

ಚಿತ್ರದುರ್ಗ: ಅತ್ಯಾಕರ್ಷಕವಾಗಿ ಸಿದ್ಧಪಡಿಸಿದ್ದ ಭಾರತ ಸಂವಿಧಾನದ ಕಲಾಕೃತಿ, ಚಂದ್ರಯಾನ-3, ಶ್ರೀರಾಮಮಂದಿರ, ಮಳೆ ನೀರು ಕೊಯ್ಲಿಗೆ ಹೆಸರಾಗಿರುವ ಕೋಟೆ, ಶ್ರೀ ಶಿವಕುಮಾರ ಸ್ವಾಮೀಜಿ, ಶ್ರೀ ಸಿದ್ದೇಶ್ವರ ಸ್ವಾಮೀಜಿ, ಶ್ರೀ ಪುಟ್ಟರಾಜ ಗವಾಯಿಗಳ ಕಲಾಕೃತಿ ಮಾದರಿಗಳು ಗಮನ ಸೆಳೆದವು. ಜೊತೆಗೆ ಫಲಪುಷ್ಪಗಳ ರಂಗವಲ್ಲಿ ಕೋಟೆನಗರಿಯ ಜನರನ್ನು ಕೈ ಬೀಸಿ ಕರೆಯಿತು…
ಈ ಸುಂದರ ದೃಶ್ಯ ಕಂಡುಬಂದಿದ್ದು, ತೋಟಗಾರಿಕೆ ಇಲಾಖೆಯ ಅಂಗಳದಲ್ಲಿ. ಫೆ. 2ರಿಂದ ಭಾನುವಾರದವರೆಗೂ ಆಯೋಜಿಸಿದ್ದ ‘ಫಲಪುಷ್ಪ ಪ್ರದರ್ಶನ’ ಕಣ್ಮನ ಸೆಳೆಯಿತು. ವಿವಿಧ ಬಗೆಯ ಪುಷ್ಪಗಳು, ತರಹೇವಾರಿ ಹಣ್ಣುಗಳು, ವಿದ್ಯುದ್ದೀಪಾಲಂಕಾರ ನೋಡುಗರನ್ನು ತನ್ನತ್ತ ಆಕರ್ಷಿಸಿ ಮನಸೂರೆಗೊಳಿಸಿತು.
ಮಳೆ ನೀರು ಕೊಯ್ಲಿಗೆ ಮಾದರಿಯಾಗಿರುವ ಕೋಟೆಯೊಳಗಿನ ಗೋಪಾಲಸ್ವಾಮಿ, ಅಕ್ಕ-ತಂಗಿ ಹೊಂಡ, ಸಂತೆ ಹೊಂಡ, ಶ್ರೀ ಸಂಪಿಗೆ ಸಿದ್ದೇಶ್ವರಸ್ವಾಮಿ ದೇಗುಲ ಸೇರಿ ಐತಿಹಾಸಿಕ ಸ್ಥಳಗಳ ಮಾದರಿ ವಿಶೇಷ ಆಕರ್ಷಣೆಯಾಗಿ ಕಂಡು ಬಂದವು.
ಕೇಸರಿ, ಬಿಳಿ, ಹಸಿರು ವರ್ಣಗಳ ತರಕಾರಿಗಳಿಂದ ರಾಷ್ಟ್ರಧ್ವಜದ ತ್ರಿವರ್ಣ ಮಾದರಿ, ಡಾ.ರಾಜ್‌ಕುಮಾರ್ ಕಲಾಕೃತಿ, ಪುನೀತ್ ರಾಜ್‌ಕುಮಾರ್, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿಗಳ ಭಾವಚಿತ್ರಗಳು ಕಲ್ಲಂಗಡಿ ಹಣ್ಣಿನ ಕೆತ್ತನೆಯೊಳಗೆ ಕಂಗೊಳಿಸಿದವು. ಇದೇ ವೇಳೆ ಜಿಲ್ಲೆಯ ರೈತರು ಬೆಳೆದ ಹಲವು ಬಗೆಯ ಹೂವು, ಹಣ್ಣು, ತರಕಾರಿ ಒಳಗೊಂಡು ತೋಟಗಾರಿಕೆ ಬೆಳೆಗಳಿಗೆ ಉತ್ತೇಜನ ನೀಡಲಾಗಿದೆ.
