ಪ್ರಯೋಗಾಲಯ ಶೀಘ್ರ ಸ್ಥಾಪನೆ

21 Dwd 8
Published on

ಧಾರವಾಡ: ಕರೊನಾ ವೈರಸ್ ಹರಡದಂತೆ ತಡೆಯುವಲ್ಲಿ ಸರ್ಕಾರ, ಜಿಲ್ಲಾಡಳಿತ ಅಗತ್ಯ ಕ್ರಮ ಕೈಗೊಂಡಿದೆ. ಜನರು ಶುಚಿತ್ವ ಮತ್ತು ಸಾಮಾಜಿಕ ಅಂತರ ಕಾಪಾಡಿಕೊಂಡು ಆರೋಗ್ಯಕ್ಕೆ ಒತ್ತು ನೀಡಬೇಕು. ಕೋವಿಡ್-19ರ ಗಂಟಲ ದ್ರವ ಮಾದರಿ ಪ್ರಯೋಗಾಲಯವನ್ನು ಹುಬ್ಬಳ್ಳಿಯಲ್ಲಿ ಶೀಘ್ರವೇ ಸ್ಥಾಪಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್ ಹೇಳಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶನಿವಾರ ಕರೊನಾ ವೈರಸ್ ತಡೆಗೆ ಕೈಗೊಂಡ ಕ್ರಮಗಳು, ಚಿಕಿತ್ಸೆ ಸಿದ್ಧತೆ, ಆರೋಗ್ಯ ಸುರಕ್ಷತಾ ಕ್ರಮಗಳು, ಜನಜಾಗೃತಿ ಮತ್ತು ಮುಂಜಾಗ್ರತಾ ಕ್ರಮಗಳ ಕುರಿತ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಜಿಲ್ಲಾಡಳಿತದ ಎಲ್ಲ ಅಧಿಕಾರಿಗಳು ಆಡಳಿತದ ಇತರ ಕಾರ್ಯಗಳನ್ನು ತಾತ್ಕಾಲಿಕವಾಗಿ ಬದಿಗಿಟ್ಟು ವೈರಾಣು ನಿಮೂಲನೆಗೆ ಸಮರೋಪಾದಿಯಲ್ಲಿ ಕೆಲಸ ಮಾಡಬೇಕು ಎಂದು ಸೂಚಿಸಿದರು.

ಇದು ಮನುಕುಲಕ್ಕೆ ಪರೀಕ್ಷಾ ಕಾಲವಾಗಿದ್ದು, ಜನರು ಭಯಭೀತರಾಗದೆ ಧೈರ್ಯದಿಂದ ಪರಿಸ್ಥಿತಿ ಎದುರಿಸಬೇಕು. ಚೀನಾ, ಇಟಲಿ ಹಾಗೂ ಇತರ ರಾಷ್ಟ್ರಗಳಲ್ಲಿ ತಲೆದೋರಿರುವ ಘೊರ ಪರಿಸ್ಥಿತಿ ಅರಿತುಕೊಳ್ಳಬೇಕು. ಜನತೆ ಈ ವಿಷಯದಲ್ಲಿ ನಿರ್ಲಕ್ಷ್ಯ ತೋರಬಾರದು ಎಂದರು. ಪ್ರಧಾನಮಂತ್ರಿ ನರೇಂದ್ರ ಮೋದಿ ಕರೆ ನೀಡಿರುವ ಭಾನುವಾರದ ಜನತಾ ಕರ್ಫ್ಯೂಗೆ ಸಾರ್ವಜನಿಕರು ಸ್ವಯಂಪ್ರೇರಣೆಯಿಂದ ಸಹಕರಿಸಬೇಕು ಎಂದು ಮನವಿ ಮಾಡಿದರು.

ಕಟ್ಟೆಚ್ಚರ ವಹಿಸಿ: ಶಾಸಕ ಅರವಿಂದ ಬೆಲ್ಲದ ಮಾತನಾಡಿ, ವಿಮಾನ ನಿಲ್ದಾಣಗಳಿಗೆ ಆಗಮಿಸುವ ಪ್ರಯಾಣಿಕರ ಮಾಹಿತಿ ಪಡೆಯುವ ಬಗ್ಗೆ ಜಿಲ್ಲಾಡಳಿತ ಕಟ್ಟೆಚ್ಚರ ವಹಿಸಬೇಕು. ವಿದೇಶಗಳಿಂದ ಬರುವ ಯಾವುದೇ ಪ್ರಯಾಣಿಕರು ಹೊರಗುಳಿಯದಂತೆ ತಪಾಸಣೆಗೊಳಪಡಿಸಬೇಕು ಎಂದರು.

