

ಯಾದಗಿರಿ: ಪುರಾಣ ಪ್ರವಚನ, ಪುಣ್ಯಕಥೆಗಳನ್ನು ಆಲಿಸುವುದರಿಂದ ಪ್ರತಿಯೊಬ್ಬರ ಮನಸ್ಸು ಶುದ್ಧಗೊಳ್ಳಲಿದೆ ಎಂದು ಡಾ.ಗಂಗಾಧರ ಮಹಾಸ್ವಾಮಿಗಳು ನುಡಿದರು.
ತಾಲೂಕಿನ ಅಬ್ಬೆತುಮಕೂರಿನಲ್ಲಿ ಶ್ರೀ ವಿಶ್ವಾರಾಧ್ಯರ ಜಾತ್ರಾ ಮಹೋತ್ಸವದ ಹಿನ್ನೆಲೆಯಲ್ಲಿ ಆಯೋಜಿಸಿದ ಪುರಾಣ ಪ್ರವಚನ ಮತ್ತು ಜಾತ್ರಾ ಮಹೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿ, ಪ್ರತಿಯೊಬ್ಬ ಮನುಷ್ಯರು ಸಾಂಸಾರಿಕ ಜೀವನದಲ್ಲಿ ಸಿಲುಕಿ ತೊಳಲಾಡುತ್ತಾರೆ. ಸಂಸಾರ ತಾಪತ್ರಯ ಎನಿಸಿದಾಗ ಸಹಜವಾಗಿ ಬೇಸರ ಮೂಡುತ್ತದೆ. ಅದನ್ನು ದೂರ ಮಾಡಿ ಶಾಂತಿ, ಸಹನೆ, ತಾಳ್ಮೆಗಳು ಮೂಡಬೇಕಾದರೆ ಪುರಾಣವನ್ನು ಕೇಳಬೇಕು ಎಂದರು.
ಶ್ರೀವಿಶ್ವಾರಾಧ್ಯರು ಈ ನಾಡು ಕಂಡ ಅಪರೂಪದ ಮಹಾಂತರು. ಎಲ್ಲರಂತೆ ಅವರು ಕೂಡ ಸಂಸಾರಿಕ ಜೀವನದಲ್ಲಿದ್ದರೂ ಕೂಡ ಜಲಪತ್ರದ ಮೇಲಿನ ಬಿಂದುವಿನಂತೆ ಅವರು ಎಂದೂ ಸಂಸಾರಕ್ಕೆ ಅಂಟಿಕೊಳ್ಳಲಿಲ್ಲ. ನಶ್ವರ ಸಾಂಸಾರಿಕ ಜೀವನವನ್ನು ನಚ್ಚಿಕೊಳ್ಳದೆ ಪಾರಮಾಥರ್ಿಕ ಬದುಕಿನಲ್ಲಿ ಓಲಾಡಿ ಸಾಧನೆಯ ಸಿದ್ದಿಯನ್ನು ಮೆರೆದ ಸಿದ್ದಿಪುರುಷರಾಗಿದ್ದರು ಎಂದು ಹೇಳಿದರು.
ವಿಶ್ವಾರಾಧ್ಯರು ತಮ್ಮ ತಪಬಲದಿಂದ ಸಂಪಾದಿಸಿಕೊಂಡ ಜ್ಞಾನವನ್ನು ಈ ಲೋಕದ ಜನತೆಗೆ ಉಣಬಡಿಸಲು ಲೋಕಸಂಚಾರವನ್ನು ಕೈಗೊಂಡ ಮಹಾ ಮಹಿಮರಾಗಿದ್ದಾರೆ. ತಮ್ಮ ಸಂಪರ್ಕಕ್ಕೆ ಬಂದ ಎಲ್ಲ ಜನತೆಯನ್ನು ಉದ್ಧ್ದರಿಸಿ ಅವರನ್ನು ಸನ್ಮಾರ್ಗದಲ್ಲಿ ನಡೆಯುವಂತೆ ಮಾಡಿದ ಮಹಾಪುರುಷ ಅವರಾಗಿದ್ದಾರೆ ಎಂದು ಹೇಳಿದರು.
ವಿಶ್ವಾರಾಧ್ಯರ ಪುರಾಣ ನಿರಂತರವಾಗಿ 11 ದಿನಗಳ ಕಾಲ ನಡೆಯಲಿದ್ದು, ಎಲ್ಲ ಭಕ್ತಾದಿಗಳು ನಿತ್ಯ ಆಲಿಸುವುದರ ಮೂಲಕ ತಮ್ಮ ತನು-ಮನಗಳನ್ನು ಶುದ್ಧಗೊಳಿಸಿಕೊಳ್ಳಬೇಕು ಎಂದರು. ಖ್ಯಾತ ಪುರಾಣ ಪ್ರವಚನಕಾರರಾದ ಮಲ್ಲಿಕಾಜರ್ುನ ಶಾಸ್ತ್ರಿ ಐನಾಪೂರ ಪ್ರವಚನ ಆರಂಭಿಸಿದರು. ಮಠದ ವಕ್ತಾರ ಡಾ.ಸುಭಾಶ್ಚಂದ್ರ ಕೌಲಗಿ, ಹಾಗೂ ಭಕ್ತರು ಇದ್ದರು.