ಮುದ ನೀಡಿದ ಕಲಾಕೃತಿಗಳು: ಇಸ್ರೋದ ಚಂದ್ರಯಾನ-3ರ ಸಾಧನೆ ಬಿಂಬಿಸುವ, ಚಂದ್ರನ ದಕ್ಷಿಣ ಧ್ರುವದಲ್ಲಿ ಸಾಫ್ಟ್‌ಲ್ಯಾಂಡಿಂಗ್, ಅಂಗಳದಲ್ಲಿ ಲ್ಯಾಂಡರ್ ವಿಕ್ರಮ್ ಹಾಗೂ ರೋವರ್ ಪ್ರಜ್ಞಾನ್ ಮಾದರಿಯ ಕಲಾಕೃತಿ ಭಾರತದ ಹೆಮ್ಮೆ, ಘನತೆಯನ್ನು ಎತ್ತಿ ಹಿಡಿಯುವಂತಿತ್ತು. ಇನ್ನೂ ಫಲಪುಷ್ಪಗಳ ನಡುವೆ ಜನರನ್ನು ಆಕರ್ಷಿಸಲು ಗ್ರಾಮೀಣ ಸೊಗಡು, ತರಕಾರಿ ಮನೆ, ತೋಟದ ಮನೆ, ಔಷಧೀಯ ಸಸ್ಯಗಳು ಸೇರಿ ಒಟ್ಟಾರೆ ಪ್ರದರ್ಶನ ಚಿಣ್ಣರಿಂದ ಹಿರಿಯರವರೆಗೂ ಮನಕ್ಕೆ ಮುದ ನೀಡುವಂತ್ತಿತ್ತು.
ಕಲಾಕೃತಿಗಳ ಮುಂಭಾಗ ಪುಟಾಣಿಗಳು: ಯುವಕ-ಯುವತಿಯರು ಮೊಬೈಲ್‌ಗಳಲ್ಲಿ ಸೆಲ್ಫಿ ಕ್ಲಿಕ್ಕಿಸಿಕೊಳ್ಳುತ್ತಿದ್ದರು. ಕೆಲವರು ಪ್ರೋಫೆಷನಲ್ ಕ್ಯಾಮೆರಾಕ್ಕೂ ಫೋಸ್ ನೀಡುತ್ತ ಪುಷ್ಪಗಳೊಂದಿಗೆ ಫೋಟೊ ಕ್ಲಿಕ್ಕಿಸಿಕೊಳ್ಳುವ ಕ್ರೇಜ್ ಕೂಡ ಕಂಡು ಬಂದಿತು. ಕಲಾಕೃತಿಗಳ ಮುಂಭಾಗ ಪುಟಾಣಿಗಳ ಚಿತ್ರ ಕ್ಲಿಕ್ಕಿಸುವಲ್ಲೂ ಪಾಲಕರು ಉತ್ಸುಕರಾಗಿದ್ದು ಕಂಡು ಬಂದಿತು.
ಜಿಲ್ಲಾ ಉಸ್ತುವಾರಿ ಸಚಿವ ಮಾತನಾಡಿ, ಕೋಲಾರ ಜಿಲ್ಲೆಯಲ್ಲಿ ಅತಿ ಹೆಚ್ಚು ತರಕಾರಿ, ಫಲ-ಪುಷ್ಪ ಬೆಳೆಯುವ ಮೂಲಕ ತೋಟಗಾರಿಕೆ ಅವಲಂಬಿಸಿದ್ದಾರೆ. ಅದರಂತೆ ಚಿತ್ರದುರ್ಗ ಜಿಲ್ಲೆಯ ರೈತರು ಮುಂದಾಗಬೇಕು. ಅಗತ್ಯವಿರುವೆಡೆ ಕೋಲ್ಡ್ ಸ್ಟೋರೇಜ್ ಘಟಕ ನಿರ್ಮಾಣಕ್ಕೆ ಕ್ರಮವಹಿಸಲಾಗುವುದು ಎಂದು ಭರವಸೆ ನೀಡಿದರು.
