ಪ್ರಮುಖರನ್ನು ಬಂಧಿಸಿದ ಬಳ್ಳಾರಿ ಜೈಲು

Published on

ಬಳ್ಳಾರಿ : ಬ್ರಿಟಿಷರ ಆಡಳಿತ ಅವಧಿಯಲ್ಲಿ ನಿರ್ಮಿಸಿದ ಬಳ್ಳಾರಿ ಕೇಂದ್ರ ಕಾರಾಗೃಹದಲ್ಲಿ ಅಂದು ಸ್ವಾತಂತ್ರೃ ಹೋರಾಟಗಾರರನ್ನು ಬಂಧಿಸಲಾಗಿತ್ತು.
ಆದರೆ, ಅದೇ ಜೈಲಿನಲ್ಲಿ ಇಂದು ಗಲಭೆ, ಕೊಲೆ, ದರೋಡೆ, ಬಾಂಬ್ ಸ್ಫೋಟ ಸೇರಿದಂತೆ ವಿವಿಧ ಪ್ರಕರಣಗಳಲ್ಲಿ ಭಾಗಿಯಾದ ಪ್ರಮುಖ ಆರೋಪಿಗಳನ್ನು ಬಂಧಿಸುವಲ್ಲಿ ಹೆಸರುವಾಸಿಯಾಗಿದೆ. ಸದ್ಯ ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿ ನಟ ದರ್ಶನ್ ನನ್ನು ಬಂಧಿಸುವ ಮೂಲಕ ಮತ್ತೊಮ್ಮೆ ಮುನ್ನಲೆಗೆ ಬಂದಿದೆ. ಹದಿನಾರು ಎಕರೆ ವಿಸ್ತಿರ್ಣದಲ್ಲಿ 1884 ರಲ್ಲಿ ಸ್ಥಾಪನೆಯಾಗಿದೆ. ಏಳು ಎಕರೆ ವಿಸ್ತೀರ್ಣದಲ್ಲಿ ಆರೋಪಿಗಳನ್ನು ಇರಿಸಲು ಬಂಧಿಖಾನೆಗಳನ್ನು ನಿರ್ಮಿಸಲಾಗಿದೆ. ದೇಶದ ಅತ್ಯಂತ ಹಳೆಯ ಜೈಲುಗಳಲ್ಲಿ ಒಂದಾಗಿದ್ದು, ಕಲ್ಯಾಣ ಕರ್ನಾಟಕದಲ್ಲಿಯೇ ಪ್ರಮುಖ ಕಾರಾಗೃಹ ಎನಿಸಿಕೊಂಡಿದೆ.ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪರಪ್ಪನ ಜೈಲಿನಲ್ಲಿದ್ದ ನಟ ದರ್ಶನ್ ಹಾಗೂ ಸಹಚರರನ್ನು ರಾಜಾತಿಥ್ಯ ಹಿನ್ನಲೆಯಲ್ಲಿ ವಿವಿಧ ಜಿಲ್ಲೆಗಳಿಗೆ ಸ್ಥಳಾಂತರಿಸುವಂತೆ ನ್ಯಾಯಾಲಯ ಆದೇಶ ನೀಡಿದೆ. ನಟ ದರ್ಶನ್‌ನನ್ನು ಬಳ್ಳಾರಿ ಜೈಲಿಗೆ ಸ್ಥಳಾಂತರಿಸುವ ಸುದ್ದಿ ತಿಳಿದ ಹಲವು ಅಭಿಮಾನಿಗಳು ಮಂಗಳವಾರ ರಾತ್ರಿಯಿಂದಲೇ ನಟನನ್ನು ವೀಕ್ಷಿಸಲು ಆಗಮಿಸುತ್ತಿದ್ದಾರೆ. ಅಭಿಮಾನಿಗಳನ್ನು ಚದುರಿಸಲು ಪೊಲೀಸರು ಹರಸಾಹಸ ಪಡುತ್ತಿದ್ದಾರೆ. ಕಾರಾಗೃಹ ರಸ್ತೆಯ ಎರಡು ಬದಿಯಲ್ಲಿ ಬ್ಯಾರಿಕೇಡ್ ಅಳವಡಿಸಲಾಗಿದೆ. ಅಲ್ಲದೆ, ಸಾಮಾನ್ಯ ಕೈದಿಗಳನ್ನು ವೀಕ್ಷಣೆಗೆ ಸಂಬಂಧಿಕರಿಗೆ ಅನುಮತಿ ನಿರಾಕರಿಸಿದೆ.