

ಚಿತ್ರದುರ್ಗ: ಪ್ರಪಂಚದಲ್ಲೇ ಅತ್ಯುತ್ತಮ ಸಂವಿಧಾನವನ್ನು ಭಾರತಕ್ಕೆ ಡಾ.ಬಿ.ಆರ್. ಅಂಬೇಡ್ಕರ್ ಕೊಟ್ಟಿದ್ದಾರೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ಕೆ. ತಾಜ್‌ಪೀರ್ ಹೇಳಿದರು.
ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಬಾಬಾ ಸಾಹೇಬ್ ಅಂಬೇಡ್ಕರ್ ಅವರ 134ನೇ ಜಯಂತ್ಯುತ್ಸವದಲ್ಲಿ ಮಾತನಾಡಿ, ಅಂಬೇಡ್ಕರ್ ಅವರು ಸಂವಿಧಾನದಲ್ಲಿ ಎಲ್ಲರಿಗೂ ಸಮಾನ ಅವಕಾಶ, ಸೌಲಭ್ಯ ಸಿಗುವಂತೆ ಮಾಡಿದ್ದಾರೆ. ಆರ್ಥಿಕ ತಜ್ಞ, ತತ್ವಜ್ಞಾನಿ, ರಾಜಕೀಯ ಮುತ್ಸದ್ಧಿ, ನ್ಯಾಯವಾದಿ, ಪ್ರಗತಿಪರ ಚಿಂತಕ ಹೀಗೆ ವಿಶೇಷ ಗುಣಗಳ ಗಣಿ ಅಂಬೇಡ್ಕರ್ ಆಗಿದ್ದಾರೆ. ಯಾರೆಲ್ಲ ಹಿಂದುಳಿದಿದ್ದಾರೆ ಅವರೆಲ್ಲರಿಗೂ ಸಾಮಾಜಿಕ ನ್ಯಾಯ, ಸಮಾನತೆ ಸಿಗಬೇಕೆಂದು ಅಂಬೇಡ್ಕರ್ ಪ್ರತಿಪಾದಿಸಿದ್ದರು ಎಂದರು.
ಗ್ಯಾರಂಟಿ ಯೋಜನೆ ಜಿಲ್ಲಾ ಪ್ರಾಧಿಕಾರದ ಅಧ್ಯಕ್ಷ ಶಿವಣ್ಣ ಮಾತನಾಡಿ, ಅಂಬೇಡ್ಕರ್ ಅವರ ಚಿಂತನೆಗಳು ಒಂದು ವರ್ಗ, ಜಾತಿ, ಧರ್ಮಕ್ಕೆ ಸೀಮಿತವಾಗಿಲ್ಲ. ಭಾರತವನ್ನು ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವನ್ನಾಗಿ ರೂಪಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ ಎಂದರು.
ಮಾಜಿ ಶಾಸಕ ಉಮಾಪತಿ, ಪಕ್ಷದ ಜಿಲ್ಲಾ ಕಾರ್ಯಾಧ್ಯಕ್ಷ ಹಾಲಸ್ವಾಮಿ, ಸಂಪತ್‌ಕುಮಾರ್, ನಗರಸಭೆ ಸದಸ್ಯೆ ಮೀನಾಕ್ಷಿ, ಎನ್.ಡಿ. ಕುಮಾರ್, ಖುದ್ದೂಸ್, ಮುದಾಸೀರ್, ಪ್ರಕಾಶ್ ರಾಮನಾಯ್ಕ, ಖಾಸಿಂಆಲಿ, ಗ್ಯಾರಂಟಿ ಯೋಜನೆ ತಾಲೂಕು ಪ್ರಾಧಿಕಾರದ ಅಧ್ಯಕ್ಷ ಪ್ರಕಾಶ್, ರಹಮತ್‌ಉಲ್ಲಾ, ನರಸಿಂಹ ಇತರರು ಇದ್ದರು.