

ಮೈಸೂರು: ಪಂಚಮಸಾಲಿ ಲಿಂಗಾಯತ ಸೇರಿದಂತೆ ಯಾವುದೇ ಮೇಲ್ವರ್ಗಗಳನ್ನು ಹಿಂದುಳಿದ ಪ್ರವರ್ಗ 2ಎಗೆ ಸೇರಿಸಬಾರದು ಎಂದು ರಾಜ್ಯ ಕಾಯಕ ಸಮಾಜಗಳ ಒಕ್ಕೂಟ ಒತ್ತಾಯಿಸಿದೆ.
ಪಂಚಮಸಾಲಿ ಮೀಸಲು ಬೇಡಿಕೆ ಕುರಿತು ರಾಜ್ಯ ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಅಧ್ಯಕ್ಷ ಕೆ. ಜಯಪ್ರಕಾಶ್ ಹೆಗ್ಡೆ ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಕುಲಶಾಸ್ತ್ರೀಯ ಅಧ್ಯಯನದ ಮಧ್ಯಂತರ ವರದಿ ಸಲ್ಲಿಸಿದ್ದಾರೆ. ಅದರಲ್ಲಿ ಪಂಚಮಸಾಲಿ ಸಮಾಜಕ್ಕೆ ಪ್ರವರ್ಗ 2ಎ ಬದಲಿಗೆ ಹೊಸ ಪ್ರವರ್ಗ ಸೃಷ್ಟಿಸಿ ಶೈಕ್ಷಣಿಕ ಮೀಸಲಾತಿ ನೀಡಲು ಪರಿಶೀಲಿಸಬಹುದೆಂದು ತಿಳಿಸಲಾಗಿದೆ. ಹೀಗಾಗಿ ಅದನ್ನು ಪಾಲಿಸಬೇಕು ಎಂದು ಒಕ್ಕೂಟದ ಅಧ್ಯಕ್ಷ ಕೆ.ಸಿ. ಪುಟ್ಟಸಿದ್ದಶೆಟ್ಟಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು
ತೋಳ್ಬಲಗಳಿಗೆ ಮಣಿದು ಮುಖ್ಯಮಂತ್ರಿ ದುರ್ಬಲ ಎನಿಸಿಕೊಳ್ಳಬಾರದು. ವರದಿಯನ್ನು ಪಾಲಿಸಬೇಕು ಎಂದು ಒತ್ತಾಯಿಸಿದರು. ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ನೀಡಿದಲ್ಲಿ ಇದೇ ಪ್ರವರ್ಗದಡಿ ಬರುವ ಇತರ ಸಮುದಾಯಗಳಿಂದ ಆಕ್ಷೇಪಣೆ ಬರುತ್ತದೆ. ಹೀಗಾಗಿ ಪ್ರತ್ಯೇಕ ದಾರಿ ಕಂಡುಕೊಳ್ಳುವಂತೆ ವರದಿಯಲ್ಲಿ ತಿಳಿಸಲಾಗಿದೆ. ಆದ್ದರಿಂದ ಪಂಚಮಸಾಲಿ ಹಾಗೂ ಮೇಲ್ವರ್ಗಗಳನ್ನು 2ಎ ಪ್ರವರ್ಗದಲ್ಲಿ ಸೇರಿಸಬಾರದು ಎಂದು ಆಗ್ರಹಿಸಿದರು
ಈಗ ಅದರಲ್ಲಿರುವ ಶೇ.15ರಷ್ಟು ಮೀಸಲಾತಿಯನ್ನು ಶೇ. 27ಕ್ಕೆ ಹೆಚ್ಚಿಸಬೇಕು. ಒಮ್ಮೆ ಮೀಸಲಾತಿ ಲಾಭ ಪಡೆದವರನ್ನು ಆ ವ್ಯಾಪ್ತಿಯಿಂದ ಹೊರಗಿಡಬೇಕು, ಖಾಸಗಿ ವಲಯದಲ್ಲೂ ಮೀಸಲಾತಿ ಅನುಸರಿಸಿ ನೇಮಕ ಮಾಡಿಕೊಳ್ಳಬೇಕು. ರಾಜ್ಯದಲ್ಲಿ ಖಾಲಿ ಇರುವ 2,69,572 ಸರ್ಕಾರಿ ಹುದ್ದೆಗಳನ್ನು ಭರ್ತಿ ಮಾಡಲು ಕ್ರಮ ಕೈಗೊಳ್ಳಬೇಕು. 195 ಜಾತಿಗಳಲ್ಲಿನ 2.35 ಕೋಟಿ ಕಾಯಕ ಸಮಾಜಗಳ ಜನರಿಗೆ ಅಭಿವೃದ್ಧಿಗೆ ಪ್ರಾಧಿಕಾರ ರಚಿಸಬೇಕು ಎಂದು ಒತ್ತಾಯಿಸಿದರು.
ಮುಖಂಡರಾದ ಎನ್.ಆರ್. ನಾಗೇಶ್, ಆರ್.ರಮೇಶ್ ಹಾಗೂ ಯೋಗೀಶ್ ಉಪ್ಪಾರ್ ಹಾಜರಿದ್ದರು.