

ಮಂಜುನಾಥ ಅಂಗಡಿ ಧಾರವಾಡ
ನಿರುದ್ಯೋಗಿ ಯುವಕರು ಸ್ವಯಂ ಉದ್ಯೋಗ ಕೈಗೊಳ್ಳಲು ನೆರವಾಗುವ ಉದ್ದೇಶದಿಂದ ರಾಜ್ಯ ಸರ್ಕಾರ ಜಾರಿಗೊಳಿಸಿದ್ದ ಪ್ರವಾಸಿ ಟ್ಯಾಕ್ಸಿ ಯೋಜನೆ ತಾತ್ಕಾಲಿಕವಾಗಿ ಸ್ಥಗಿತಗೊಂಡಿದೆ. ನೂರಾರು ಆಕಾಂಕ್ಷಿಗಳು ಎರಡು ವರ್ಷಗಳಿಂದ ಅರ್ಜಿ ಸಲ್ಲಿಸಲು ಕಾದು ಕುಳಿತಿದ್ದು, ಸರ್ಕಾರ ಯೋಜನೆಯ ಆರಂಭಕ್ಕೆ ಕೋವಿಡ್ ನೆಪವೊಡ್ಡಿ ಅನುದಾನ ಬಿಡುಗಡೆ ಮಾಡುತ್ತಿಲ್ಲ.
ಸರ್ಕಾರವು ಪ್ರವಾಸೋದ್ಯಮ ಇಲಾಖೆಯ ಮೂಲಕ ಪ್ರತಿವರ್ಷ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಅಲ್ಪಸಂಖ್ಯಾತ, ಹಿಂದುಳಿದ ವರ್ಗಗಳ ನಿರುದ್ಯೋಗಿ ಅಭ್ಯರ್ಥಿಗಳಿಗೆ ಪ್ರವಾಸಿ ಟ್ಯಾಕ್ಸಿ ಖರೀದಿಗೆ ಅನುದಾನ ನೀಡುತ್ತಿತ್ತು. 20- 24 ವರ್ಷದೊಳಗಿನ ಲಘುವಾಹನ ಚಾಲನಾ ಪರವಾನಗಿ ಹೊಂದಿರುವ ಎಸ್ಸೆಸ್ಸೆಲ್ಸಿ ತೇರ್ಗಡೆಯಾದವರಿಗೆ ಸ್ವಯಂ ಉದ್ಯೋಗ ಕೈಗೊಳ್ಳಲು ನೆರವು ನೀಡಲಾಗುತ್ತಿತ್ತು. ಫಲಾನುಭವಿಗಳು ಕೊಳ್ಳುವ ಟ್ಯಾಕ್ಸಿಯ ಒಟ್ಟು ವೆಚ್ಚದಲ್ಲಿ ಇಲಾಖೆಯಿಂದ ಗರಿಷ್ಠ 3 ಲಕ್ಷ ರೂ. ಸಹಾಯಧನ ನೀಡಲಾಗುತ್ತಿತ್ತು. ಅಲ್ಲದೆ, ಟ್ಯಾಕ್ಸಿ ಮೊತ್ತದ ಶೇ. 5ರಷ್ಟು ಹಣವನ್ನು ಫಲಾನುಭವಿಯಿಂದ ಭರಿಸಿಕೊಂಡು ಉಳಿದ ಮೊತ್ತವನ್ನು ಫಲಾನುಭವಿ ರಾಷ್ಟ್ರೀಕೃತ ಅಥವಾ ವಾಣಿಜ್ಯ ಬ್ಯಾಂಕ್ ಮೂಲಕ ಸಾಲ ಸೌಲಭ್ಯ ಪಡೆಯುವ ಅವಕಾಶವಿತ್ತು.
2019- 20ರ ಸಾಲಿನಲ್ಲಿ ಜಿಲ್ಲೆಯಲ್ಲಿ ಜಿಲ್ಲೆಗೆ 11 ಟ್ಯಾಕ್ಸಿಗಳ ಗುರಿ ನೀಡಲಾಗಿತ್ತು. ಅರ್ಜಿ ಆಹ್ವಾನಿಸಿ ಮೀಸಲಾತಿವಾರು ವಿಂಗಡಿಸಿ ಟ್ಯಾಕ್ಸಿಗಳನ್ನು ವಿತರಿಸಲಾಗಿದೆ. 2020-21 ಹಾಗೂ 2021- 22ನೇ ಸಾಲಿನಲ್ಲಿ ಕೋವಿಡ್ ಕಾರಣವೊಡ್ಡಿ ಯೋಜನೆಯನ್ನು ಸ್ಥಗಿತಗೊಳಿಸಲಾಗಿದೆ. ಎಲ್ಲ ಜಿಲ್ಲೆಗಳಿಗೆ ಗುರಿ ನಿಗದಿಪಡಿಸಿ ಅಗತ್ಯ ಅನುದಾನ ಬಿಡುಗಡೆ ಮಾಡುವುದನ್ನು ಸ್ಥಗಿತಗೊಳಿಸಲಾಗಿದೆ. ಇದರಿಂದಾಗಿ ಪ್ರವಾಸೋದ್ಯಮ ಇಲಾಖೆ ಅನುದಾನವಿಲ್ಲದೆ ಚಟುವಟಿಕೆ ರಹಿತವಾಗಿದೆ.