ಎಸ್ಪಿ ಡಾ. ವಿ.ಜೆ. ಶೋಭಾರಾಣಿ ಕಾರಾಗೃಹಕ್ಕೆ ಭೇಟಿ ನೀಡಿ ಬಂಧಿಖಾನೆಗಳ ಪರಿಸ್ಥಿತಿ, ಆರೋಪಿಗಳ ಸಂಖ್ಯೆ, ವಿವರ ಹಾಗೂ ಹೊರ ಭದ್ರತೆ ವಿಭಾಗದಲ್ಲಿನ ಸೆಲ್‌ಗಳ ಮಾಹಿತಿ ಪಡೆದರು. ದರ್ಶನ್‌ಗಾಗಿಯೇ ನೀರು, ಶೌಚಾಲಯ ಸೇರಿದಂತೆ ಹೈ ಸೆಕ್ಯೂರಿಟಿ ಸೌಲಭ್ಯವುಳ್ಳ ಸೆಲ್ ಸಿದ್ದತೆಗೊಳಿಸಲಾಗಿದೆ. ಸೆಲ್‌ನಲ್ಲಿದ್ದುಕೊಂಡೇ ಕೋರ್ಟ್ ಕಲಾಪ ವೀಕ್ಷಿಸಲು ವೀಡಿಯೋ ಕಾನ್ಫರೆನ್ಸ್ ವ್ಯವಸ್ಥೆ ಮಾಡಲಾಗಿದೆ. ಸಿಸಿ ಕ್ಯಾಮೆರಾಗಳನ್ನು ಅಳವಡಿಸಿ ನಿಗಾ ವಹಿಸಲಾಗುತ್ತಿದೆ ಎಂದು ತಿಳಿದು ಬಂದಿದೆ.
ಹಲವರ ಬಂಧನ : ದೇಶದ ಸ್ವಾತಂತ್ರೃ ಸಂಗ್ರಾಮದಲ್ಲಿ ಭಾಗವಹಿಸಿದ ಕಾಮರಾಜ್ ನಾಡಾರ್, ಪೊಟ್ಟಿ ಶ್ರೀರಾಮುಲು, ಸಂಜೀವರೆಡ್ಡಿ, ಬೇಜವಾಡ ಗೋಪಾಲರೆಡ್ಡಿ, ಟಿ. ಸುಬ್ರಹ್ಮಣ್ಯಂ, ಗಂಟಸಾಲ ವೆಂಕಟೇಶ್ವರ ರಾವ್, ಮಹಾವೀರ್ ಸಿಂಗ್, ಗಯಾ ಪ್ರಸಾದ್ ಅಂತಹ ಪ್ರಮುಖ ನಾಯಕರು ಈ ಕಾರಾಗೃಹದಲ್ಲಿ ಬಂಧಿಯಾಗಿದ್ದರು. ಅಲ್ಲದೆ, ಭೀಮ ತೀರದ ಹಂತಕರೊಬ್ಬರಾದ ಮಹಾದೇವ ಬೈರಗೊಂಡ, ಉಮೇಶ ರೆಡ್ಡಿ, ಬೆಂಗಳೂರು ಭೂಗತ ಲೋಕದ ಕೊರಂಗು ಕೃಷ್ಣ, ಹುಬ್ಬಳಿಯಲ್ಲಿ ನಡೆದಿದ್ದ ಕೋಮು ಗಲಭೆಗಳ ಆರೋಪಿಗಳು, ಅಕ್ರಮ ಗಣಿಗಾರಿಕೆ ಆರೋಪಿ ಜನಾರ್ದನರೆಡ್ಡಿ ಜೈಲಿನಲ್ಲಿ ಇರಿಸಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net