ಪ್ರವರ್ಗದ ಸೃಷ್ಟಿ ಅಸಂವಿಧಾನಿಕ ನಿಯಮ

Published on

ಚಾಮರಾಜನಗರ: ರಾಜ್ಯ ಸರ್ಕಾರ ಒಳಮೀಸಲಾತಿ ಜಾರಿಗೊಳಿಸುವ ನಿಟ್ಟಿನಲ್ಲಿ ಪರಿಶಿಷ್ಟ ಜಾತಿಗಳಲ್ಲಿ ಮೂರು ಪ್ರವರ್ಗ ಸೃಷ್ಟಿ ಮಾಡಿರುವುದು ಅಸಂವಿಧಾನಿಕ ನಿಯಮವಾಗಿದೆ ಎಂದು ದಲಿತ ಸಂಘರ್ಷ ಸಮಿತಿ ಸಂಚಾಲಕ ಸಿ.ಎಂ.ಶಿವಣ್ಣ ಆರೋಪಿಸಿದರು.

ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಆಯೋಜಿಸಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಸರ್ಕಾರ ಎಡಗೈ ಸಂಬಂಧಿತ ಜಾತಿಗಳಿಗೂ ಶೇ.6 ರಷ್ಟು ಮೀಸಲಾತಿ ನೀಡಿರುವುದರಲ್ಲಿ ನಮಗೆ ಯಾವುದೇ ತಕರಾರು ಇಲ್ಲ. ಆದರೆ ಪರಿಶಿಷ್ಟ ಜಾತಿಗಳನ್ನು ಎ, ಬಿ, ಸಿ ಎಂದು ಮೂರು ಪ್ರವರ್ಗವನ್ನು ಮಾಡುವ ಮೂಲಕ ದಲಿತ ಜನಾಂಗದ ಒಗ್ಗಟ್ಟನ್ನು ಒಡೆಯುವ ಪ್ರಯತ್ನ ಮಾಡಲಾಗಿದೆ ಎಂದು ದೂರಿದರು.

ಪರಿಶಿಷ್ಟ ಜಾತಿಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಇರುವ ಹೊಲೆಯ ಸಮುದಾಯವನ್ನು ಬಿ ಪ್ರವರ್ಗಕ್ಕೆ ಸೇರಿಸುವ ಮೂಲಕ ಅನ್ಯಾಯವನ್ನು ಎಸಗಲಾಗಿದೆ. ಇದರಿಂದ ಸಮುದಾಯದ ವಿದ್ಯಾರ್ಥಿಗಳು ಹಾಗೂ ನೌಕರರಿಗೆ ತೊಂದರೆಯಾಗಲಿದೆ. ಇದು ಬಲಗೈ ಸಂಬಂಧಿತ ಜಾತಿಗಳಿಗೆ ಮರಣ ಶಾಸನವಾಗಿದೆ ಎಂದು ಕಿಡಿಕಾರಿದರು.

ರಾಜ್ಯ ಸರ್ಕಾರ ಜಾರಿಗೆ ತಂದಿರುವ ಒಳಮೀಸಲಾತಿಯನ್ನು ಯಾವುದೇ ಕಾರಣಕ್ಕೂ ಒಪ್ಪಲು ಸಾಧ್ಯವಿಲ್ಲ. ಈ ನಿಟ್ಟಿನಲ್ಲಿ ಅ.6 ರಂದು ಜಿಲ್ಲಾಡಳಿತ ಭವನದ ಮುಂಭಾಗ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದ್ದು, ಸಮುದಾಯದ ಜನರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಮನವಿ ಮಾಡಿದರು. ನಗರಸಭಾ ಮಾಜಿ ಸದಸ್ಯ ಮಹದೇವಯ್ಯ, ಶಿವಶಂಕರ್ ಚಟ್ಟು, ಆಟೋ ಉಮೇಶ್, ಮಲ್ಲಯ್ಯನಪುರ ಸೋಮು, ರವಿ, ಸಿದ್ದಪ್ಪ, ಮಹದೇವಸ್ವಾಮಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net