

ಪಾಂಡವಪುರ: ಪರಿಶಿಷ್ಟ ಜಾತಿ ಮತ್ತು ಪಂಗಡದ ಕಾಲನಿಗೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಪ್ರಭಾವಿಗಳು ಅಕ್ರಮವಾಗಿ ನಿರ್ಮಿಸಿರುವ ಕಟ್ಟಡಗಳನ್ನು ತೆರವುಗೊಳಿಸಿ ಸಂಚಾರಕ್ಕೆ ಅನುಕೂಲ ಮಾಡಕೊಡಬೇಕೆಂದು ಆಗ್ರಹಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಸದಸ್ಯರು ಮತ್ತು ತಾಲೂಕಿನ ಚಿಕ್ಕಯಾರಹಳ್ಳಿ ಗ್ರಾಮಸ್ಥರು ತಾಲೂಕು ಪಂಚಾಯಿತಿ ಕಚೇರಿ ಮುತ್ತಿಗೆ ಹಾಕಿ ಮಂಗಳವಾರ ಪ್ರತಿಭಟನೆ ನಡೆಸಿದರು.
ಸಾರ್ವಜನಿಕ ರಸ್ತೆ ಆಕ್ರಮಿಸಿಕೊಂಡು ಶೌಚಗೃಹ, ಕಾಂಪೌಂಡ್ ನಿರ್ಮಿಸಿರುವ ವ್ಯಕ್ತಿಗಳ ವಿರುದ್ಧ ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಿಲ್ಲ ಎಂದು ಆರೋಪಿಸಿ ಧಿಕ್ಕಾರದ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ನಾರ್ಥ್‌ಬ್ಯಾಂಕ್ ಗ್ರಾಮದಿಂದ ಚಿಕ್ಕಯಾರಹಳ್ಳಿ ಕಾಲನಿಗೆ ತೆರಳುವ ರಸ್ತೆಯನ್ನು ಆಕ್ರಮಿಸಿಕೊಳ್ಳಲಾಗಿದೆ. ಇದರಿಂದ ಸಾರ್ವಜನಿಕರ ಸಂಚಾರಕ್ಕೆ ತೊಂದರೆಯಾಗಿದೆ. ಈ ರಸ್ತೆಯಲ್ಲಿ ಚರಂಡಿ ನಿರ್ಮಾಣ ಮಾಡಲಾಗುತ್ತಿದ್ದು, ರಸ್ತೆ ಒತ್ತುವರಿಯಾಗಿದ್ದರೂ ಕಟ್ಟಡ ತೆರವುಗೊಳಿಸದೆ ಯಥಾಸ್ಥಿತಿಯಲ್ಲಿ ರಸ್ತೆ ಮಧ್ಯೆ ಭಾಗಕ್ಕೆ ಚರಂಡಿ ನಿರ್ಮಿಸಲಾಗುತ್ತಿದೆ ಎಂದು ಕಿಡಿಕಾರಿದರು.
ವಿಷಯ ತಿಳಿದು ಸ್ಥಳಕ್ಕಾಗಮಿಸಿದ ತಾಲೂಕು ಪಂಚಾಯಿತಿ ಇಒ ಲೋಕೇಶ್ ಮೂರ್ತಿ ಅವರಿಗೆ ಪ್ರತಿಭಟನಾಕಾರರು ಮನವಿ ಸಲ್ಲಿಸಿದರು. ಖುದ್ದು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ ಬಳಿಕ ಸೂಕ್ತ ಕ್ರಮ ಕೈಗೊಳ್ಳುವುದಾಗಿ ತಾಪಂ ಇಒ ಭರವಸೆ ನೀಡಿದ ಬಳಿಕ ಪ್ರತಿಭಟನೆ ಹಿಂಪಡೆಯಲಾಯಿತು.
ಪ್ರತಿಭಟನೆಯಲ್ಲಿ ಕದಸಂ ಸಮಿತಿ ರಾಜ್ಯ ಸಂಚಾಲಕ ಸೋಮನಹಳ್ಳಿ ಅಂದಾನಿ, ರಾಜ್ಯ ವಿಭಾಗೀಯ ಸಂಚಾಲಕ ಡಿ.ಕೆ.ಅಂಕಯ್ಯ, ಜಿಲ್ಲಾ ಸಂಚಾಲಕ ಎಂ.ಶಿವು, ತಾಲೂಕು ಸಂಚಾಲಕರಾದ ನಾರಾಯಣಮೂರ್ತಿ, ಮಹದೇವ, ಮಧುಕುಮಾರ್, ದೇವಮ್ಮ, ಮರಿಯಮ್ಮ, ಜಯಮ್ಮ, ಸಾಕಮ್ಮ, ನಿಂಗಮ್ಮ ಇತರರು ಇದ್ದರು.