಿಸಿ ಪ್ರವಾಸಿಗರ ಆಕರ್ಷಣೆಯ ಕೇಂದ್ರವಾಗಿಸಲು ನಾನಾ ಯೋಜನೆಗಳನ್ನು ರೂಪಿಸಿತ್ತು.
ಹೂ ಮತ್ತು ಅಲಂಕಾರಿಕ ಗಿಡಗಳ ಮಾರಾಟ ಕೇಂದ್ರ, ಕರಕುಶಲ ವಸ್ತುಗಳ ಮಾರಾಟ ಮಳಿಗೆ ಸೇರಿದಂತೆ ಹಲವಾರು ಪ್ರಯೋಗಗಳನ್ನು ಮಾಡಿತ್ತು. ಮಳೆಗಾಲದಲ್ಲಿ ನೆಟ್ಟ ಸಸಿಗಳು ಬೇಸಿಗೆಯಲ್ಲಿ ಒಣಗುತ್ತಿದ್ದವು. ಇಲ್ಲವೇ ರಾತ್ರಿ ವೇಳೆ ವನ್ಯಜೀವಿಗಳ ದಾಳಿಯಿಂದ ನಾಶವಾಗುತ್ತಿದ್ದ ಪರಿಣಾಮ ಕೌಂಟರ್ ಸಮೀಪ ಆಕರ್ಷಕ ಪಾರ್ಕ್ ಬೆಳೆಸುವ ಯೋಜನೆ ವಿಫಲಗೊಂಡಿತ್ತು.
ಬೆಳಗ್ಗೆ 6ರಿಂದ 8.30 ಹಾಗೂ ಮಧ್ಯಾಹ್ನ 2.30ರಿಂದ 5 ಗಂಟೆವರೆಗೆ ಮಾತ್ರ ಸಫಾರಿ ನಡೆಸಲಾಗುತ್ತಿದೆ. ಬೇರೆಬೇರೆ ಕಡೆಗಳಿಂದ ಇಲ್ಲಿಗೆ ಆಗಮಿಸುವ ಪ್ರವಾಸಿಗರು ಸಫಾರಿಗೆ ಹೋಗುವ ಬಸ್ಸುಗಳಿಗಾಗಿ ಗಂಟೆಗಟ್ಟೆಲೆ ಕಾದು ಕುಳಿತುಕೊಳ್ಳಬೇಕಾಗುತ್ತಿದೆ. ಮಕ್ಕಳು ಹಾಗೂ ಕುಟುಂಬದವರೊಂದಿಗೆ ಬರುವ ಪ್ರವಾಸಿಗರಿಗೆ ಬೇಸರವಾಗದಂತೆ ಮಾಡಲು ಅರಣ್ಯ ಇಲಾಖೆ ನೀಲಿನಕ್ಷೆ ತಯಾರಿಸಿತ್ತು. ಕಳೆದ ಆರು ವರ್ಷಗಳ ಹಿಂದೆ ಸಫಾರಿ ಕೇಂದ್ರಕ್ಕೆ ಭೇಟಿ ನೀಡಿದ್ದ ಅಂದಿನ ಅರಣ್ಯ ಸಚಿವ ಆನಂದ್‌ಸಿಂಗ್ ರಾಷ್ಟ್ರಮಟ್ಟದಲ್ಲಿ ಬಂಡೀಪುರವನ್ನು ಪ್ರತಿಬಿಂಬಿಸುವ ಮಾದರಿಯಲ್ಲಿ ಯೋಜನೆ ಜಾರಿಗೊಳಿಸಲು ಶಿಲ್ಪಿಗಳನ್ನು ಸಂಪರ್ಕಿಸಿ ಸರ್ಕಾರದಿಂದ ಅಗತ್ಯವಾದ ಅನುದಾನ ಕೊಡುವ ಭರವಸೆ ನೀಡಿದ್ದರೂ ಅದು ಕಾರ್ಯರೂಪಕ್ಕೆ ಬರಲಿಲ್ಲ.
ಈ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಪ್ರವಾಸೋದ್ಯಮ ಇಲಾಖೆಯ ಸಹಕಾರದಿಂದ ಸಫಾರಿ ಕೇಂದ್ರದಲ್ಲಿ ಸೆಲ್ಫಿ ಪಾಯಿಂಟ್ ಸ್ಥಾಪಿಸಿದೆ. ಈ ಫಲಕದಲ್ಲಿ ‘ಐ ಆಮ್ ಅಟ್ ಬಂಡೀಪುರ’, ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ ಎಂಬ ಅಕ್ಷರಗಳಲ್ಲಿ ಎಲ್‌ಎಇ ಡಿ ದೀಪದಿಂದ ಬೆಳಗುವಂತೆ ನಿರ್ಮಿಸಲಾಗಿದೆ. ಜತೆಗೆ ಬಂಡೀಪುರದ ಲೋಗೋ, ‘ಇಂಕ್ರಿಡಿಬಲ್ ಇಂಡಿಯಾ’ ಎಂಬ ಆಕರ್ಷಕ ಟ್ಯಾಗ್‌ಲೈನ್ ಅಳವಡಿಸಿ ರಾತ್ರಿ ವೇಳೆ ಆಕರ್ಷಕವಾಗಿ ಕಾಣುವಂತೆ ಫೋಕಸ್ ಲೈಟ್ ಹಾಕಲಾಗಿದೆ.