

ಕುಂದಾಣ: ಆರ್ಥಿಕವಾಗಿ ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಎಲ್ಲ ರಂಗದಲ್ಲಿಯೂ ಮುಂದುವರಿದಿರುವ ಪ್ರಬಲ ಜಾತಿಗಳನ್ನು 2ಎ ಪಟ್ಟಿಗೆ ಸೇರಿಸಬಾರದು ಎಂದು ಮಾಜಿ ಸಚಿವ ಎಚ್.ಎಂ.ರೇವಣ್ಣ ಆಗ್ರಹಿಸಿದರು.
ಬೆಂಗಳೂರು ಗ್ರಾಮಾಂತರ ಜಿಲ್ಲೆ ಕುಂದಾಣ ಹೋಬಳಿಯ ಜಿಲ್ಲಾಡಳಿತ ಭವನದ ಮುಂಭಾಗ ಸೋಮವಾರ ಹಿಂದುಳಿದ ಜಾತಿಗಳ ಒಕ್ಕೂಟ ಹಮ್ಮಿಕೊಂಡಿದ್ದ ಧರಣಿಯಲ್ಲಿ ಒತ್ತಾಯಿಸಿದರು.
ರಾಜ್ಯದಲ್ಲಿ ಸುಮಾರು 52 ಹಿಂದುಳಿದ ಜಾತಿಗಳು ಮೀಸಲಾತಿಯಿಂದ ವಂಚಿತವಾಗಿವೆ. ಇಂಥ ಜಾತಿಗಳಿಗೆ ಅನ್ಯಾಯವಾಗಬಾರದು ಎಂಬ ದೃಷ್ಟಿಯಿಂದ ಸಿದ್ದರಾಮಯ್ಯ ಅವರು ಸಿಎಂ ಆಗಿದ್ದಾಗ ಜಾತಿ ಗಣತಿಗೆ ಚಾಲನೆ ನೀಡಿದ್ದರು. ಅದರ ವರದಿ ಬರುವಷ್ಟರಲ್ಲೇ ಸರ್ಕಾರದ ಅವಧಿ ಮುಗಿದು ಚುನಾವಣೆ ಎದುರಾಗಿದ್ದರಿಂದ ಅದು ನನೆಗುದಿಗೆ ಬಿತ್ತು ಎಂದರು.
ನಂತರ ಬಂದ ಸಮ್ಮಿಶ್ರ ಸರ್ಕಾರಕ್ಕೆ ಮನವಿ ಮಾಡಿದರೂ ಸರ್ಕಾರ ಆ ಬಗ್ಗೆ ಆಸಕ್ತಿ ತೋರಲಿಲ್ಲ, ಕಾಗೋಡು ತಿಮ್ಮಪ್ಪ ಅವರು ಮೂರು ಬಾರಿ ಆಗಿನ ಮುಖ್ಯಮಂತ್ರಿ ಕುಮಾರಸ್ವಾಮಿ ಅವರನ್ನು ಜಾತಿ ಗಣತಿಯ ವರದಿ ಜಾರಿಗೊಳಿಸಲು ಕೋರಿಕೊಂಡರೂ ಪ್ರಯೋಜನವಾಗಲಿಲ್ಲ ಎಂದು ಬೇಸರಿಸಿದರು.
ಕಾಂಗ್ರೆಸ್ ವಕ್ತಾರ, ಪ್ರೋ.ನರಸಿಂಹಯ್ಯ, ಹಿಂದುಳಿದ ವರ್ಗಗಳ ಒಕ್ಕೂಟದ ಕಾರ್ಯದರ್ಶಿ ವೆಂಕಟರಮಣ ಮತ್ತಿತರರು ಇದ್ದರು.