

ಹಾಸನ: ಅನುಭವ ಮಂಟಪದ ಮೂಲಕ ಇಡೀ ಪ್ರಪಂಚಕ್ಕೆ ಮಾದರಿಯಾದವರು ಬಸವಣ್ಣನವರು. ಹಾಗಾಗಿ ಎಲ್ಲರೂ ಇವರನ್ನು ಪೂಜಿಸುತ್ತಾರೆ. ಇದು ನಮ್ಮ ರಾಜ್ಯದ ಹೆಮ್ಮೆಯಾಗಿದೆ. ಇವರ ಆದರ್ಶ ಮತ್ತು ತತ್ವಗಳನ್ನು ಮುಂದಿನ ಪೀಳಿಗೆಗೆ ತಿಳಿಸಬೇಕು ಎಂದು ಸಂಸದ ಶ್ರೇಯಸ್ ಪಟೇಲ್ ಅವರು ತಿಳಿಸಿದರು.
ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಹಾಸನಾಂಬ ಕಲಾಕ್ಷೇತ್ರದಲ್ಲಿ ಬುಧವಾರ ಆಯೋಜಿಸಿದ್ದ ಶ್ರೀ ಬಸವ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಬಸವಣ್ಣನವರ ವಚನಗಳು ಎಲ್ಲರಿಗೂ ಮಾದರಿಯಾಗಿವೆ. ಶಾಲೆಯ ಪಠ್ಯಪುಸ್ತಕಗಳಲ್ಲಿ ವಚನಗಳನ್ನು ಪ್ರಕಟಿಸುವ ಕುರಿತು ಸರ್ಕಾರದ ಗಮನಕ್ಕೂ ತರುತ್ತೇನೆ ಮತ್ತು ಹಾಸನ ನಗರದ ಪ್ರಧಾನ ಸ್ಥಳದಲ್ಲಿ ಬಸವಣ್ಣನವರ ಪುತ್ಥಳಿ ಸ್ಥಾಪನೆಗೆ ನಗರಸಭೆ ಅಧ್ಯಕ್ಷರು ಜಾಗ ಗುರುತಿಸುವಂತೆ ತಿಳಿಸಿದರು.
ಸರ್ಕಾರ ಆಚರಿಸುವ ಜಯಂತಿಗಳಿಗೆ ಎಲ್ಲ ಇಲಾಖೆಯ ಅಧಿಕಾರಿಗಳು ಕಡ್ಡಾಯವಾಗಿ ಹಾಜರಾಗುವಂತೆ ಜಿಲ್ಲಾಧಿಕಾರಿಗಳು ಅಧಿಕಾರಿಗಳಿಗೆ ತಿಳಿಸಬೇಕು. ದಾಸ ಶ್ರೇಷ್ಠರ ಜಯಂತಿಗಳನ್ನು ಕೇವಲ ಒಂದು ದಿನಕ್ಕೆ ಸೀಮಿತಗೊಳಿಸದೆ, ಅವರ ತತ್ವಾದರ್ಶಗಳನ್ನು ನಾವೆಲ್ಲರೂ ಅಳವಡಿಸಿಕೊಳ್ಳೋಣ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾಧಿಕಾರಿ ಸಿ. ಸತ್ಯಭಾಮಾ ಅವರು, ಕರ್ನಾಟಕ ರಾಜ್ಯದ ಗುರುತು ಬಸವಣ್ಣನವರಾಗಿದ್ದಾರೆ. ಅವರು ಅಲೆಗಳ ವಿರುದ್ಧವಾಗಿ ಈಜಿದವರು. ಭಕ್ತಿ ಯೋಗ, ಜ್ಞಾನ ಯೋಗ, ಕರ್ಮ ಯೋಗ ಈ ಮೂರನ್ನು ಅಳವಡಿಸಿಕೊಂಡಿರುವ ಮಹಾನ್ ಜ್ಞಾನಿ, ತತ್ವ ಯೋಗಿ, ಕಾಯಕ ಯೋಗಿ, ಭಕ್ತಿ ಭಂಡಾರಿ ಎಂದರು.
