ಪ್ರವಾಸಿ ತಾಣ ವೀಕ್ಷಣೆಗೆ ಬಸ್ ಸೌಕರ್ಯ

bus
ಬೀದರ್‌ನಲ್ಲಿ ಶನಿವಾರ ಪ್ರವಾಸಿ ತಾಣ ವೀಕ್ಷಣೆಯ ವಿಶೇಷ ಬಸ್‌ಗಳಿಗೆ ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಚಾಲನೆ ನೀಡಿದರು. ಅನಿರುದ್ಧ ದೇಸಾಯಿ, ಶಿವಕುಮಾರ ಇತರರಿದ್ದರು.
Published on

ಬೀದರ್: ಜಿಲ್ಲೆಯ ಪ್ರವಾಸಿ ತಾಣಗಳ ವೀಕ್ಷಣೆಗಾಗಿ ವಿಶೇಷ ಬಸ್ ಸೌಕರ್ಯ ಕಲ್ಪಿಸಿದ್ದು, ಸಾರ್ವಜನಿಕರು ಸದುಪಯೋಗ ಪಡೆದುಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಕೋರಿದರು.

ಜಿಲ್ಲಾಡಳಿತ, ಜಿಲ್ಲಾ ಪ್ರವಾಸೋದ್ಯಮ ಇಲಾಖೆ ಹಾಗೂ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ ಸಹಯೋಗದಡಿ ನಗರದ ಕೋಟೆ ಆವರಣದಲ್ಲಿ ಶನಿವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪ್ರವಾಸಿ ತಾಣ ವೀಕ್ಷಣೆಯ ವಿಶೇಷ ಬಸ್ ಸಂಚಾರಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಜಿಲ್ಲೆಯ ಐತಿಹಾಸಿಕ, ಸಾಂಸ್ಕೃತಿಕ, ಧಾರ್ಮಿಕ ಮತ್ತು ಪರಿಸರ ಪ್ರವಾಸಿ ತಾಣಗಳಾದ ಬೀದರ್ ಕೋಟೆ, ಗುರುದ್ವಾರ, ಬರೀದ್‌ಶಾಹಿ ಉದ್ಯಾನ, ಪಾಪನಾಶ ದೇವಸ್ಥಾನ, ಝರಣಿ ನರಸಿಂಹಸ್ವಾಮಿ ಮಂದಿರ, ಅಷ್ಟೂರ ಗುಂಬಜ್, ಚೌಖಂಡಿ, ಬಸವಕಲ್ಯಾಣದ ಅನುಭವ ಮಂಟಪ, ಕೋಟೆ, ಭಾಲ್ಕಿ ಕೋಟೆ, ಹುಮನಾಬಾದ್‌ನ ವೀರಭಧ್ರೇಶ್ವರ ದೇವಸ್ಥಾನ, ಚಾಳಕಾಪುರದ ಸಿದ್ಧಾರೂಢ ಮಠ, ಹನುಮಾನ ದೇವಸ್ಥಾನ ಸೇರಿ ಹಲವು ತಾಣಗಳಿಗೆ ಭೇಟಿ ನೀಡಲು ಈ ಬಸ್‌ಗಳಿಂದ ಅನುಕೂಲವಾಗಲಿದೆ ಎಂದು ಹೇಳಿದರು.

ಪ್ರವಾಸಿಗರು ಆನ್‌ಲೈನ್ ಮೂಲಕ ನೋಂದಣಿ ಮಾಡಬಹುದು. ವಯಸ್ಕರಿಗೆ ೬೮೫ ರೂ. ಮತ್ತು ಶಾಲಾ ಮಕ್ಕಳಿಗೆ ೪೦೦ ರೂ. ಟಿಕೆಟ್ ದರ ನಿಗದಿಪಡಿಸಲಾಗಿದೆ. ರಾಜ್ಯ ಮತ್ತು ಜಿಲ್ಲೆ ಪ್ರವಾಸಿಗರಿಗೆ ಬಹಳ ಅನುಕೂಲ ಜತೆಗೆ ಪ್ರವಾಸೋದ್ಯಮಕ್ಕೆ ಉತ್ತೇಜನ ಸಿಗಲಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕ ಶಿವಲಿಂಗಪ್ಪ ಮಾತನಾಡಿ, ಪ್ರತಿದಿನ ಬೆಳಗ್ಗೆ ೬.೩೦ಕ್ಕೆ ಬರೀದ್‌ಶಾಹಿ ಉದ್ಯಾನವನದಿಂದ ಈ ಸೇವೆ ಆರಂಭವಾಗಲಿದೆ. ೭.೩೦ಕ್ಕೆ ಬ್ಲಾಕ್ ಬಕ್ ಸಾರಿ, ೯.೩೦ಕ್ಕೆ ಝರಣಿ, ೧೧.೩೦ಕ್ಕೆ ಅಷ್ಟೂರ, ಚೌಖಂಡಿ, ಮಧ್ಯಾಹ್ನ ೧.೩೦ಕ್ಕೆ ಗುರುನಾನಕ್, ೨.೩೦ಕ್ಕೆ ಊಟದ ವಿರಾಮ, ಸಂಜೆ ೪.೩೦ಕ್ಕೆ ಬರೀದ್‌ಶಾಹಿ ಉದ್ಯಾನ, ೫.೩೦ಕ್ಕೆ ಪಾಪನಾಶ ದೇವಸ್ಥಾನ, ೬.೩೦ಕ್ಕೆ ಮುಗಿಯಲಿದೆ ಎಂದು ತಿಳಿಸಿದರು.

ಭಾರತೀಯ ಪುರಾತತ್ವ ಇಲಾಖೆ ಅಧಿಕಾರಿ ಅನಿರುದ್ಧ ದೇಸಾಯಿ, ಜಂಗಲ್ ಲಾಡ್ಜ್ ಮತ್ತು ರೆಸಾರ್ಟ್ ಮ್ಯಾನೇಜರ್ ಶಿವಕುಮಾರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net