

ತುಮಕೂರು: ಪ್ರತಿದಿನ ಭಯದಲ್ಲಿ ಕೆಲಸ ಮಾಡುವಂತಾಗಿದೆ, ಯಾರು ಯಾವ ಅರ್ಜಿ ಹಾಕ್ತಾರೋ ಎಂಬ ಆತಂಕದಲ್ಲಿದ್ದೇನೆ, ಏನಾದ್ರು ಮಾಡಿ, ಯಾವುದೇ ಮಹತ್ವದ ನಿರ್ಧಾರ ನನ್ನಿಂದ ಅಸಾಧ್ಯ ಎಂದು ತುಮಕೂರು ವಿವಿ ಪ್ರಭಾರ ಕುಲಪತಿ ಪ್ರೊ.ಕೇಶವ ಅಸಹಾಯಕತೆ ತೋಡಿಕೊಂಡಿರುವುದು ಸಿಂಡಿಕೇಟ್ ಸದಸ್ಯರನ್ನು ಕೆರಳಿಸಿದೆ.
ಕುಲಪತಿ ಕಚೇರಿಯಲ್ಲಿ ಮಂಗಳವಾರ ಆಯೋಜಿಸಿದ್ದ ಸಿಂಡಿಕೇಟ್ ಸಭೆಯಲ್ಲಿ ತಿಪಟೂರು ತಾಲೂಕು ರಂಗಾಪುರ ಹೊಸ ಕ್ಯಾಂಪಸ್ ನಿರ್ಮಾಣ ಸೇರಿ ಮಹತ್ವದ ವಿಷಯಗಳಿಗೆ ಒಪ್ಪಿಗೆ ನೀಡುವಂತೆ ಸದಸ್ಯರ ಪ್ರಸ್ತಾಪವನ್ನು ವಿಸಿ ತಿರಸ್ಕರಿಸಿದ್ದು, ಸಭೆಯಿಂದ ಎಲ್ಲರೂ ಅರ್ಧದಲ್ಲಿಯೇ ಎದ್ದು ಹೊರಬಂದಿದ್ದಾರೆ.
40 ಮಹತ್ವದ ವಿಷಯಗಳನ್ನು ಅಜೆಂಡಾದಲ್ಲಿ ಇಟ್ಟುಕೊಂಡು ಆಯೋಜಿಸಿದ್ದ ಸಭೆಯಲ್ಲಿ ಪ್ರಭಾರ ಕುಲಪತಿ ಪ್ರೊ.ಕೇಶವ ಅವರ ಅಸಹಾಯಕತೆಗೆ ಸಿಟ್ಟಾದ ಕೆಲ ಸದಸ್ಯರು, ಬೋರ್ಡ್ನಲ್ಲಿ ಹೆಸರು ಹಾಕಿಸಿಕೊಳ್ಳಲು ಪ್ರಭಾರ ಹುದ್ದೆ ಅಲಂಕರಿಸಿದ್ದೀರ ಎಂಬ ಮಾತಿಗೆ ಚಕಮಕಿ ಕೂಡ ನಡೆದಿದೆ ಎನ್ನಲಾಗಿದೆ.
ವಿವಿಯಲ್ಲಿ ಕೆಲವು ಅಧ್ಯಯನ ಪೀಠದಲ್ಲಿ ಕಾರ್ಯಚಟುವಟಿಕೆಗಳು ಸ್ಥಗಿತವಾಗಿರುವ ಬಗ್ಗೆ ಸದಸ್ಯರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು ಎನ್ನಲಾಗಿದ್ದು, ನಿಶ್ಚಿತ ಠೇವಣಿ ಹಣದ ಬಡ್ಡಿಯಲ್ಲಿ ನಿರಂತರ ಕಾರ್ಯಕ್ರಮ ಹಮ್ಮಿಕೊಳ್ಳಲು ಸೂಚನೆ ನೀಡಲಾಗಿದೆ.
