

ಗದಗ: ಜನನ-ಮರಣ ನೋಂದಣಿ ವೈಯಕ್ತಿಕ ಅನುಕೂಲಗಳಿಗಾಗಿ ಹಾಗೂ ಸಾಮಾಜಿಕ ಸ್ಥಾನಮಾನಕ್ಕೆ ಸುರಕ್ಷತೆಯನ್ನು ಒದಗಿಸಲು ಅತಿ ಪ್ರಮುಖವಾದ ದಾಖಲೆಯಾಗಿದೆ. ಎಲ್ಲ ನೋಂದಣಾಧಿಕಾರಿಗಳು ಜನನ-ಮರಣ ನೋಂದಣಿಯನ್ನು ಕಾಲಮಿತಿಯೊಳಗೆ ಸಂಬಂಧಿಸಿದ ತಂತ್ರಾಂಶದಲ್ಲಿ ದಾಖಲಿಸಲು ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್. ಅವರು ಅಧಿಕಾರಿಗಳಿಗೆ ಸೂಚಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ಜಿಲ್ಲಾ ಮಟ್ಟದ ಜನನ-ಮರಣ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ‘ಜನನ-ಮರಣ ನೋಂದಣಿಗಾಗಿ ನಿಯೋಜಿತ ನೋಂದಣಾಧಿಕಾರಿಗಳು ಪ್ರಮಾಣ ಪತ್ರಕ್ಕೆ ಸಹಿ ಮಾಡುವುದರ ಮೂಲಕ ನೋಂದಣಿಗಾಗಿ ನಿಗದಿಪಡಿಸಲಾದ ತಂತ್ರಾಂಶದಲ್ಲಿ ಕಾಲಮಿತಿಯೊಳಗಾಗಿ ದಾಖಲಿಸಲು ಕ್ರಮ ಕೈಗೊಳ್ಳಬೇಕು’ ಎಂದರು.
ನೋಂದಣಿ ಕಾರ್ಯದಲ್ಲಿ ನ್ಯೂನತೆಗಳು ಕಂಡುಬಂದರೆ ಕೂಡಲೆ ಅವುಗಳನ್ನು ಸರಿಪಡಿಸಿ ವಿಳಂಬಕ್ಕೆ ಆಸ್ಪದ ನೀಡದೆ ನೋಂದಣಿಯಾಗುವಂತೆ ನಿಗಾವಹಿಸಬೇಕು. ತಾಲೂಕು ಕೇಂದ್ರಗಳಲ್ಲಿ ತಹಸೀಲ್ದಾರರು ಈ ಕುರಿತು ಸಭೆ ನಡೆಸಿ ವರದಿ ನೀಡಬೇಕು ಎಂದರು.
ಜನನ-ಮರಣ ನೋಂದಣಿ ಪ್ರಮಾಣ ಪತ್ರ ವಿತರಣೆಯಿಂದ ಜಮೆ ಆಗುವ ಮೊತ್ತವನ್ನು ನಿಯಮಿತವಾಗಿ ಸರ್ಕಾರಕ್ಕೆ ಜಮೆ ಮಾಡುವದರ ಜತೆಗೆ ಈ ವಿಷಯಕ್ಕೆ ಸಂಬಂಧಿಸಿದಂತೆ ಕಾಲ ಕಾಲಕ್ಕೆ ಹೊರಡಿಸಲಾಗುವ ಆದೇಶಗಳನ್ನು ಪಾಲಿಸಲು ಸೂಚನೆ ನೀಡಿದರು.
ಜನನ-ಮರಣ ಪ್ರಮಾಣಪತ್ರ ಕುರಿತ ಮಾಹಿತಿಯನ್ನು ನೋಂದಣಿ ಮಾಡುವ ಮುನ್ನ ಕೂಲಂಕಷವಾಗಿ ಪರಿಶೀಲಿಸಬೇಕು. ಪ್ರಮಾಣಪತ್ರ ವಿತರಣೆಗೆ ಸಂಬಂಧಿಸಿದಂತೆ ಸಾರ್ವಜನಿಕರ ಕಚೇರಿ ಅಲೆದಾಟ ತಪ್ಪಿಸಲು ನಿಗಾವಹಿಸಬೇಕು ಎಂದು ಜಿಲ್ಲಾಧಿಕಾರಿ ವೈಶಾಲಿ.ಎಂ.ಎಲ್. ಸೂಚನೆ ನೀಡಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಎಂ.ಪಿ.ಮಾರುತಿ, ಉಪವಿಭಾಗಾಧಿಕಾರಿ ಅನ್ನಪೂರ್ಣ, ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಬಸವರಾಜ ಅಡವಿಮಠ ಸೇರಿದಂತೆ ತಹಸೀಲ್ದಾರರು, ಸ್ಥಳೀಯ ಸಂಸ್ಥೆಗಳ ಮುಖ್ಯಾಧಿಕಾರಿಗಳು ಇದ್ದರು.
ಜಿಲ್ಲೆಯ ಗ್ರಾಮೀಣ ಪ್ರದೇಶದಲ್ಲಿ 365, ಪಟ್ಟಣ ಪ್ರದೇಶಗಳಲ್ಲಿ 19 ಒಟ್ಟು 384 ನೋಂದಣಿ, ಉಪನೋಂದಣಿ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ. ಜನವರಿ 2022ರಿಂದ ಇಲ್ಲಿವರೆಗೆ ಕಾಲಮಿತಿಯೊಳಗೆ ಶೇ. 99.44ರಷ್ಟು ಜನನ ನೋಂದಣಿ ಕಾರ್ಯ ಮಾಡಲಾಗಿದೆ. ಎಂ.ಎ.ಕಂಬಾಳಿಮಠ, ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