ಪ್ರಯಾಣಿಕರಿಗೆ ಉಚಿತ ಮಾಸ್ಕ್ ವಿತರಣೆ

14kdl1c
Published on

ಕುಂದಗೋಳ: ಸಾರಿಗೆ ಸಂಸ್ಥೆ ಚಾಲಕ ಹಾಗೂ ನಿರ್ವಾಹಕರೊಬ್ಬರು ಪ್ರಯಾಣಿಕರ ಹಿತಾಸಕ್ತಿಗಾಗಿ ಸ್ವಂತ ಹಣದಲ್ಲಿ ಉಚಿತವಾಗಿ ಮಾಸ್ಕ್ ವಿತರಿಸುತ್ತಿದ್ದಾರೆ.

ಹುಬ್ಬಳ್ಳಿಯಿಂದ ಕುಂದಗೋಳ ತಾಲೂಕಿನ ಯರಗುಪ್ಪಿ ಮಾರ್ಗವಾಗಿ ಚಿಕ್ಕನರ್ತಿ, ಹಿರೇನರ್ತಿ, ಬೆನಕನಹಳ್ಳಿ ಹಾಗೂ ಕುಂದಗೋಳದಿಂದ ಹುಬ್ಬಳ್ಳಿಗೆ ಸಾರಿಗೆ ಸಂಸ್ಥೆಯ ಬಸ್​ನಲ್ಲಿ ಪ್ರಯಾಣಿಸುವವರಿಗೆ ತಾಲೂಕಿನ ಚಿಕ್ಕನರ್ತಿ ಗ್ರಾಮದ ನಿರ್ವಾಹಕ ಎಂ.ಎಲ್. ನದಾಫ್ ಹಾಗೂ ಚಾಲಕ ಎಚ್.ಟಿ. ಮಾಯಣ್ಣವರ ಸ್ವಯಂಪ್ರೇರಿತರಾಗಿ ಮಾಸ್ಕ್ ವಿತರಿಸುತ್ತಿದ್ದಾರೆ.

ಸಾರಿಗೆ ಸಂಸ್ಥೆ ಅಭಿವೃದ್ಧಿಗೆ ಪ್ರಯಾಣಿಕರೇ ಆಧಾರ ಸ್ತಂಭ. ಪ್ರಯಾಣಿಕರು ಆರೋಗ್ಯವಾಗಿದ್ದರೆ ಸಂಸ್ಥೆ ಕೂಡ ಉತ್ತಮ ರೀತಿಯಲ್ಲಿ ಇರುತ್ತದೆ ಎಂಬ ಉದ್ದೇಶದಿಂದ ಕರೊನಾ ವೈರಸ್ ಹರಡದಂತೆ ಮುಂಜಾಗ್ರತೆ ಕ್ರಮವಾಗಿ ಪ್ರಯಾಣಿಕರಿಗೆ ಮಾಸ್ಕ್ ವಿತರಿಸುವ ಮೂಲಕ ಸಾರ್ವಜನಿಕರ ಪ್ರಶಂಸೆಗೆ ಪಾತ್ರರಾಗಿದ್ದಾರೆ. ಕರ್ತವ್ಯದ ಜತೆಗೆ ಸಾರ್ವಜನಿಕ ಸೇವೆ ಮಾಡುತ್ತಿರುವ ಹುಬ್ಬಳ್ಳಿ ಗ್ರಾಮಾಂತರ ಘಟಕದ ಚಾಲಕ ಹಾಗೂ ನಿರ್ವಾಹಕನ ಕಾರ್ಯಕ್ಕೆ ಸಂಸ್ಥೆಯ ಹಿರಿಯ ಅಧಿಕಾರಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಪ್ರಯಾಣಿಕರು ಭಯಪಡುವ ಅಗತ್ಯವಿಲ್ಲ. ಮುಂಜಾಗ್ರತೆ ಕ್ರಮವಾಗಿ ಎಚ್ಚರ ವಹಿಸಿದರೆ ಕರೊನಾ ರೋಗವನ್ನು ತಡೆಯಲು ಸಾಧ್ಯವಿದೆ ಎಂಬ ಉದ್ದೇಶಕ್ಕಾಗಿ ಉಚಿತವಾಗಿ ಮಾಸ್ಕ್ ವಿತರಿಸಲಾಗುತ್ತಿದೆ. | ಎಂ.ಎಲ್. ನದಾಫ್ ನಿರ್ವಾಹಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net