ವಿವಿಯಿಂದ ಸರ್ಕಾರಕ್ಕೆ ಅನುಮೋದನೆಗೆ ಕಳುಹಿಸಿರುವ ಪರಿನಿಯಮಗಳನ್ನು ಅನುಮೋದನೆ ಪಡೆದುಕೊಳ್ಳುವುದು ಹಾಗೂ ಅಗತ್ಯವಿರುವ ಪರಿನಿಯಮಗಳನ್ನು ರಚಿಸಲು ರಚನಾ ಸಮಿತಿ ರಚಿಸಲು ಸಭೆಯಲ್ಲಿ ಕೋರಲಾಗಿದೆ.
ವಿವಿ ಕಾಲೇಜು ಅಭಿವೃದ್ಧಿ ಪರಿಷತ್ ವಿಭಾಗಕ್ಕೆ ಪ್ರೊ.ಬಿ.ಪಾಟೀಲ್ ಮಲ್ಲಿಕಾರ್ಜುನ ಅವರನ್ನು ನಿರ್ದೇಶಕರನ್ನಾಗಿ ಮಾಡಿರುವ ನಿರ್ಧಾರಕ್ಕೆ ಒಪ್ಪಿಗೆ ನೀಡಲಾಗಿದೆ.
ಎಂ.ಸಿದ್ಧಾರ್ಥ ಸೇವೆಯಿಂದ ಬಿಡುಗಡೆ: ಈ ಹಿಂದಿನ ಕುಲಪತಿ ವೈ.ಎಸ್.ಸಿದ್ದೇಗೌಡ ಸಂಬಂಧಿ ಎನ್ನಲಾದ ಎನ್ನೆಸ್ಸೆಸ್ ಟಕದ ನೌಕರ ಎಂ.ಸಿದ್ಧಾರ್ಥ ಅವರನ್ನು ಸೇವೆಯಿಂದ ಬಿಡುಗಡೆಗೊಳಿಸಲು ಹಾಗೂ ಎನ್ನೆಸ್ಸೆಸ್ ಟಕದ ಸಂಯೋಜಕರಿಂದ ಕಾರ್ಯಾಭಾರ ಮಾಹಿತಿ ಪಡೆದು ನಿಯಮಾನುಸಾರ ಕ್ರಮಕೈಗೊಳ್ಳಲು ಸಭೆ ಒಮ್ಮತದಿಂದ ರ್ನಿಣಯ ತೆಗೆದುಕೊಂಡಿದೆ. ಎಂ.ಸಿದ್ಧಾರ್ಥ ನೇಮಕವಾಗಿರುವ ಹುದ್ದೆಯ ಶೈಕ್ಷಣಿಕ ಅರ್ಹತೆಯಲ್ಲಿ ಲೋಪವಾಗಿರುವ ಬಗ್ಗೆ ಸಿಂಡಿಕೇಟ್ ಸದಸ್ಯರು ಈ ಹಿಂದೆಯೇ ಆಕ್ಷೇಪ ವ್ಯಕ್ತಪಡಿಸಿದ್ದರು.
ನೊಳಂಬ ಸಂಸತಿ ಅಧ್ಯಯನ ಪೀಠ: ತುಮಕೂರು ವಿವಿಯಲ್ಲಿ ಇತ್ತೀಚೆಗೆ ರಚಿಸಲಾಗಿರುವ ನೊಳಂಬ ಸಂಸತಿ ಅಧ್ಯಯನ ಪೀಠದ ಪರಿನಿಯಮ ರಚಿಸುವ ಕುರಿತು ಸಭೆಯಲ್ಲಿ ಸುದೀರ್ ಚರ್ಚೆ ನಡೆದಿದೆ. 2022ರ ಏ.19ರಂದು ಹಣಕಾಸು ಸಮಿತಿ ಕೂಡ ಅನುಮೋದನೆ ನೀಡಿರುವ ಹಿನ್ನೆಲೆಯಲ್ಲಿ ಪರಿನಿಯಮಗಳ ಅನುಮೋದನೆಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಸಭೆಯಲ್ಲಿ ತೀರ್ಮಾನಿಸಲಾಗಿದೆ. ಆದರೆ, ವಿವಿಯಲ್ಲಿ ಇನ್ನೂ ಸಾಕಷ್ಟು ಅಧ್ಯಯನ ಪೀಠಗಳಿಗೆ ಪರಿನಿಯಮಗಳೇ ರಚನೆಯಾಗದಿರುವ ಬಗ್ಗೆ ಚರ್ಚೆಯೇ ನಡೆಯದಿರುವುದು ಆಶ್ಚರ್ಯ ಮೂಡಿಸಿದೆ.
