ಪ್ರಯಾಣಿಕರ ಆರೋಗ್ಯ ತಪಾಸಣೆ

VJP-BLDE
ವಿಶ್ವ ಮಧುಮೇಹ ದಿನ ಆಚರಣೆ ಅಂಗವಾಗಿ ಸೋಮವಾರ ಬಿಎಲ್ಡಿಇ ಡೀಮ್ಡ್ ವಿಶ್ವವಿದ್ಯಾಲಯದ ಬಿ.ಎಂ. ಪಾಟೀಲ ವೈದ್ಯಕೀಯ ಮಹಾವಿದ್ಯಾಲಯ ಆಸ್ಪತ್ರೆ ಮತ್ತು ಸಂಶೋಧನೆ ಕೇಂದ್ರದ ವೈದ್ಯಕೀಯ ಸಿಬ್ಬಂದಿ ವಿಜಯಪುರ ನಗರ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರ ಆರೋಗ್ಯ ತಪಾಸಣೆ ಮಾಡುತ್ತಿರುವುದು.
Published on

ವಿಜಯಪುರ: ಬಸ್ಸಿನಲ್ಲಿ ಸಂಚರಿಸುವ ಪ್ರಯಾಣಿಕರ ಆರೋಗ್ಯ ತಪಾಸಣೆ ನಡೆಸುವ ಮೂಲಕ ಬಿಎಲ್ಡಿಇ ಡೀಮ್ಡ್ ವಿಶ್ವವಿದ್ಯಾಲಯದ ಬಿ.ಎಂ. ಪಾಟೀಲ ವೈದ್ಯಕೀಯ ಮಹಾವಿದ್ಯಾಲಯ ಆಸ್ಪತ್ರೆ ಮತ್ತು ಸಂಶೋಧನೆ ಕೇಂದ್ರದಿಂದ ವಿನೂತನವಾಗಿ ವಿಶ್ವ ಮಧುಮೇಹ ದಿನ ಆಚರಿಸಲಾಯಿತು.

ಸೋಮವಾರ, 60 ಜನ ತಜ್ಞ ವೈದ್ಯರು ನಾನಾ ಬಸ್ಸುಗಳಲ್ಲಿ ಪ್ರಯಾಣಿಸುತ್ತಿದ್ದ ಸುಮಾರು 1200 ಜನರ ತಪಾಸಣೆ ನಡೆಸಿದರು. ಅಲ್ಲದೇ, ಸಾರ್ವಜನಿಕರೊಂದಿಗೆ ಸಮಾಲೋಚನೆ ಮತ್ತು ಮಧುಮೇಹ ಮತ್ತು ಬಿಪಿ ಕುರಿತು ಜಾಗೃತಿ ಮೂಡಿಸಿದರು. ವೈದ್ಯಕೀಯ ಸ್ನಾತಕೋತ್ತರ ಪದವೀಧರರು ಮಧುಮೇಹದ ಗುಣ ಲಕ್ಷಣಗಳು ಮತ್ತು ಇದರ ಚಿಕಿತ್ಸಾ ಕ್ರಮದ ಬಗ್ಗೆ ಮಾಹಿತಿ ನೀಡಿದರು.

ಹೌಸ್ ಸರ್ಜನ್ಸ್ ತಂಡದಿಂದ ಮಧುಮೇಹ ತಪಾಸಣೆ ನಡೆಸಿದಾಗ ಇದೇ ಮೊದಲ ಬಾರಿಗೆ ರಕ್ತ ತಪಾಸಣೆಗೆ ಒಳಗಾದ ಶೇ. 15 ರಷ್ಟು ಜನರಲ್ಲಿ ಮಧುಮೇಹ ಇರುವುದು ಪತ್ತೆಯಾಯಿತು.

