ಪ್ರಧಾನಿಯಿಂದ ಸಂವಿಧಾನದ ಆಶಯಗಳಿಗೆ ಧಕ್ಕೆ

congress pressmeet
ಕೆಪಿಸಿಸಿ ವಕ್ತಾರ ರವೀಶ್ ಬಸಪ್ಪ
Published on

ಚಿಕ್ಕಮಗಳೂರು: ಸ್ವಾತಂತ್ರ್ಯ ದಿನಾಚರಣೆಯಂದು ಪ್ರಧಾನಿ ಮೋದಿ ಅವರು ಆರ್‌ಎಸ್‌ಎಸ್ ಹೊಗಳಿರುವುದು ಪ್ರಜಾಪ್ರಭುತ್ವ, ದೇಶ ಮತ್ತು ಸಂವಿಧಾನದ ಆಶಯಗಳಿಗೆ ಧಕ್ಕೆ ತರುವಂತಿದೆ ಎಂದು ಕೆಪಿಸಿಸಿ ವಕ್ತಾರ ರವೀಶ್ ಬಸಪ್ಪ ಆರೋಪಿಸಿದರು.

ನಗರದ ಪ್ರೆಸ್‌ಕ್ಲಬ್‌ನಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂವಿಧಾನದ ಆಶಯಗಳನ್ನು ಗಾಳಿಗೆ ತೂರಿರುವ ಪ್ರಧಾನಿಯ ನಡೆ ಅನಮಾನಕ್ಕೆ ಆಸ್ಪದ ನೀಡುವಂತಿದೆ. ಇದರ ಹಿಂದೆ ಯಾವುದೋ ರಾಜಕೀಯ ಲಾಭದ ನಿರೀಕ್ಷೆ ಇದ್ದಂತಿದೆ ಎಂದು ಲೇವಡಿ ಮಾಡಿದರು.

ನಾಗಪುರದ ಆರ್‌ಎಸ್‌ಎಸ್ ಕಚೇರಿಯಲ್ಲಿ ೨೦೦೧ರವರೆಗೆ ರಾಷ್ಟ್ರ ಧ್ವಜ ಹಾರಿಸಿರಲಿಲ್ಲ ಎನ್ನುವ ಸತ್ಯ ಜನರಿಗೆ ಗೊತ್ತಿದೆ. ಕೋಮುವಾದವನ್ನು ಉಸಿರಾಗಿಸಿಕೊಂಡು ಹಿಂದೂ ಧರ್ಮವನ್ನು ರಾಜಕೀಯ ಆಯುಧ ಮಾಡಿಕೊಂಡು ಭಾರತೀಯರನ್ನು ಒಡೆದಾಳಿರುವ ಆರ್‌ಎಸ್‌ಎಸ್ ಬಗ್ಗೆ ಪ್ರಧಾನಿ ಹೊಗಳಿರವುದು ಸಂಶಯ ಹುಟ್ಟಿಸಿದೆ ಎಂದು ಟೀಕಿಸಿದರು.

ಮುಂದಿನ ತಿಂಗಳಿಗೆ ಅವರಿಗೆ ೭೫ ವರ್ಷ ತುಂಬಲಿದೆ. ಹೀಗಾಗಿ ಪ್ರಧಾನಿ ಹುದ್ದೆ ಉಳಿಸಿಕೊಳ್ಳುವ ತವಕ ಅವರಿಗೆ ಹೆಚ್ಚಾಗಿದೆ. ರಾಜ್ಯದಲ್ಲಿ ಯಡಿಯೂರಪ್ಪ ಅವರಿಗೆ ೭೫ ತುಂಬಿದ ಹಿನ್ನೆಲೆ ರಾಜಕೀಯದಿಂದ ಕೆಳಗಿಳಿಸಿದ ಸೂತ್ರ ತಮಗೂ ಅನ್ವಯಿಸಬಹುದು ಎಂಬ ಭಯ ಪ್ರಧಾನಿಗೆ ಕಾಡುತ್ತಿದೆ. ಹೀಗಾಗಿ ಪ್ರಧಾನಿ ಮೋದಿ ಅವರು ಈ ನಡೆ ಅನುಸರಿಸಿದಂತೆ ಕಾಣುತ್ತದೆ ಎಂದರು.

