ಚಾಮರಾಜನಗರ: ವರ್ಷಾಂತ್ಯದ ಹಿನ್ನೆಲೆಯಲ್ಲಿ ಜಿಲ್ಲೆಯ ಪ್ರವಾಸಿ ತಾಣಗಳಿಗೆ ಪ್ರವಾಸಿಗರು ಲಗ್ಗೆ ಇಡುತ್ತಿದ್ದಾರೆ. ಧಾರ್ಮಿಕ ಕೇಂದ್ರಗಳಿಗೆ ಭಕ್ತರ ದಂಡು ಹರಿದುಬರುತ್ತಿದೆ.
ಕೇರಳ ಮತ್ತು ತಮಿಳುನಾಡು ಗಡಿಯಲ್ಲಿರುವ ಚಾಮರಾಜನಗರ ಜಿಲ್ಲೆಯಲ್ಲಿ ವಿವಿಧ ಪ್ರೇಕ್ಷಣೀಯ ಸ್ಥಳಗಳಿವೆ. ಬಂಡೀಪುರ, ಬಿಆರ್‌ಟಿ ಹುಲಿ ಸಂರಕ್ಷಿತಾರಣ್ಯ ಪ್ರದೇಶ, ಮಲೆ ಮಹದೇಶ್ವರ ಮತ್ತು ಕಾವೇರಿ ವನ್ಯಜೀವಿಧಾಮಗಳು ಅರಣ್ಯ ಪ್ರವಾಸೋದ್ಯಮಕ್ಕೆ ಹೆಸರಾಗಿವೆ. ಇನ್ನು ರಾಜ್ಯದ ಪ್ರಸಿದ್ಧ ಧಾರ್ಮಿಕ ಸ್ಥಳವಾಗಿರುವ ಮಲೆ ಮಹದೇಶ್ವರ ಬೆಟ್ಟ, ಪ್ರಾಕೃತಿಕವಾಗಿ ಶ್ರೀಮಂತವಾಗಿರುವ ಬಿಳಿಗಿರಿರಂಗನಾಥ ಸ್ವಾಮಿ ದೇಗುಲ, ಹಿಮವದ್ ಗೋಪಾಲಸ್ವಾಮಿ ಬೆಟ್ಟಗಳಿಗೆ ಭಕ್ತರು ಆಗಮಿಸುತ್ತಿದ್ದಾರೆ. ಮಲೆ ಮಹದೇಶ್ವರ ಬೆಟ್ಟಕ್ಕೆ ಬರುವ ಭಕ್ತರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಕಾಲ್ನಡಿಗೆಯಲ್ಲಿ ಭಕ್ತರು ಆಗಮಿಸಿ ಹರಕೆ ತೀರಿಸುತ್ತಿದ್ದಾರೆ. ಬಂಡೀಪುರ ಅರಣ್ಯದಲ್ಲಿ ಸಾರಿ ಮಾಡಲು ಬರುವ ವನ್ಯಜೀವಿ ಪ್ರೇಮಿಗಳ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಕೊಳ್ಳೇಗಾಲ ತಾಲೂಕಿನ ಭರಚುಕ್ಕಿ ಜಲಪಾತಕ್ಕೂ ಪ್ರವಾಸಿಗರು ಭೇಟಿ ನೀಡುತ್ತಿದ್ದಾರೆ.
ವಾಸ್ತವ್ಯಕ್ಕಿಲ್ಲ ಅವಕಾಶ:
ಹೊಸ ವರ್ಷಾಚರಣೆಗೆ ಬಂಡೀಪುರ ಹುಲಿ ಸಂರಕ್ಷಿತಾರಣ್ಯ ಪ್ರದೇಶದಲ್ಲಿ ಡಿ.31 ಮತ್ತು ಜ.1ರಂದು ಪ್ರವಾಸಿಗರಿಗೆ ವಸತಿಗೃಹಗಳು, ಕಾಟೇಜ್‌ಗಳು ಲಭ್ಯವಿರುವುದಿಲ್ಲ. ಹೊಸ ವರ್ಷ ಆಚರಣೆ ಸಂದರ್ಭದಲ್ಲಿ ಮೋಜು-ಮಸ್ತಿಗೆ ಕಡಿವಾಣ ಹಾಕಲೆಂದು ಅರಣ್ಯ ಇಲಾಖೆ ಕಳೆದ ಏಳು ವರ್ಷಗಳಿಂದ ಅತಿಥಿಗೃಹಗಳನ್ನು ಬಾಡಿಗೆಗೆ ಕೊಡುವುದು ನಿರ್ಬಂಧಿಸುತ್ತಿದೆ. ಸಫಾರಿ ಎಂದಿನಂತೆ ನಡೆಯಲಿದೆ.