ಬಸವಣ್ಣನವರ ತತ್ವಗಳನ್ನು ಅನುಸರಿಸುತ್ತ ಅವರು ನಡೆದು ಬಂದ ಹಾದಿಯಲ್ಲಿ ನಾವೆಲ್ಲರೂ ನಡೆಯಬೇಕು. ಕನ್ನಡ ಭಾಷೆಯನ್ನು ಶ್ರೀಮಂತಗೊಳಿಸಲು ಬಸವಣ್ಣನವರ ವಚನಗಳು, ಅನುಭವ ಮಂಟಪದ ವಿಚಾರಧಾರೆಗಳನ್ನು ಅನುಸರಿಸಬೇಕು. ಕಾಯಕ ಮಾಡುವುದರಿಂದ ನಮ್ಮ ಆರೋಗ್ಯವು ಸಹ ಉತ್ತಮವಾಗಿರುತ್ತದೆ. 12ನೇ ಶತಮಾನದಲ್ಲೇ ಅನುಭವ ಮಂಟಪದ ಮೂಲಕ ಸಂಸತ್ತು ರೂಪಿತಗೊಂಡಿತ್ತು. ವೃತ್ತಿ ಧರ್ಮ, ಕಾಯಕ ಧರ್ಮವನ್ನು ಅಂದೆ ಬಸವಣ್ಣ ಜಾರಿಗೆ ತಂದಿದ್ದರು. ಅಂದಿನ ಕಾಲದಲ್ಲೇ ಬಸವಣ್ಣನವರು ಹೆಣ್ಣು ಮಕ್ಕಳಿಗೂ ಸಮಾನತೆಯನ್ನು ಕಲ್ಪಿಸಿದ್ದರು. ಯುವ ಜನಾಂಗಕ್ಕೆ ಸರಿಯಾದ ದಾರಿಯಲ್ಲಿ ನಡೆಯುವಂತೆ ತಿಳಿ ಹೇಳಿ ಜಾಗೃತರಾಗಿ ನಡೆಯುವಂತೆ ಮಾಡಬೇಕು, ಭಕ್ತಿಯ ಜತೆಗೆ, ಸಂಸ್ಕಾರವನ್ನು ಕಲಿಸಿಕೊಡಬೇಕು ಎಂದರು.
ಯಾರು ಸ್ವಾರ್ಥರಹಿತವಾಗಿ ಕೆಲಸಗಳನ್ನು ಮಾಡುತ್ತಾರೋ ಅವರೆಲ್ಲರೂ ಮಹಾತ್ಮರೆ. ನಮ್ಮ ನಮ್ಮ ವ್ಯಾಪ್ತಿಯಲ್ಲಿ ಅಚ್ಚುಕಟ್ಟಾಗಿ ಕೆಲಸ ಮಾಡುವ ಮೂಲಕ ದೇಶ ಕಟ್ಟಲು ಸ್ವಾರ್ಥ ರಹಿತವಾಗಿ ಕೆಲಸ ಮಾಡಬೇಕು. ನಮ್ಮ ಮಾತು ಕೃತಿ ಒಂದೇ ಆಗಿರಬೇಕು. ಸತ್ಯವನ್ನು ನುಡಿಯಬೇಕು, ಪ್ರಾಮಾಣಿಕವಾಗಿರಬೇಕು. ನಮ್ಮತನವನ್ನು ನಾವು ಬಿಟ್ಟುಕೊಡಬಾರದು. ನಮ್ಮ ಸಂಸ್ಕೃತಿಯನ್ನು ನಾವು ಮರೆಯಬಾರದು ಎಂದರು.