ಕೇAದ್ರದ ಬಿಜೆಪಿ ಸರ್ಕಾರ ಎನ್‌ಸಿಇಆರ್‌ಟಿ ಪಠ್ಯದ ಮೂಲಕ ಹೊಸ ತಲೆಮಾರಿನ ಯುವ ಸಮೂಹಕ್ಕೆ ತಪ್ಪು ಚರಿತ್ರೆಯನ್ನು ಹೇಳಹೊರಟಿರುವುದು ಖಂಡನೀಯ. ಅವರಿಗೆ ಬುದ್ದ, ಬಸವ, ಅಂಬೇಡ್ಕರ್, ಕನಕ, ಗಾಂಧಿ, ಪೆರಿಯಾರ್, ನಾರಾಯಣಗುರು, ಶರೀಫ್ ಅವರಂಥ ಮಾನವೀಯ ಮೌಲ್ಯದ ನಿಲುವುಗಳು ಬೇಕಿಲ್ಲ. ಹೀಗಾಗಿ ಪಠ್ಯ ಪುಸ್ತಕದಲ್ಲಿ ಕಾಂಗ್ರೆಸ್ ವಿರುದ್ಧ ಅಪಪ್ರಚಾರಕ್ಕೆ ಮುಂದಾಗಿದೆ ಎಂದು ದೂರಿದರು.

ಕೆಪಿಸಿಸಿ ಮತ್ತೋರ್ವ ವಕ್ತಾರ ಕಶ್ಯಪ್ ನಂದನ್ ಮಾತನಾಡಿ, ಪ್ರತಿಪಕ್ಷ ನಾಯಕ ರಾಹುಲ್‌ಗಾಂಧಿ ಕೇಳಿರುವ ಪ್ರಶ್ನೆಗಳಿಗೆ ಈವರೆಗೂ ಚುನಾವಣಾ ಆಯೋಗ ಉತ್ತರಿಸಿಲ್ಲ. ಆದರೆ ರಾಹುಲ್‌ಗೆ ಪ್ರಮಾಣ ಪತ್ರ ಸಲ್ಲಿಸಲಿ ಎಂದು ತಾಕೀತು ಮಾಡುತ್ತಿದೆ. ಕೇರಳದಲ್ಲಿ ಮತ ಕಳವು ನಡೆದಿದೆ ಎಂದು ಬಿಜೆಪಿಯ ಅನುರಾಗ್ ಠಾಕೂರ್ ಆರೋಪಿಸಿದಾಗ ಅವರನ್ನು ಏಕೆ ಪ್ರಮಾಣ ಪತ್ರ ಕೇಳಲಿಲ್ಲ ಎಂದು ಪ್ರಶ್ನಿಸಿದರು.

ಕಳೆದ ೫ ವರ್ಷದಿಂದ ರಿ ಡಬಲ್‌ಪಾರ್ಮೆಟ್ ಮತದಾರರ ಪಟ್ಟಿ ಕೊಡಿ ಎಂದು ಕೇಳುತ್ತಿದ್ದೇವೆ. ಆದರೆ ಇದುವರೆಗೆ ಕೊಟ್ಟಿಲ್ಲ. ಚುನಾವಣಾ ಆಯೋಗ ಬಿಜೆಪಿಯ ಏಜೆಂಟ್ ರೀತಿ ಕೆಲಸ ಮಾಡುತ್ತಿದೆ. ಕಳೆದ ೧೧ ವರ್ಷದಲ್ಲಿ ಚುನಾವಣಾ ಆಯೋಗ ಜನರ ನಂಬಿಕೆಯನ್ನು ಕಳೆದುಕೊಂಡಿದೆ ಎಂದು ಸಿಎಸ್‌ಡಿಸಿ ಸಂಸ್ಥೆ ನಡೆಸಿದ ಸಮೀಕ್ಷೆಯಿಂದ ಬಯಲಾಗಿದೆ ಎಂದರು.

ರಾಜ್ಯದಲ್ಲಿ ಬಿಎಲ್‌ಒ ನೇಮಕಕ್ಕೆ ಚಿಲುಮೆ ಎಂಬ ಬಿಜೆಪಿ ಬೆಂಬಲಿತರ ಸಂಸ್ಥೆಯನ್ನು ರಚಿಸಿ ಅಲ್ಲೂ ಅಕ್ರಮ ನಡೆಸಲಾಗಿತ್ತು. ಈ ಬಗ್ಗೆ ದೂರು ನೀಡಿದ್ದರೂ ಈವರೆಗೂ ಕ್ರಮವಾಗಿಲ್ಲ ಎಂದು ದೂರಿದರು.

ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರಾದ ಹಿರೇಮಗಳೂರು ರಾಮಚಂದ್ರ, ತನೋಜ್‌ಕುಮಾರ್, ವಿಜಯ್‌ಕುಮಾರ್, ಸಂತೋಷ್‌ಲಕ್ಯಾ, ನಿಜಗುಣಮೂರ್ತಿ, ತ್ರಿಭುವನ್, ರವೀಶ್ ಜಾನ್ಸಾಲೆ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net