

ಶ್ರೀರಂಗಪಟ್ಟಣ : 2025ರ ನೂತನ ವರ್ಷ ಆಗಮನದ ಹಿನ್ನೆಲೆಯಲ್ಲಿ ಕಾವೇರಿ ನದಿ ತೀರದ ಪ್ರದೇಶಗಳಲ್ಲಿ ವರ್ಷಾಚರಣೆಯ ಮೋಜು-ಮಸ್ತಿ ನಡೆಸದಂತೆ ಸಾರ್ವಜನಿಕರು ಹಾಗೂ ಪ್ರವಾಸಿಗರ ಪ್ರವೇಶಕ್ಕೆ ನಿಷೇಧ ಹೇರಿ ತಾಲೂಕು ಆಡಳಿತ ಆದೇಶ ಹೊರಡಿಸಿದೆ.
ತಾಲೂಕಿನ ಬಲಮುರಿ, ಎಡಮುರಿ, ಕಾರೇಕುರ, ಬಂಗಾರದೊಡ್ಡಿ ಅಣೆಕಟ್ಟು, ಪಶ್ಚಿಮವಾಹಿನಿ, ಚಂದ್ರವನ, ಪಟ್ಟಣದ ಜಿ.ಬಿ.ಹೊಳೆ, ಗಂಜಾಂನ ಚಂದಗಾಲು ರಸ್ತೆಯ ಹೊಳೆ, ಗೋಸಾಯ್‌ಘಾಟ್, ತ್ರಿವೇಣಿ ಸಂಗಮ, ಕರಿಘಟ್ಟದ ಲೋಕಪಾವನಿ, ಮಂಡ್ಯದಕೊಪ್ಪಲು ಕಾವೇರಿ ಬೋರೆದೇವರಗುಡಿ, ಮಹದೇವಪುರ ರಾಜಪರಮೇಶ್ವರಿ ಅಣೆಕಟ್ಟು, ರಾಮಸ್ವಾಮಿ ನಾಲೆ ಸೇರಿದಂತೆ ವಿವಿಧ ಸ್ಥಳಗಳಲ್ಲಿ ಸಂಭವಿಸಬಹುದಾದ ಅವಘಡಗಳನ್ನು ತಪ್ಪಿಸುವ ಸಲುವಾಗಿ ಮುನ್ನೆಚ್ಚರಿಕಾ ಕ್ರಮವಾಗಿ ಡಿ.31 ಸಂಜೆ 6ರಿಂದ ಜ.1ರ ಸಂಜೆ 8 ರವರೆಗೆ ನಿಷೇಧಾಜ್ಞೆ ಹೇರಿ ತಹಸೀಲ್ದಾರ್ ಪರಶುರಾಮ್ ಸತ್ತಿಗೇರಿ ಈ ಆದೇಶ ನೀಡಿದ್ದಾರೆ.
ಇನ್ನು ಹೊಸ ವರ್ಷದ ಪ್ರಯುಕ್ತ ನೈಸರ್ಗಿಕ ಪ್ರಾಕೃತಿಕ ತಾಣಗಳಾದ ಕರಿಘಟ್ಟ, ಕಾವೇರಿ ಬೋರೆದೇವರಗುಡಿ, ಸೇರಿದಂತೆ ಜನದಟ್ಟಣೆ ಕಂಡುಬರುವ ತಾಲೂಕು ವ್ಯಾಪ್ತಿಯ ಪ್ರಸಿದ್ದ ದೇವಾಲಯಗಳ ಬಳಿ ಸಂಭ್ರಮಾಚರಣೆ ನೆಪದಲ್ಲಿ ಸಾರ್ವಜನಿಕರಿಗೆ ಯಾವುದೇ ಕಿರಿಕಿರಿ ಉಂಟುಮಾಡದಂತೆ ಸೂಚಿಸಲಾಗಿದೆ. ಇನ್ನು ನದಿ ತೀರಗಳಲ್ಲಿ ಪೊಲೀಸ್ ಸಿಬ್ಬಂದಿ ಸೇರಿದಂತೆ ಪೊಲೀಸ್ ವಾಹನಗಳ ಗಸ್ತು ಇರಲಿದ್ದು, ನಿಯಮ ಉಲ್ಲಂಘಿಸುವವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗುವುದಾಗಿ ಎಚ್ಚರಿಕೆ ನೀಡಲಾಗಿದೆ.