ಶಾಸಕ ಪ್ರಸಾದ ಅಬ್ಬಯ್ಯ ಮಾತನಾಡಿ, ಅವಳಿನಗರದಲ್ಲಿ ನೈರ್ಮಲ್ಯ ನಿರ್ವಹಣೆಗೆ ಪಾಲಿಕೆ ಆದ್ಯತೆ ನೀಡಬೇಕು. ಪೌರ ಕಾರ್ವಿುಕರ ಆರೋಗ್ಯ ರಕ್ಷಣೆಗೆ ಕಡ್ಡಾಯವಾಗಿ ಸಾಮಗ್ರಿ ಪೂರೈಸಬೇಕು ಎಂದರು. ವಿಧಾನ ಪರಿಷತ್ ಸದಸ್ಯರಾದ ಎಸ್.ವಿ. ಸಂಕನೂರ, ಶ್ರೀನಿವಾಸ ಮಾನೆ, ಪ್ರದೀಪ ಶೆಟ್ಟರ್, ಜಿ.ಪಂ. ಅಧ್ಯಕ್ಷೆ ವಿಜಯಲಕ್ಷ್ಮೀ ಪಾಟೀಲ, ಶಾಸಕರಾದ ಶಂಕರ ಪಾಟೀಲ ಮುನೇನಕೊಪ್ಪ, ಅರವಿಂದ ಬೆಲ್ಲದ, ಅಮೃತ ದೇಸಾಯಿ, ಹುಡಾ ಅಧ್ಯಕ್ಷ ನಾಗೇಶ ಕಲಬುರ್ಗಿ, ಜಿಲ್ಲಾಧಿಕಾರಿ ದೀಪಾ ಚೋಳನ್, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ಸುಜಾತಾ ಹಸವಿಮಠ, ಪೊಲೀಸ್ ಆಯುಕ್ತ ಆರ್. ದೀಲಿಪ್, ಎಸ್.ಪಿ. ವರ್ತಿಕಾ ಕಟಿಯಾರ, ಜಿ.ಪಂ. ಸಿಇಒ ಡಾ. ಬಿ.ಸಿ. ಸತೀಶ, ಪಾಲಿಕೆ ಆಯುಕ್ತ ಡಾ. ಸುರೇಶ ಇಟ್ನಾಳ, ಡಿಸಿಪಿ ಕೃಷ್ಣಕಾಂತ, ಡಿಹೆಚ್​ಒ ಡಾ. ಯಶವಂತ ಮದೀನಕರ, ಕಿಮ್್ಸ ನಿರ್ದೇಶಕ ಡಾ. ರಾಮಲಿಂಗಪ್ಪ, ವೈದ್ಯಕೀಯ ಅಧೀಕ್ಷಕ ಡಾ. ಅರುಣಕುಮಾರ, ಜಿಲ್ಲಾ ಸರ್ಜನ್ ಡಾ. ಶಿವಕುಮಾರ ಮಾನಕರ, ಜಿಲ್ಲಾ ಆರೋಗ್ಯ ಸುರಕ್ಷತಾ ಸಮಿತಿ ಸದಸ್ಯರು, ತಾಲೂಕು ಆರೋಗ್ಯ ಅಧಿಕಾರಿಗಳು ಹಾಜರಿದ್ದರು.

ತಡೆಗೆ ಅಗತ್ಯ ಕ್ರಮ: ಕರೊನಾ ವೈರಸ್ ಸೋಂಕು ಹರಡುವಿಕೆ ತಡೆಗೆ ಜಿಲ್ಲಾಡಳಿತ ಅಗತ್ಯ ಕ್ರಮ ಕೈಗೊಂಡಿದೆ. ಜಿಲ್ಲೆಯ ಜನತೆ ಭಯಭೀತರಾಗದೆ ಮಹಾಮಾರಿಯಿಂದ ದೂರವಿರಲು ಮುಂಜಾಗ್ರತಾ ಕ್ರಮಗಳನ್ನು ಪಾಲಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್ ಮನವಿ ಮಾಡಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶನಿವಾರ ಸಂಜೆ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.