ಹಳೆಯ ವಿದ್ಯಾರ್ಥಿಗಳಿಗೆ ಮತ್ತೊಂದು ಅವಕಾಶ: 2005ರಿಂದ 2015ರ ಅವಧಿಯಲ್ಲಿ ವಿವಿಧ ಸ್ನಾತಕ, ಸ್ನಾತಕ ಶಿಕ್ಷಣ ಹಾಗೂ ಸ್ನಾತಕೋತ್ತರ ಪದವಿಗಳಿಗೆ ಪ್ರವೇಶ ಪಡೆದು ತೇರ್ಗಡೆಯಾಗದೆ ಪದವಿ ಪೂರ್ಣಗೊಳಿಸಲಾಗದಿರುವ ವಿದ್ಯಾರ್ಥಿಗಳಿಗೆ ಪದವಿ ಪೂರ್ಣಗೊಳಿಸಲು ಮತ್ತೊಂದು ಅವಕಾಶ ನೀಡಲು ಸಿಂಡಿಕೇಟ್ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಈ ವಿದ್ಯಾರ್ಥಿಗಳಿಗೆ 2021&22ರ ಶೈಕ್ಷಣಿಕ ಸಾಲಿನಲ್ಲಿಯೇ ಪರೀಕ್ಷೆ ಬರೆಯಲು ಅವಕಾಶ ನೀಡಲು ಉಪಸಮಿತಿ ಶಿಫಾರಸು ಆಧರಿಸಿ ಅವಕಾಶ ನೀಡಲಾಗಿದೆ. ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಅವಕಾಶ ನೀಡಿದ್ದರ ಬಗ್ಗೆ ಕೆಲವು ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು ಎನ್ನಲಾಗಿದೆ.
ಸಭೆಯ ಮಹತ್ವದ ರ್ನಿಣಯಗಳು
*ಅಧ್ಯಯನ ಪೀಠಗಳಲ್ಲಿ ನಿರಂತರ ಕಾರ್ಯಕ್ರಮ
*ವಿವಿ ಕಾರ್ಯಕ್ರಮಗಳಿಗೆ 10 ಲಕ್ಷ ರೂ.
*ಸಿಂಡಿಕೇಟ್ ರ್ನಿಣಯ ಪರಿಶೀಲನೆಗೆ ವಿಶೇಷ ಸಭೆ
*ಅಧ್ಯಯನ ಪೀಠದಲ್ಲಿ ನಿರಂತರ ಕಾರ್ಯಕ್ರಮ
*ನೊಳಂಬ ಅಧ್ಯಯನ ಪೀಠಕ್ಕೆ 15 ಲಕ್ಷ ರೂ.
*ಜುಂಜಪ್ಪ ಅಧ್ಯಯನ ಪೀಠಕ್ಕೆ10 ಲಕ್ಷ ರೂ.
*ಅನುದಾನರಹಿತ ಪೀಠಗಳಿಗೆ ತಲಾ 5 ಲಕ್ಷ ರೂ. ಹಣ
*ಎಂಸಿಎಂ ಕೋರ್ಸ್ ವಿನಿಮಯಕ್ಕೆ ಒಪ್ಪಿಗೆ
*ಎಂಬಿಎ ನೂತನ ಪಠ್ಯ ಕ್ರಮ
*ಸ್ನಾತಕ ವಿಷಯಗಳ ಅಧ್ಯಯನ ಮಂಡಳಿ ರಚನೆ