ಕರ್ನಾಟಕ ದರ್ಶನ ಪ್ರವಾಸವೂ ರದ್ದು
ಪ್ರವಾಸೋದ್ಯಮ ಇಲಾಖೆಯಿಂದ ‘ಕರ್ನಾಟಕ: ಒಂದು ರಾಜ್ಯ ಹಲವು ಜಗತ್ತು’ ಎಂಬ ಧ್ಯೇಯವಾಕ್ಯದೊಂದಿಗೆ ಕರ್ನಾಟಕ ದರ್ಶನ ಪ್ರವಾಸ ಕಾರ್ಯಕ್ರಮ ಏರ್ಪಡಿಸುತ್ತಿತ್ತು. 8ನೇ ತರಗತಿಯ ವಿದ್ಯಾರ್ಥಿಗಳಿಗೆ ರಾಜ್ಯದ ಪ್ರಮುಖ ಪ್ರವಾಸಿ ತಾಣಗಳು, ಗತಕಾಲದ ಪರಂಪರಾಗತ ಹಾಗೂ ಪ್ರಕೃತಿದತ್ತ ಪ್ರವಾಸಿ ತಾಣಗಳನ್ನು ದರ್ಶನ ಮಾಡಿಸುವ ಯೋಜನೆ ಇದಾಗಿತ್ತು. ಆದರೆ, 2 ವರ್ಷಗಳಿಂದ ಕರೊನಾ ಕಾರಣದಿಂದಾಗಿ ಪ್ರವಾಸ ಕಾರ್ಯಕ್ರಮವೂ ರದ್ದಾಗಿದೆ.
ಈ ಹಿಂದೆ ಒಮ್ಮೆ ಅರ್ಜಿ ಸಲ್ಲಿಸಿದ್ದರೂ ಅರ್ಜಿಗಳ ಸಂಖ್ಯೆ ಹೆಚ್ಚಾಗಿದ್ದ ಕಾರಣ ಸಹಾಯಧನದ ಟ್ಯಾಕ್ಸಿ ಸಿಕ್ಕಿಲ್ಲ. 2020 ಹಾಗೂ 2021ರಲ್ಲಿ ಇಲಾಖೆಯಿಂದ ಅರ್ಜಿ ಆಹ್ವಾನಿಸಿಲ್ಲ. ನಿರುದ್ಯೋಗಿಗಳಿಗೆ ಸಹಾಯಧನ ನೀಡಿ ನೆರವಾಗಬೇಕಿದ್ದ ಯೋಜನೆಯನ್ನು ಸ್ಥಗಿತಗೊಳಿಸುವುದು ಸರಿಯಾದ ಕ್ರಮವಲ್ಲ.| ಮಂಜುನಾಥ ತಿಳವಳ್ಳಿ ಫಲಾನುಭವಿ
ಕಳೆದ ಎರಡು ವರ್ಷಗಳಿಂದ ಸರ್ಕಾರದಿಂದ ಜಿಲ್ಲೆಗೆ ಗುರಿ ನಿಗದಿಪಡಿಸಿ ಅನುದಾನ ಬಿಡುಗಡೆಯಾಗಿಲ್ಲ. ಪ್ರತಿವರ್ಷ ನಿಗದಿಪಡಿಸಲಾಗುತ್ತಿದ್ದ ಸರಾಸರಿ 20ರ ಗುರಿಗೆ ಅನುಗುಣವಾಗಿ ಅರ್ಜಿ ಆಹ್ವಾನಿಸಿ ಟ್ಯಾಕ್ಸಿ ವಿತರಿಸಲಾಗುತ್ತಿತ್ತು. ಅನುದಾನ ಬಾರದ ಕಾರಣ ಅರ್ಜಿ ಆಹ್ವಾನಿಸಿಲ್ಲ. | ಅಶ್ವಿನಿ ಚಡಚಣ ಸಹಾಯಕ ನಿರ್ದೇಶಕಿ, ಪ್ರವಾಸೋದ್ಯಮ ಇಲಾಖೆ