ಪ್ರಧಾನಿ ಬಳಿ ಹೋಗಬೇಕು ಎನ್ನುವ ಸನ್ನಿವೇಶ ಬಂದಾಗ ನಾನೇ ಹೋಗುತ್ತೇನೆ:ಎಚ್.ಡಿ. ದೇವೇಗೌಡ

ಪ್ರಧಾನಿ ಬಳಿ ಹೋಗಬೇಕು ಎನ್ನುವ ಸನ್ನಿವೇಶ ಬಂದಾಗ ನಾನೇ ಹೋಗುತ್ತೇನೆ:ಎಚ್.ಡಿ. ದೇವೇಗೌಡ
Published on

ಹಾಸನ: ಬಿಜೆಪಿಯನ್ನು ಮಣಿಸಲು ಮುಂಬೈಯಲ್ಲಿ 28 ಗುಂಪಿನ ಒಂದು ದೊಡ್ಡ ಮಹಾಸಭೆ ನಡೆಸಿ ಒಂದು ಕಮಿಟಿ ಮಾಡಿದ್ದಾರೆ. ಅದರ ಲೀಡರ್ ಯಾರು? ಪ್ರಧಾನಮಂತ್ರಿ ಅಭ್ಯರ್ಥಿ ಯಾರೆಂದು ಹೇಳಿದ್ದಾರಾ? ಅಥವಾ ಒಕ್ಕೂಟದ ಸಂಚಾಲಕರು ಯಾರೆಂದು ಹೇಳಿದ್ದಾರಾ ಎಂದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಮಾರ್ಮಿಕವಾಗಿ ಪ್ರಶ್ನೆ ಮಾಡಿದರು.

ತಾಲೂಕಿನ ಬೈಲಹಳ್ಳಿ ಗ್ರಾಮಕ್ಕೆ ಭಾನುವಾರ ಭೇಟಿ ನೀಡಿ ಲಕ್ಷ್ಮೀ ಜನಾರ್ದನ ಸ್ವಾಮಿ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಮಾತನಾಡಿದ ಅವರು, ಐಎನ್‌ಡಿಐಎ ಸೇರಿದ ಪಕ್ಷಗಳು ಒಂದು ಕಮಿಟಿ ಮಾಡಿದ್ದಾರೆ. ಆ ಕಮಿಟಿಯವರು ಕಾಮನ್ ಮಿನಿಮಮ್ ಪ್ರೋಗ್ರಾಂ ಮಾಡಬೇಕು. 2 ದಿನ ಮುಂಬೈನಲ್ಲಿ ಮೀಟಿಂಗ್ ನಡೆಯಿತು. ಆ ಸಮಿತಿಯ ಸದಸ್ಯರು ದಿನಕ್ಕೊಂದು ಹೇಳಿಕೆಗಳನ್ನು ಕೊಡುತ್ತಿದ್ದಾರೆ. ಚುನಾವಣೆಗೆ ಇನ್ನೂ 7-8 ತಿಂಗಳು ಇದೆ. ನೋಡೋಣ ಬನ್ನಿ ನಾನು ಬದುಕಿದ್ದೇನೆ ಎಂದರು.

ಕಾವೇರಿ ನೀರಿನ ವಿಷಯದಲ್ಲಿ ನನಗೆ ಏನನ್ನೂ ಹೇಳಲು ಶಕ್ತಿಯಿಲ್ಲ. ಕುಮಾರಸ್ವಾಮಿ ಅವರು ಸಿದ್ದರಾಮಯ್ಯ ಕರೆದ ಸರ್ವಪಕ್ಷ ಸಭೆಯಲ್ಲಿ ಮಾತನಾಡಿದ್ದಾರೆ. ಅದರ ಸಾರಾಂಶವನ್ನು ಎಲ್ಲಾ ಹೇಳಿದ್ದಾರೆ. ಒಂದು ಕಡೆ ಸುಪ್ರೀಂಕೋರ್ಟ್‌ನಲ್ಲಿ ತೀರ್ಮಾನ ಕೊಡಲಿಲ್ಲ. ಇನ್ನೊಂದು ಕಡೆ ಪ್ರಾಧಿಕಾರವು ತೀರ್ಮಾನ ಮಾಡಿಲ್ಲ. ಈ ಹಂತದಲ್ಲಿ ಮಂಡ್ಯದಲ್ಲಿ ಹೋರಾಟ ನಡೆಯುತ್ತಿದೆ. ನಾನು ಹೇಳಬೇಕಿರುವುದು ನನ್ನ ಜವಾಬ್ದಾರಿ. ನಾನು ಮಾತನಾಡುವ ಟೈಂ ಇನ್ನು ಬರಬೇಕು. ಟೈಂ ಬಂದಾಗ ನಾನು ಮಾತನಾಡುತ್ತೇನೆ. ಪ್ರಧಾನಮಂತ್ರಿಗಳ ಬಳಿ ನಾನೇ ಹೋಗಬೇಕು ಎನ್ನುವ ಸನ್ನಿವೇಶ ಬಂದಾಗ ನಾನೇ ಹೋಗುತ್ತೇನೆ ಎಂದು ತಿಳಿಸಿದರು.

