ಪ್ರಮುಖ ರೈಲುಗಳ ನಿಲುಗಡೆಗೆ ಒತ್ತಾಯ

08ydg01
Published on

ಯಾದಗಿರಿ: ಇಲ್ಲಿನ ರೈಲ್ವೆ ನಿಲ್ದಾಣದಲ್ಲಿ ಪ್ರಮುಖ ರೈಲುಗಳ ನಿಲುಗಡೆ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕರವೇ ಸಂಘಟನೆಯಿಂದ ನಗರಕ್ಕೆ ಆಗಮಿಸಿದ ಇಲಾಖೆ ಗುಂತಕಲ್ ವಿಭಾಗದ ಮುಖ್ಯ ವ್ಯವಸ್ಥಾಪಕರಿಗೆ ಶುಕ್ರವಾರ ಮನವಿ ಸಲ್ಲಿಸಲಾಯಿತು.

ಜಿಲ್ಲಾಕೇಂದ್ರವಾದ ಯಾದಗಿರಿ ನಗರದ ರೈಲ್ವೆ ನಿಲ್ದಾಣ ಮೂಲಸೌಕರ್ಯವಿಲ್ಲದೆ ನಿತ್ಯ ಪ್ರಯಾಣಿಕರು ತೊಂದರೆ ಅನುಭವಿಸುತ್ತಿದ್ದಾರೆ. ಕೆಲವೊಮ್ಮೆ ನಿಲ್ದಾಣದಲ್ಲಿ ವಿದ್ಯುತ್ ಸಮಸ್ಯೆ ಎದುರಾಗುತ್ತಿದೆ. ಗುಂತಕಲ್ ವಿಭಾಗದಲ್ಲಿ ತಿರುಪತಿ ಬಿಟ್ಟರೆ ಅತೀಹೆಚ್ಚು ಆದಾಯ ನೀಡುವ ಎರಡನೇ ನಿಲ್ದಾಣ ಯಾದಗಿರಿಯಾಗಿದೆ. ಆದರೆ, ಇಲಾಖೆ ಮಾತ್ರ ಇಲ್ಲಿನ ಪ್ರಯಾಣಿಕರಿಗೆ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ ಎಂದು ಕಾರ್ಯಕರ್ತರು ಆರೋಪಿಸಿದರು.

ಯಾದಗಿರಿ ಜಿಲ್ಲೆಯಾಗಿ 14 ವರ್ಷ ಕಳೆದಿದೆ. ಆದರೂ ಸಹ ರೈಲ್ವೆ ನಿಲ್ದಾಣದಲ್ಲಿ ಪ್ರಮುಖ ರೈಲುಗಳಾದ ರಾಜಧಾನಿ, ಸುಪರ್ಫಾಸ್ಟ್ ಹಾಗೂ ವೀಕ್ಲಿ ರೈಲುಗಳ ನಿಲುಗಡೆಯಾಗುತ್ತಿಲ್ಲ. ಅಲ್ಲದೆ, ಬೆಂಗಳೂರಿನಿಂದ ಕಾಚಿಗೂಡ (ಹೈದರಾಬಾದ್)ಗೆ ವಂದೇ ಭಾರತ್ ರೈಲು ಓಡಿಸಲಾಗುತ್ತಿದ್ದು, ಪಕ್ಕದ ರಾಯಚೂರಿಗೆ ನಿಲುಗಡೆ ಇದೆ. ಆದರೆ ಯಾದಗಿರಿ ನಿಲ್ಲಿಸದೆ ತಾರತಮ್ಯ ಮಾಡಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ನಿಲ್ದಾಣದಲ್ಲಿ ಎಸ್ಕೂಲೆಟರ್, ಶುದ್ಧ ಕುಡಿಯುವ ನೀರು, ಸ್ವಚ್ಛತೆ, ಸಮಪರ್ಕ ವಿದ್ಯುತ್ ಮತ್ತು ಮಹಿಳಾ ಪ್ರಯಾಣಿಕರ ವಿಶ್ರಾಂತಿ ಕೋಣೆಯಲ್ಲಿ ಮೂಲಸೌಲಭ್ಯ ಒದಗಿಸಬೇಕು. ಇಲ್ಲದಿದ್ದರೆ, ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಅನಿವಾರ್ಯವಾಗಲಿದೆ ಎಂದು ಎಚ್ಚರಿಕೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net