ಸೋಮಶೇಖರ ಶಿವಾಚಾರ್ಯ ಮಹಾಸ್ವಾಮೀಜಿಯವರು ಆರ್ಶೀವಚನ ನೀಡಿ, ಬಸವಣ್ಣನವರು ವಿಶ್ವ ನಾಯಕರಾಗಿದ್ದಾರೆ. ಎಲ್ಲರಿಗೂ ಆದರ್ಶವಾಗಿದ್ದಾರೆ. ಯಾವುದೇ ಕೆಲಸವಾಗಲಿ ನಿಷ್ಠೆಯಿಂದ ಮಾಡಬೇಕು ಎಂದು ತಿಳಿಸಿದ್ದಾರೆ. ಎಲ್ಲಿ ದಯೆ ಇದೆಯೋ ಅದೇ ಧರ್ಮದ ಮೂಲವಾಗಬೇಕು ಎಂದಿದ್ದಾರೆ. ಸಕಲ ಜೀವಾತ್ಮಗಳಿಗೂ ಲೇಸನ್ನು ಬಯಸಬೇಕು ಎಂದು ತಿಳಿಸಿಕೊಟ್ಟಿದ್ದಾರೆ. ಧರ್ಮದ ಜತೆಗೆ ಶಾಸಕಾಂಗ, ಕಾಯಾರ್ಂಗ, ನ್ಯಾಯಾಂಗ ನಿಲ್ಲಬೇಕು. ಅವರ ಆದರ್ಶಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಶರಣರ ಸಂದೇಶದ ಜತೆಗೆ ಶರಣರ ತತ್ವ ಆದರ್ಶಗಳನ್ನು ಮಕ್ಕಳಿಗೆ ಕಲಿಸಬೇಕು. ಉತ್ತಮ ವ್ಯಕ್ತಿ ಮಾನವೀಯ ಮನುಷ್ಯನಾಗುತ್ತಾನೆ. ಧರ್ಮದ ನೆಲೆಗಟ್ಟಿನಲ್ಲಿ ರಕ್ಷಣೆಯ ಪಡೆಯಬೇಕು. ಬಸವಣ್ಣನವರು ಇಡೀ ವಿಶ್ವಕ್ಕೆ ಆತ್ಮಜ್ಞಾನ ಕೊಟ್ಟವರು. ಇತ್ತೀಚಿನ ದಿನಗಳಲ್ಲಿ ಶಾಲೆಗಳ ಪಠ್ಯಪುಸ್ತಕಗಳಲ್ಲಿ ವಚನಗಳು ಕಾಣುತ್ತಿಲ್ಲ. ಹಾಗಾಗಿ ಸರ್ಕಾರ ಶರಣರ ವಚನಗಳನ್ನ ಪಠ್ಯಪುಸ್ತಕಗಳಲ್ಲಿ ಅಳವಡಿಸುವಂತಹ ಕೆಲಸ ಮಾಡಬೇಕು, ಜಾತಿ, ಧರ್ಮ, ಮೋಹ ಎಂಬುವುಗಳಿಂದ ಹೊರಬರಬೇಕು ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಹಾಸನದ ಬಸವ ಕೇಂದ್ರದ ವತಿಯಿಂದ ಸಿದ್ಧಪಡಿಸಿದ ಪುಸ್ತಕವನ್ನು ಬಿಡುಗಡೆ ಮಾಡಲಾಯಿತು. ಜತೆಗೆ ಪರಿಸರ ಮತ್ತು ಸಾಹಿತ್ಯಕ್ಕೆ ಮುಖ್ಯಮಂತ್ರಿ ಅವರಿಂದ ಚಿನ್ನದ ಪದಕ ಪುರಸ್ಕೃತರು ಮತ್ತು ಏಕಲವ್ಯ ಪ್ರಶಸ್ತಿ ವಿಜೇತರಾದ ಕಾಂತರಾಜು ಅವರನ್ನು ಸನ್ಮಾನಿಸಾಯಿತು.
ಕಾರ್ಯಕ್ರಮದಲ್ಲಿ ನಗರಸಭೆ ಅಧ್ಯಕ್ಷರಾದ ಚಂದ್ರೇಗೌಡ, ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷರಾದ ಶಿವಾನಂದ ತಗಡೂರು, ಗಂಧದಕೋಟಿ ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಪ್ರೊ. ಡಿ.ಕೆ.ಮಂಜಯ್ಯ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮೊಹಮ್ಮದ್ ಸುಜಿತಾ, ಸಮುದಾಯದ ಮುಖಂಡರಾದ ಐಸಾಮಿ ಗೌಡ, ಶಿವಕುಮಾರ್, ಪರಮೇಶ್, ಮಮತಾ ಪಾಟೀಲ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಎಚ್.ಪಿ ತಾರಾನಾಥ್, ತಹಸೀಲ್ದಾರ್ ಗೀತಾ ಮತ್ತಿತರರು ಉಪಸ್ಥಿತರಿದ್ದರು.