ಈಗಾಗಲೇ ಸಕ್ಕರೆ ಕಾಯಿಲೆ ಇರುವ ಶೇ. 40ರಷ್ಟು ಜನರಲ್ಲಿ ರಕ್ತದಲ್ಲಿನ ಸಕ್ಕರೆ ಅಂಶ ನಿಯಂತ್ರಣದಲ್ಲಿ ಇಲ್ಲದಿರುವ ಮಾಹಿತಿಯೂ ಈ ಸಂದರ್ಭದಲ್ಲಿ ದೃಢಪಟ್ಟಿತು. ಈ ಎಲ್ಲಾ ಜನರಿಗೆ ಉಚಿತ ಡಯಾಬೆಟಿಕ್ ಕ್ಲಿನಿಕ್ ಕಾರ್ಡ್‌ಗಳನ್ನು ವಿತರಿಸಿ ಮುಂದಿನ ತಪಾಸಣೆಗೆ ಆಸ್ಪತ್ರೆಗೆ ಭೇಟಿ ನೀಡಲು ವೈದ್ಯರು ಸೂಚನೆ ನೀಡಿದರು.
ಬಿಎಲ್ಡಿಇ ಸಂಸ್ಥೆ ಅಧ್ಯಕ್ಷ ಎಂ.ಬಿ. ಪಾಟೀಲ, ವಿವಿ ಉಪ ಕುಲಪತಿ ಡಾ. ಆರ್.ಎಸ್. ಮುಧೋಳ, ಕುಲಸಚಿವ ಡಾ. ಆರ್.ವಿ. ಕುಲಕರ್ಣಿ ಮಾರ್ಗದರ್ಶನದಲ್ಲಿ ಕಾಲೇಜಿನ ಪ್ರಾಚಾರ್ಯ ಡಾ. ಅರವಿಂದ ಪಾಟೀಲ, ಡಾ. ಎಸ್.ಎಸ್. ದೇವರಮನಿ, ಡಾ. ವಿಜಯಕುಮಾರ ವಾರದ, ಡಾ. ಪಿ.ಜಿ. ಮಂಟೂರ, ಡಾ. ಆನಂದ ಪಿ. ಅಂಬಲಿ, ಡಾ. ಉದಯಕುಮಾರ ನುಚ್ಚಿ, ಡಾ. ಅನುಜಾ ಭಾವಿ ಮತ್ತು ಸ್ನಾತಕೋತ್ತರ ಪದವೀದರರು ಪಾಲ್ಗೊಂಡಿದ್ದರು.

ಸೈಕಲ್ ಜಾಥಾ
ವಿಶ್ವ ಮಧುಮೇಹ ದಿನದ ಅಂಗವಾಗಿ ಸೋಮವಾರ ಬೆಳಗ್ಗೆ ಸೈಕಲ್ ಜಾಥಾ ಆಯೋಜಿಸಲಾಗಿತ್ತು. ಈ ಜಾಥಾಕ್ಕೆ ಬಿಎಲ್‌ಡಿಇ ಆಸ್ಪತ್ರೆಯ ವೈದ್ಯಕೀಯ ಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಶರಣ ಬಡಿಗೇರ ಚಾಲನೆ ನೀಡಿದರು. ಕಾಲೇಜಿನ ಪ್ರಾಚಾರ್ಯ ಡಾ. ಅರವಿಂದ ಪಾಟೀಲ, ವೈದ್ಯಕೀಯ ಅಧೀಕ್ಷಕ ಡಾ. ರಾಜೇಶ ಹೊನ್ನುಟಗಿ ಮತ್ತು ಹಿರಿಯ ವೈದ್ಯರಾದ ಡಾ. ಆರ್. ಸಿ. ಬಿದರಿ, ಡಾ. ಎಂ.ಎಸ್. ಮೂಲಿಮನಿ, ಡಾ. ಎಸ್.ಎನ್. ಬೆಂಟೂರ, ಡಾ. ಎಸ್.ಎಂ. ಬಿರಾದಾರ ಮತ್ತು ಇತರ ಹಿರಿಯ ವೈದ್ಯರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net