ಚಳ್ಳಕೆರೆ ಶಾಸಕ ಟಿ.ರಘುಮೂರ್ತಿ ಮಾತನಾಡಿ, ಇಲ್ಲಿನ ಪ್ರತಿ ಮಾದರಿಗಳು ಉಪಯುಕ್ತ ಮಾಹಿತಿ ಮತ್ತು ಸಂದೇಶ ನೀಡಲಿವೆ. ಫಲ-ಪುಷ್ಪ ಪ್ರದರ್ಶನ ವೀಕ್ಷಿಸುವ ಮೂಲಕ ಜಿಲ್ಲೆಯ ರೈತರು ತೋಟಗಾರಿಕೆ ಬೆಳೆಗಳತ್ತ ಆಸಕ್ತಿ ಬೆಳೆಸಿಕೊಂಡು ಉತ್ತಮ ಆದಾಯ ಗಳಿಸಬೇಕು. ಆರ್ಥಿಕವಾಗಿ ಸದೃಢರಾಗಬೇಕು ಎಂದು ಸಲಹೆ ನೀಡಿದರು.
ಹೊಸದುರ್ಗ ಶಾಸಕ ಬಿ.ಜಿ.ಗೋವಿಂದಪ್ಪ, ಚಿತ್ರದುರ್ಗ ತಾಲೂಕಿನಲ್ಲಿ ಹೆಚ್ಚಾಗಿ ಪುಷ್ಪ, ಹಿರಿಯೂರು ಭಾಗದಲ್ಲಿ ಹಣ್ಣುಗಳನ್ನು ರೈತರು ಬೆಳೆಯುತ್ತಿದ್ದಾರೆ. ಅವುಗಳನ್ನು ಜಿಲ್ಲೆಯ ಇನ್ನಿತರೆ ತಾಲೂಕಿನ ರೈತರಿಗೂ ಪರಿಚಯಿಸುವ ಕೆಲಸವಾಗಬೇಕು. ಆಸಕ್ತ ರೈತರು ವೀಕ್ಷಿಸಲು ವ್ಯವಸ್ಥೆ ಕಲ್ಪಿಸಿ, ಉತ್ತೇಜಿಸಬೇಕಿದೆ ಎಂದು ಕಿವಿಮಾತು ಹೇಳಿದರು.
ಎಂಎಲ್ಸಿ ಕೆ.ಎಸ್.ನವೀನ್ ಮಾತನಾಡಿ, ಜಿಲ್ಲೆಯ ರೈತರಿಗೆ ಅವಶ್ಯವಿರುವ ಕೋಲ್ಡ್ ಸ್ಟೋರೇಜ್ ಘಟಕ ಹಾಗೂ ಗ್ಲಾಸ್ ಹೌಸ್ ನಿರ್ಮಿಸಲು ಸರ್ಕಾರ ಮುಂದಾಗಬೇಕು. ಮುಂದಿನ ವರ್ಷದ ಫಲ-ಪುಷ್ಪ ಪ್ರದರ್ಶನವನ್ನು ಗ್ಲಾಸ್ ಹೌಸ್‌ನೊಳಗೆ ಆಯೋಜಿಸಬೇಕು ಎಂದು ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದರು.
ಜಿಪಂ ಸಿಇಒ ಎಸ್.ಜೆ.ಸೋಮಶೇಖರ್, ಮುಖ್ಯ ಯೋಜನಾಧಿಕಾರಿ ಸತೀಶ್ ರೆಡ್ಡಿ, ಉಪವಿಭಾಗಾಧಿಕಾರಿ ಎಂ.ಕಾರ್ತಿಕ್, ತಹಸೀಲ್ದಾರ್ ಡಾ.ನಾಗವೇಣಿ, ತೋಟಗಾರಿಕೆ ಇಲಾಖೆ ಉಪನಿರ್ದೇಶಕಿ ಜಿ.ಸವಿತಾ, ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ ಬಿ.ದೇವರಾಜು, ಜಿಲ್ಲಾ ತೋಟಗಾರಿಕೆ ಸಂಘದ ಖಜಾಂಚಿ ನಾಗರಾಜ ಬೇದ್ರೆ, ಸಹ ಕಾರ್ಯದರ್ಶಿ ಗಿರೀಶ್, ಜಿಪಂ ಮಾಜಿ ಸದಸ್ಯ ಬಾಬುರೆಡ್ಡಿ ಇತರರಿದ್ದರು.