ಜಿಲ್ಲೆಯಲ್ಲಿ ಈವರೆಗೆ 196 ಜನರ ಮೇಲೆ ನಿಗಾ ಇರಿಸಲಾಗಿದೆ. 7 ಜನ ಶಂಕಿತರ ಪೈಕಿ ನಾಲ್ವರ ವೈದ್ಯಕೀಯ ವರದಿ ನೆಗೆಟಿವ್ ಬಂದಿದ್ದು, ಮೂವರ ವರದಿ ಬರುವುದು ಬಾಕಿ ಇದೆ ಎಂದು ಹೇಳಿದರು.

ರಾಜ್ಯದ ಕಲಬುರಗಿಯಲ್ಲಿ ಕರೊನಾ ಸೋಂಕಿನಿಂದ ಒಬ್ಬ ಮೃತಪಟ್ಟಿದ್ದಾನೆ. ಇಟಲಿಯಲ್ಲಿ ಮಹಾಮಾರಿ ವ್ಯಾಪಕವಾಗಿ ಆವರಿಸಿದೆ. ಹಾಗಾಗಿ ವಿದೇಶಗಳಿಂದ ಆಗಮಿಸುವವರ ಮೇಲೆ ನಿಗಾ ವಹಿಸಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳಲ್ಲಿ ಸ್ಕ್ರೀನಿಂಗ್ ನಡೆಸಲಾಗುತ್ತಿದೆ. ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿಯೂ ಪರೀಕ್ಷೆ ಮಾಡಲಾಗುತ್ತಿದೆ ಎಂದರು.

ಸರ್ಕಾರಿ ಆಸ್ಪತ್ರೆಗಳಲ್ಲದೆ ಅಗತ್ಯ ಬಿದ್ದರೆ ಖಾಸಗಿ ಆಸ್ಪತ್ರೆಗಳ ನೆರವು ಪಡೆಯಲಾಗುವುದು. ಕರೊನಾ ಬಗ್ಗೆ ಭಯದ ವಾತಾವರಣ ನಿರ್ವಣ, ಅಪಪ್ರಚಾರ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಮಾಸ್ಕ್, ಸ್ಯಾನಿಟೈಸರ್ ಹೆಸರಲ್ಲಿ ವ್ಯಾಪಾರಿಗಳು ದುರ್ಲಾಭ ಪಡೆದರೆ ಜಿಲ್ಲಾಧಿಕಾರಿ ಸೂಕ್ತ ಕ್ರಮ ಜರುಗಿಸಲಿದ್ದಾರೆ ಎಂದರು. ಎಸ್​ಎಸ್​ಎಲ್​ಸಿ ಪರೀಕ್ಷೆ ಮಾ. 27ರಿಂದ ಆರಂಭವಾಗಲಿವೆ. ಪರೀಕ್ಷೆ ಮುಂದೂಡಬೇಕೋ ಬೇಡವೋ ಎಂಬುದರ ಕುರಿತು ಇನ್ನೆರಡು ದಿನಗಳಲ್ಲಿ ಸರ್ಕಾರ ನಿರ್ಧಾರ ಕೈಗೊಳ್ಳಲಿದೆ ಎಂದು ಸಚಿವ ಶೆಟ್ಟರ್ ಪ್ರತಿಕ್ರಿಯಿಸಿದರು. ಶಾಸಕರಾದ ಅರವಿಂದ ಬೆಲ್ಲದ, ಶಂಕರಪಾಟೀಲ ಮುನೇನಕೊಪ್ಪ, ಅಮೃತ ದೇಸಾಯಿ, ವಿಧಾನ ಪರಿಷತ್ ಸದಸ್ಯರಾದ ಪ್ರದೀಪ ಶೆಟ್ಟರ್, ಎಸ್.ವಿ. ಸಂಕನೂರ, ಜಿ.ಪಂ. ಅಧ್ಯಕ್ಷೆ ವಿಜಯಲಕ್ಷ್ಮೀ ಪಾಟೀಲ, ಜಿಲ್ಲಾಧಿಕಾರಿ ದೀಪಾ ಚೋಳನ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net