ಪ್ರಧಾನಿ ದರ್ಶನಕ್ಕೆ ಸಾರ್ವಜನಿಕರಿಗೆ ವ್ಯವಸ್ಥೆ

Mahesh Tenginakayi
Published on

ಹುಬ್ಬಳ್ಳಿ : ರಾಷ್ಟ್ರೀಯ ಯುವ ಜನೋತ್ಸವದ ಉದ್ಘಾಟನೆಗಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಜ. 12ರಂದು ಹುಬ್ಬಳ್ಳಿಗೆ ಆಗಮಿಸುತ್ತಿದ್ದಾರೆ. ಈ ಸಂದರ್ಭದಲ್ಲಿ ಸಾರ್ವಜನಿಕರು ಅವರನ್ನು ನೇರವಾಗಿ ನೋಡಬೇಕೆಂದು ಇಚ್ಛೆ ವ್ಯಕ್ತಪಡಿಸಿದ್ದರಿಂದ ವಿಮಾನ ನಿಲ್ದಾಣದಿಂದ ರೈಲ್ವೆ ಮೈದಾನದವರೆಗಿನ ರಸ್ತೆಯ ಇಕ್ಕೆಲಗಳಲ್ಲಿ ಬ್ಯಾರಿಕೇಡ್​ಗಳನ್ನು ಅಳವಡಿಸಿ ಸೂಕ್ತ ವ್ಯವಸ್ಥೆ ಮಾಡಲಾಗಿದೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ ಟೆಂಗಿನಕಾಯಿ ಹೇಳಿದ್ದಾರೆ.

ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ರೈಲ್ವೆ ಮೈದಾನದಲ್ಲಿ ರಾಷ್ಟ್ರೀಯ ಯುವ ಜನೋತ್ಸವದ ಉದ್ಘಾಟನೆ ನಡೆಯಲಿದೆ. ಮೈದಾನದಲ್ಲಿ ನೋಂದಣಿ ಮಾಡಿಕೊಂಡ ಯುವಕರಿಗೆ ಮಾತ್ರ ಪ್ರವೇಶವಿದೆ. ಅಲ್ಲಿ ಸಾರ್ವಜನಿಕರಿಗೆ ಪ್ರವೇಶ ಇಲ್ಲ. ಹೀಗಾಗಿ, ವಿಮಾನ ನಿಲ್ದಾಣದಿಂದ ರೈಲ್ವೆ ಮೈದಾನದವರೆಗಿನ ರಸ್ತೆಯ ಅಕ್ಕಪಕ್ಕದಲ್ಲಿ ನಿಂತು ಸಾರ್ವಜನಿಕರು ಪ್ರಧಾನಿ ನರೇಂದ್ರ ಮೋದಿ ಅವರನ್ನು ನೋಡಬಹುದು ಎಂದರು.

ಪ್ರಧಾನಿ ಮೋದಿ ಅವರು ತಾವು ಭೇಟಿ ನೀಡಿದ ನಗರಗಳಲ್ಲಿ ಕಾರಿನಿಂದ ಕೆಳಗಿಳಿದು, ಸಾರ್ವಜನಿಕರನ್ನು ಭೇಟಿ ಮಾಡಿದ ಅನೇಕ ಉದಾಹರಣೆಗಳಿವೆ. ಹುಬ್ಬಳ್ಳಿಯಲ್ಲಿಯೂ ಅವರು ವಿಮಾನ ನಿಲ್ದಾಣದಿಂದ ರೈಲ್ವೆ ಮೈದಾನದವರೆಗಿನ 8 ಕಿಮೀ ಉದ್ದದ ರಸ್ತೆಯ ಎರಡ್ಮೂರು ಸ್ಥಳಗಳಲ್ಲಿ ಕಾರಿನಿಂದ ಇಳಿದು ಜನರನ್ನು ಭೇಟಿಯಾಗುವ ಸಾಧ್ಯತೆ ಇದೆ. ಹುಬ್ಬಳ್ಳಿಯಲ್ಲಿ ಸಾರ್ವಜನಿಕರನ್ನು ಭೇಟಿ ಮಾಡುವಂತೆ ಪ್ರಧಾನಿ ಕಚೇರಿಗೂ ಮನವಿ ಸಲ್ಲಿಸಿದ್ದೇವೆ ಎಂದು ಹೇಳಿದರು.

ಕೇಂದ್ರ ಸಚಿವರು, ರಾಜ್ಯದ ಸಚಿವರು, ಸ್ಥಳೀಯ ಶಾಸಕರು, ನಿಗಮ-ಮಂಡಳಿಯ ಇಬ್ಬರು ಅಧ್ಯಕ್ಷರು ರೈಲ್ವೆ ಮೈದಾನದಲ್ಲಿ ಪ್ರಧಾನಿ ಅವರೊಂದಿಗೆ ವೇದಿಕೆ ಹಂಚಿಕೊಳ್ಳಲಿದ್ದಾರೆ ಎಂದು ತಿಳಿಸಿದರು.

ವಿಮಾನ ನಿಲ್ದಾಣದಲ್ಲಿ ಪ್ರಧಾನಿ ಅವರ ಸ್ವಾಗತಕ್ಕೆ 40 ಜನರ ಹೆಸರುಗಳನ್ನು ಪ್ರಧಾನಿ ಅವರ ಕಚೇರಿಗೆ ಕಳುಹಿಸಲಾಗಿದೆ. ಈ ಬಾರಿ ಪ್ರಧಾನಿ ಸ್ವಾಗತಕ್ಕೆ ಹೊಸಬರಿಗೆ ಅವಕಾಶ ನೀಡಲಾಗಿದೆ ಎಂದರು.

ಬಿಜೆಪಿ ರಾಜ್ಯ ಶಿಸ್ತು ಸಮಿತಿ ಅಧ್ಯಕ್ಷ ಲಿಂಗರಾಜ ಪಾಟೀಲ, ಪಾಲಿಕೆ ಸದಸ್ಯ ಸಂತೋಷ ಚವ್ಹಾಣ, ಮಹಾನಗರ ಜಿಲ್ಲಾ ಅಧ್ಯಕ್ಷ ಸಂಜಯ ಕಪಟಕರ, ವಕ್ತಾರ ರವಿ ನಾಯಕ ಪತ್ರಿಕಾಗೋಷ್ಠಿಯಲ್ಲಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net