ಪ್ರಯಾಣಿಕರ ಜತೆ ಸೌಜನ್ಯದಿಂದ ವರ್ತಿಸಿ

ydg04
Published on

ಶಹಾಪುರ: ಆಟೋ ಚಾಲಕರು ಪ್ರಯಾಣಿಕರೊಂದಿಗೆ ಸೌಜನ್ಯದಿಂದ ವರ್ತಿಸಬೇಕು ಎಂದು ಸಿಐಟಿಯು ತಾಲೂಕು ಸಂಚಾಲಕ ಮಲ್ಲಯ್ಯ ಪೋಲಂಪಲ್ಲಿ ಹೇಳಿದರು.

ನಗರದ ಸಿಪಿಎಸ್ ಶಾಲಾ ಮೈದಾನದಲ್ಲಿ ಶಂಕರನಾಗ್ ಆಟೋ ಚಾಲಕರ ಸಂಘದ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಚಾಲಕರು ಆಟೋ ಯಾವುದೇ ಕಾರಣಕ್ಕೂ ಚಾಲನೆ ಮಾಡುವ ವೇಳೆ ಮದ್ಯ ಸೇವನೆ ಮಾಡಬಾರದು. ಅಲ್ಲದೆ ಸಂಚಾರಿ ನಿಯಮ ಕಡ್ಡಾಯವಾಗಿ ಪಾಲಿಸಬೇಕು ಎಂದು ಕಿವಿ ಮಾತು ಹೇಳಿದರು.

ಆಟೊ ಚಾಲಕರಲ್ಲಿ ಒಗ್ಗಟ್ಟು ಇರಬೇಕು. ಆಗ ಮಾತ್ರ ಚಾಲಕರಿಗೆ ಶಕ್ತಿ ಬರುತ್ತದೆ. ಚಾಲಕನ ಭವಿಷ್ಯಕ್ಕೆ ಪೂರಕವಾಗುವ ಭದ್ರತಾ ಯೋಜನೆಗಳನ್ನು ರೂಪಿಸುವಂತೆ ಮುಂದಿನ ದಿನಗಳಲ್ಲಿ ಹೋರಾಟ ನಡೆಸಲು ತಾವೆಲ್ಲರೂ ಸಿದ್ಧರಾಗಬೇಕು ಎಂದರು.

ದಿನಬೆಳಗಾದರೆ ಮೊದಲು ಕಾಣುವುದೇ ಆಟೋ ಚಾಲಕರು. ಕಾರಣ, ಚಾಲಕರಿಗೆ ಶಿಸ್ತು ಅತಿ ಮುಖ್ಯವಾಗಿದೆ. ಜತೆಗೆ ದಾಖಲಾತಿಗಳಿಲ್ಲದೆ ಆಟೋ ಚಾಲನೆ ಮಾಡುವುದು ಅಪರಾಧ. ಅಪಘಾತ ಘಟನೆಗಳು ನಡೆದಾಗ ದಾಖಲಾತಿಗಳು ಬಹಳ ಮುಖ್ಯವಾಗಿರುತ್ತವೆ ಎಂದು ಹೇಳಿದರು.
ಸಂಘದ ಅಧ್ಯಕ್ಷ ರವಿಚಂದ್ರ ಎದುರಿನಮನಿ, ಸಂಘದ ಕಾರ್ಯದರ್ಶಿ ಸಾಹೇಬ್ ಜಾನಿ ಮಾತನಾಡಿದರು. ಭೀಮರಾಯ ಶೆಟ್ಟಿಗೇರಿ, ಮೊಹಮ್ಮದ್ ರಫೀಕ್, ಭೀಮಣ್ಣ ದೇವಿ ನಗರ, ಮಲ್ಲಣ್ಣ ಹೊತಪೇಟ್, ದೇವಿಂದ್ರಪ್ಪ ರಾಮಣ್ಣ, ಮೊಹ್ಮದ್ ಯೂಸೂಫ್ ಇತರರಿದ್ದರು.

ಪದಾಧಿಕಾರಿಗಳ ಆಯ್ಕೆ: ರವಿಚಂದ್ರ ಎದುರಿನಮನಿ (ಅಧ್ಯಕ್ಷ), ಅಂಬಣ್ಣ ಸುರಪುರಕರ್ (ಗೌರವಾಧ್ಯಕ್ಷ), ಶಿವಪ್ಪ ಪೂಜಾರಿ, ಭೀಮರಾಯ ಮುಂಡಾಸ್ (ಉಪಾಧ್ಯಕ್ಷರು), ಸಾಹೇಬ್ ಜಾನಿ (ಪ್ರಧಾನಕಾರ್ಯದರ್ಶಿ), ಅಬ್ದುಲ್ ರಹಿಮಾನ್ (ಸಹ ಕಾರ್ಯದರ್ಶಿ), ಅಂಬಲಪ್ಪ ಪೂಜಾರಿ, ಈರಪ್ಪ ದೊಡ್ಮನಿ (ಖಜಾಂಚಿ).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net