ಎರಡು ದಿನಗಳಿಂದ ಗೌಡರು ಟೆಂಪಲ್ ರನ್

ತವರು ಜಿಲ್ಲೆಯಲ್ಲಿ ಟೆಂಪಲ್ ರನ್ ಮುಂದುವರಿಸಿದ ಮಾಜಿ ಪ್ರಧಾನಿ ದೇವೇಗೌಡರು ಭಾನುವಾರ ಬೆಳಗ್ಗೆ ಪತ್ನಿ ಚೆನ್ನಮ್ಮ ಜತೆ ಹುಟ್ಟೂರು ಹೊಳೆನರಸೀಪುರದ ಹರದನಹಳ್ಳಿಯ ದೇವೇಶ್ವರ ದೇವಾಲಯದಲ್ಲಿ ಪೂಜೆ ಸಲ್ಲಿಸಿದರು. ನಂತರ ಹಾಸನ ತಾಲೂಕಿನ ಬೈಲಹಳ್ಳಿ ಗ್ರಾಮಕ್ಕೆ ಭೇಟಿ ನೀಡಿ ಲಕ್ಷ್ಮೀ ಜನಾರ್ದನ ಸ್ವಾಮಿ ದೇವಾಲಯಕ್ಕೆ ಭೇಟಿ ವಿಶೇಷ ಪೂಜೆ ಸಲ್ಲಿಸಿದರು. ಈ ವೇಳೆ ದೇವೇಗೌಡರ ಪತ್ನಿ ಚನ್ನಮ್ಮ, ಶಾಸಕ ಎಚ್.ಪಿ. ಸ್ವರೂಪ್ ಪ್ರಕಾಶ್ ಇದ್ದರು.

46 ಜನ ಕುಟುಂಬ ಸದಸ್ಯರ ಹೆಸರಿನಲ್ಲಿ ಪೂಜೆ

ಮೊಮ್ಮಗ ಪ್ರಜ್ವಲ್ ರೇವಣ್ಣ ಅವರ ಸಂಸದ ಸ್ಥಾನ ಅಸಿಂಧು ಎಂದು ತೀರ್ಪು ಬಂದ ದಿನದಿಂದ ಮಾಜಿ ಪ್ರಧಾನಿ ತವರು ಜಿಲ್ಲೆಯಲ್ಲಿ ವಾಸ್ತವ್ಯ ಹೂಡಿದ್ದಾರೆ. ತಮ್ಮ ಕುಟುಂಬದ ಎಲ್ಲಾ ಸದಸ್ಯರ ಹೆಸರಿನಲ್ಲಿ ಪೂಜೆ ಸಲ್ಲಿಸಿದ್ದಾರೆ. ದೊಡ್ಡಗೌಡರು ಕುಟುಂಬದ 46 ಜನ ಸದಸ್ಯರ ಹೆಸರಿನಲ್ಲಿ ಪೂಜೆ ಸಲ್ಲಿಸಿದರು. ಪೂಜೆಗೂ ಮುನ್ನ ಅರ್ಚನೆಗಾಗಿ 46 ಜನರ ಹೆಸರಿನ ಪಟ್ಟಿ ಕೊಟ್ಟರು. ಅದಕ್ಕೂ ಮೊದಲು ಕೆಲವರ ಹೆಸರನ್ನು ತಾವೇ ಖುದ್ದು ಹೇಳಿ ಬಳಿಕ ಎಲ್ಲರ ಪಟ್ಟಿ ನೀಡಿದರು. ಕುಟುಂಬ ಸದಸ್ಯರ ಶ್ರೇಯಸ್ಸಿಗಾಗಿ ವಿಶೇಷ ಪೂಜೆ ನಡೆಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net