

ಬೀದರ್: ಲಿಂಗಾಯತ ಮಹಾ ಮಠದ ಶ್ರೀ ಪ್ರಭುದೇವ ಸ್ವಾಮೀಜಿ ಇಲ್ಲಿನ ಬಸವಗಿರಿಯಲ್ಲಿ ೨೧ ದಿನದ ಮೌನ ಶಿವಯೋಗ ಅನುಷ್ಠಾನ ಇತ್ತೀಚೆಗೆ ಆರಂಭಿಸಿದರು.
ಗುರು ಪೂಜೆ, ಸಾಮೂಹಿಕ ಪ್ರಾರ್ಥನೆ, ಇಷ್ಟಲಿಂಗ ಯೋಗ, ವಚನ ಪಠಣ ಹಾಗೂ ಷಟಸ್ಥಲ ಧ್ವಜಾರೋಹಣದೊಂದಿಗೆ ಅನುಷ್ಠಾನಕ್ಕೆ ಚಾಲನೆ ನೀಡಲಾಯಿತು. ಅಂತರಂಗದ ವಿಕಾಸಕ್ಕೆ ಶಿವಯೋಗ ಅನುಷ್ಠಾನ ಅವಶ್ಯಕ. ಪ್ರಭುದೇವ ಸ್ವಾಮೀಜಿ ಈ ಹಿಂದೆ ಮೂರು ಸಲ ಅನುಷ್ಠಾನ ಕೈಗೊಂಡಿದ್ದರು. ಪೂಜ್ಯ ಅನ್ನಪೂರ್ಣ ಅಕ್ಕ ಆಶಯದಂತೆ ಇದೀಗ ನಾಲ್ಕನೇ ಬಾರಿಗೆ ೨೧ ದಿನದ ಅನುಷ್ಠಾನ ಕೈಗೊಳ್ಳುತ್ತಿದ್ದಾರೆ ಎಂದು ಸಾಹಿತಿ ರಮೇಶ ಮಠಪತಿ ಹೇಳಿದರು.
ಅನುಷ್ಠಾನ ಅವಧಿಯಲ್ಲಿ ಸ್ವಾಮೀಜಿ ಮೌನವಾಗಿ ಇರಲಿದ್ದು, ನೀರು, ಹಣ್ಣು ಹಂಪಲು ಮಾತ್ರ ಸೇವಿಸಲಿದ್ದಾರೆ. ಪ್ರತಿದಿನ ನಸುಕಿನ ಜಾವ ಮತ್ತು ರಾತ್ರಿ ಶಿವಯೋಗ ಸಾಧನೆ, ವಚನಗಳ ಅಧ್ಯಯನ ಮಾಡಲಿದ್ದಾರೆ. ಶ್ರಾವಣ ಪ್ರವಚನ ಪೂರ್ವದಲ್ಲಿ ತಮ್ಮೊಳಗಿನ ಆಧ್ಯಾತ್ಮಿಕತೆಯನ್ನು ವಿಕಾಸಗೊಳಿಸುವುದು ಶ್ರೀಗಳ ಅನುಷ್ಠಾನದ ಉದ್ದೇಶ. ಅನುಷ್ಠಾನ ವೇಳೆ ಬಹಿರಂಗದ ಯಾವುದೇ ಚಟುವಟಿಕೆಗೆ ಆಸ್ಪದ ನೀಡದೆ ಸಂಪೂರ್ಣ ಆಧ್ಯಾತ್ಮ ಸಾಧನೆಯತ್ತಲೇ ಗಮನಹರಿಸಲಿದ್ದಾರೆ ಎಂದು ತಿಳಿಸಿದರು.
