

ಬೆಟಗೇರಿ: ಶ್ರೀಮಂತನಾದವನು ದಾನದಿಂದ ಪುಣ್ಯಗಳಿಸಿದರೆ, ಬಡವನಾದವನು ಧ್ಯಾನದಿಂದ ಪುಣ್ಯಗಳಿಸಬೇಕು ಎಂದು ಶಿರಹಟ್ಟಿಯ ಜಗದ್ಗುರು ಕೀರೇಶ್ವರ ಸಂಸ್ಥಾನ ಮಠದ ಕೀರ ದಿಂಗಾಲೇಶ್ವರ ಸ್ವಾಮೀಜಿ ಹೇಳಿದರು.
ಸಮೀಪದ ಮಮದಾಪುರ ಗ್ರಾಮದ ಮೌನಮಲ್ಲಿಕಾರ್ಜುನ ಮಠದಲ್ಲಿ ಶ್ರಾವಣ ಅಧಿಕ ಮಾಸದ ನಿಮಿತ್ತ ಈಚೆಗೆ ತಿಂಗಳ ಕಾಲ ಹಮ್ಮಿಕೊಂಡಿರುವ ನಾಲ್ವವಾಡ ಶ್ರೀ ವೀರೇಶ್ವರ ಶರಣರ ಪ್ರವಚನ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿ ಮಾತನಾಡಿ, ಮಹಾತ್ಮರ ಪುರಾಣ ಪ್ರವಚನ ಶ್ರವಣ ಮಾಡುವುದರಿಂದ ಪುಣ್ಯಪ್ರಾಪ್ತಿಯಾಗುತ್ತದೆ ಎಂದರು.
ಜಮಖಂಡಿ ಕಲ್ಯಾಣ ಮಠದ ಗೌರಿಶಂಕರ ಶಿವಾಚಾರ್ಯ ಸ್ವಾಮೀಜಿ, ಸ್ಥಳೀಯ ಮೌನಮಲ್ಲಿಕಾರ್ಜುನ ಮಠದ ಮೌನಮಲ್ಲಿಕಾರ್ಜುನ ಶಿವಯೋಗಿ, ಶಲವಡಿ ಚರಂತಿಮಠದ ವೀರಯ್ಯ ಶಾಸಿಗಳು ಪ್ರವಚನ ನಡೆಸಿಕೊಟ್ಟರು. ಶಲವಡಿಯ ಮುತ್ತಣ್ಣ ಹೆಬಸೂರು ಅವರಿಂದ ಸಂಗೀತ, ಅಕ್ಬರ್‌ಸಾಹೇಬ್ ನದಾ ತಬಲಾಸಾಥ್ ನೀಡಿದರು. ಮಮದಾಪುರದ ಕಾಶಮ್ಮ ಬರದ ದಾಸೋಹ ನೆರವೇರಿಸಿದರು. ಮಂಜುನಾಥ ಶರಣರು ಇತರರಿದ್ದರು.