

ಮೈಸೂರು: ರಾಜ್ಯ ಪ್ರವಾಸೋದ್ಯಮವನ್ನು ‘ಪ್ರವಾಸಿ ಸ್ನೇಹಿ’ ಮಾಡುವ ನಿಟ್ಟಿನಲ್ಲಿ ಯೋಜನೆಗಳನ್ನು ರೂಪಿಸಲು ಚಿಂತನೆ ನಡೆಸಲಾಗಿದೆ ಎಂದು ಕಾನೂನು, ಸಂಸದೀಯ ವ್ಯವಹಾರ ಮತ್ತು ಪ್ರವಾಸೋದ್ಯಮ ಸಚಿವ ಎಚ್.ಕೆ.ಪಾಟೀಲ್ ತಿಳಿಸಿದರು.
ಮೈಸೂರು ಪ್ರವಾಸೋದ್ಯಮ ಅಭಿವೃದ್ಧಿ ಕುರಿತಂತೆ ಸೋಮವಾರ ಅಧಿಕಾರಿಗಳೊಂದಿಗೆ ಸಭೆ, ವಿವಿಧ ಕಡೆ ಸ್ಥಳ ಪರಿಶೀಲನೆ ನಡೆಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.
ಪ್ರವಾಸೋದ್ಯಮ ಅಭಿವೃದ್ಧಿಗೆ ರಾಜ್ಯದಲ್ಲಿ ಹಲವು ಅವಕಾಶಗಳಿದ್ದು, ಸೂಕ್ತ ನಿರ್ವಹಣೆಯ ಅಗತ್ಯವಿದೆ. ಈಗ ಇರುವ ಪ್ರವಾಸೋದ್ಯಮವನ್ನು ಇನ್ನಷ್ಟು ಸುಧಾರಣೆಗೊಳಿಸಿ ‘ಪ್ರವಾಸಿ ಸ್ನೇಹಿ’ಯನ್ನಾಗಿ ಮಾಡಲಾಗುವುದು ಎಂದರು.
ಭಕ್ತಿ ಕೇಂದ್ರವಾಗಿರುವ ಚಾಮುಂಡಿ ಬೆಟ್ಟದ ಅಭಿವೃದ್ಧಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಭಿವೃದ್ಧಿ ಪ್ರಾಧಿಕಾರ ರಚನೆ ಸಂಬಂಧ ಬಜೆಟ್‌ನಲ್ಲಿ ಪ್ರಸ್ತಾಪಿಸಿದ್ದಾರೆ. ಇದಕ್ಕೆ ಅನುಗುಣವಾಗಿ ಏನು ಕ್ರಮ ಕೈಗೊಳ್ಳಬೇಕು ಎನ್ನುವ ಕುರಿತು ಸಭೆಯಲ್ಲಿ ಚರ್ಚಿಸಲಾಗಿದೆ. ಬೆಟ್ಟದಲ್ಲಿ ಪ್ರವಾಸೋದ್ಯಮ ಇಲಾಖೆಗೆ ಸೇರಿದ 2.5 ಎಕರೆ ಜಾಗವಿದ್ದು, ಅದರಲ್ಲಿ ಏನು ಮಾಡಬೇಕು, ಮೈಸೂರಿನ ಪ್ರವಾಸೋದ್ಯಮದಲ್ಲಿ ಏನೆಲ್ಲ ಆಗಬೇಕು ಎನ್ನುವ ಕುರಿತು ಸಮಗ್ರವಾಗಿ ಚರ್ಚಿಸಿ ಅಂತಿಮ ತೀರ್ಮಾನವನ್ನು ಮುಖ್ಯಮಂತ್ರಿ ಅವರ ಮುಂದೆ ಇಡಲಾಗುವುದು ಎಂದು ತಿಳಿಸಿದರು.
ಟೂರಿಸ್ಟ್ ಪೊಲೀಸ್ ಚಿಂತನೆ:
ಸಾಂಸ್ಕೃತಿಕ ರಾಜಧಾನಿ ಎಂದೇ ಕರೆಯುವ ಮೈಸೂರಿಗೆ ಪ್ರತಿ ವರ್ಷ ಸುಮಾರು 50 ಲಕ್ಷ ಪ್ರವಾಸಿಗರು ಬರುತ್ತಾರೆ. ಇವರ ನೆರವಿಗೆ ಟೂರಿಸ್ಟ್ ಪೊಲೀಸ್ ವ್ಯವಸ್ಥೆ ಜಾರಿಗೊಳಿಸುವ ಚಿಂತನೆ ನಡೆದಿದೆ ಎಂದು ಸಚಿವ ಎಚ್.ಕೆ.ಪಾಟೀಲ್ ತಿಳಿಸಿದರು.
ನಿತ್ಯ ಪ್ರವಾಸಿಗರು ಬರುವುದಲ್ಲದೆ, ದಸರಾ ಸಂದರ್ಭದಲ್ಲಿ ಇವರ ಸಂಖ್ಯೆ ಇನ್ನಷ್ಟು ಹೆಚ್ಚಾಗುತ್ತದೆ. ಆದರೆ, ಪ್ರವಾಸಿಗರಿಗೆ ಸೂಕ್ತ ಮಾರ್ಗದರ್ಶನ ನೀಡಲು ಹಾಗೂ ಏನಾದರೂ ತೊಡಕು ಉಂಟಾದರೆ ಎಲ್ಲಿಗೆ ದೂರು ನೀಡಬೇಕು, ಯಾರನ್ನು ಭೇಟಿ ಮಾಡಬೇಕು ಎನ್ನುವ ಸರಿಯಾದ ಮಾಹಿತಿ ಇರುವುದಿಲ್ಲ. ಆದ್ದರಿಂದ, ಟೂರಿಸ್ಟ್ ಪೊಲೀಸ್ ವ್ಯವಸ್ಥೆ ಮಾಡಿದರೆ ಅನುಕೂಲವಾಗಲಿದೆ ಎಂದರು.