ಶ್ರೀ ಪ್ರಭುದೇವ ಸ್ವಾಮೀಜಿ ಮಾತನಾಡಿ, ಜಗತ್ತನ್ನು ನೋಡುವ ಕಣ್ಣುಗಳು ತನ್ನನ್ನು ತಾನು ನೋಡಲಾರವು. ಏನು ನೋಡಿದರೂ ತನ್ನನ್ನು ತಾನು ನೋಡಿಕೊಳ್ಳದಿರುವುದು ಶರಣರ ದೃಷ್ಟಿಯಲ್ಲಿ ಕುರುಡುತನ. ಹೊರಗಿನ ಎಲ್ಲವನ್ನು ಕೇಳುವ ನಾವು ಎಂದಾದರೂ ನಮ್ಮ ಹೃದಯಬಡಿತ, ಉಸಿರಾಟದ ಶಬ್ದ ಕೇಳಲು ಪ್ರಯತ್ನಿಸಿದ್ದೇವೆಯೇ ಎಂದು ಪ್ರಶ್ನಿಸಿದರು.
ಒಂದು ಮರ ಎತ್ತರ ಬೆಳೆಯಬೇಕೆಂದರೆ ಬೇರುಗಳು ಸಹ ಅಷ್ಟೇ ಆಳಕ್ಕಿಳಿಯಬೇಕಾಗುತ್ತದೆ. ಬಹಿರಂಗದಲ್ಲಿ ವಿಸ್ತಾರವಾಗಬೇಕಾದರೆ ಅಂತರಂಗದ ವಿಕಾಸವೂ ಬಹಳ ಮುಖ್ಯ. ಅದಕ್ಕಾಗಿಯೇ ಮೌನ, ಅಧ್ಯಯನ, ಶಿವಯೋಗ ಸಾಧನೆಗಳು ಮುಖ್ಯವಾಗುತ್ತವೆ ಎಂದರು.
ಗುರುವಚನ ಪರುಷಕಟ್ಟೆ, ಅಕ್ಕನ ಐಕ್ಯ ಮಂಟಪದಲ್ಲಿ ಸಾಮೂಹಿಕ ವಚನ ಪಠಣಗೈದು ಮೌನಕ್ಕೆ ಜಾರಿ ಅನುಷ್ಠಾನದ ಗುಡಿಸಲು ಪ್ರವೇಶಿಸಿದರು. ಪರುಷಕಟ್ಟೆಯ ಚನ್ನಬಸವಣ್ಣ ಪ್ರಾರ್ಥನೆಗೈದರು. ನೀಲಮ್ಮನ ಬಳಗದ ಸಹೋದರಿಯರು ಗುರುಪೂಜೆ ಮಾಡಿದರು. ಶಿವಕುಮಾರ ಪಾಖಾಲ್, ಮಾಣಿಕಪ್ಪ ಗೋರನಾಳೆ, ಸಿ.ಎಸ್. ಗಣಾಚಾರಿ ಇತರರಿದ್ದರು.
ನಮ್ಮ ಗುರುಗಳು ಪ್ರತಿವರ್ಷ ಶ್ರಾವಣ ಮಾಸದಲ್ಲಿ ಪ್ರವಚನದೊಂದಿಗೆ ಮೌನ ಅನುಷ್ಠಾನ ಕೈಗೊಳ್ಳುತ್ತಿದ್ದರು. ಗುರುಗಳ ಅನುಷ್ಠಾನದ ಮಾದರಿ ಅನುಸರಿಸಿ ಇಪ್ಪತ್ತೊಂದು ದಿನ ಬಸವಗಿರಿಯ ಸುಂದರ ಪರಿಸರದಲ್ಲಿ ನಿರ್ಮಿಸಿದ ಗುಡಿಸಲಿನಲ್ಲಿ ಅನುಷ್ಠಾನ ಕೈಗೊಳ್ಳುತ್ತಿರುವೆ.
| ಶ್ರೀ ಪ್ರಭುದೇವ ಸ್ವಾಮೀಜಿ
ಲಿಂಗಾಯತ ಮಹಾ ಮಠ