ಹುಣಸೂರು: ಪ್ರಧಾನಿ ನರೇಂದ್ರ ಮೋದಿ ಅವರ 72ನೇ ಹುಟ್ಟು ಹಬ್ಬದ ಅಂಗವಾಗಿ ಸೆ.17ರಿಂದ ಅಕ್ಟೋಬರ್ 2ರವರೆಗೆ ಸೇವಾ ಹೀ ಸಂಘಟನ್ ಘೋಷವಾಕ್ಯದೊಂದಿಗೆ ವಿವಿಧ ಸಮಾಜಮುಖಿ ಸೇವಾ (ಪಾಕ್ಷಿಕ) ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಬಿಜೆಪಿ ಜಿಲ್ಲಾ(ಗ್ರಾಮಾಂತರ) ಅಧ್ಯಕ್ಷೆ ಮಂಗಳಾ ಸೋಮಶೇಖರ್ ತಿಳಿಸಿದರು.
17ರಂದು ತಾಲೂಕಿನ ವಿವಿಧ ಭಾಗಗಳಲ್ಲಿ ಯುವ ಮೋರ್ಚಾ ವತಿಯಿಂದ ರಕ್ತದಾನ ಶಿಬಿರ ಆಯೋಜಿಸುವ ಮೂಲಕ ಸೇವಾ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುವುದು. 15 ದಿನಗಳು ವಿವಿಧ ಸಾಮಾಜಿಕ ಸೇವಾ ಕಾರ್ಯಗಳೊಂದಿಗೆ ಪಕ್ಷದ ಸಂಘಟನೆಯ ಬಲವರ್ಧನೆಗೆ ಪ್ರಾಮುಖ್ಯತೆ ನೀಡಲಾಗಿದೆ. 22 ಮತ್ತು 22ರಂದು ಮಂಡಲ ಮಟ್ಟದಿಂದ ಆರಂಭಗೊಂಡು ತಾಲೂಕು, ಜಿಲ್ಲಾ ಮಟ್ಟದ ಆರೋಗ್ಯ ತಪಾಸಣಾ ಉಚಿತ ಶಿಬಿರಗಳನ್ನು ಆಯೋಜಿಸಲಾಗುವುದು. ಅಂಗವಿಕಲರಿಗೆ ಸರ್ಕಾರದ ಯೋಜನೆಗಳು, ದಾನಿಗಳ ನೆರವಿನೊಂದಿಗೆ ಸವಲತ್ತುಗಳನ್ನು ವಿತರಿಸಲಾಗುವುದು ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಪಕ್ಷದ ಮಹಿಳಾ ಮೋರ್ಚಾ ಸದಸ್ಯರು ವರ್ಷವಿಡೀ ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರು ಮತ್ತು ಅಡುಗೆ ಸಿಬ್ಬಂದಿಗೆ ಸನ್ಮಾನ, ವಿಶೇಷ ಭೋಜನ ವ್ಯವಸ್ಥೆ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಆಯೋಜಿಸಲಿದ್ದಾರೆ ಎಂದರು.
ಕ್ಷಯ ರೋಗಿಗಳ ದತ್ತು: 2025ರೊಳಗೆ ದೇಶವು ಕ್ಷಯ ಮುಕ್ತವಾಗಬೇಕೆಂಬ ಬಯಕೆಯನ್ನು ಪ್ರಧಾನಿ ಹೊಂದಿದ್ದಾರೆ. ಈ ದಿಸೆಯಲ್ಲಿ ಪಕ್ಷದ ಕಾರ್ಯಕರ್ತರು ಒಬ್ಬೊಬ್ಬ ಕ್ಷಯರೋಗಿಯನ್ನು ವರ್ಷಕಾಲ ದತ್ತು ಪಡೆದು ಅವರ ಔಷಧೋಪಚಾರ, ಪೌಷ್ಟಿಕ ಆಹಾರ ದೊರಕಿಸುವುದು, ರೋಗ ನಿಯಂತ್ರಣ ಕುರಿತು ಅರಿವು ಮೂಡಿಸುವ ಕಾರ್ಯ ನಡೆಸಲಿದ್ದಾರೆ ಎಂದು ಮಾಹಿತಿ ನೀಡಿದರು.
ಈ ಅವಧಿಯಲ್ಲಿ ಪಂಡಿತ್ ದೀನ್ ದಯಾಳ್ ಉಪಾಧ್ಯಾಯರ ಜನ್ಮದಿನ (ಸೆ.25) ಮತ್ತು ಅ.2ರಂದು ಗಾಂಧಿ ಜಯಂತಿಯೂ ಬರಲಿದೆ. ಉಪಾಧ್ಯಾಯರ ಹುಟ್ಟು ಹಬ್ಬದಂದು ಪ್ರಧಾನಿ ಮನ್ ಕೀ ಬಾತ್ ಕಾರ್ಯಕ್ರಮವಿದ್ದು ಬೂತ್ ಮಟ್ಟದಲ್ಲಿ ಕಾರ್ಯಕ್ರಮ ಪ್ರಸಾರಕ್ಕೆ ಕ್ರಮವಹಿಸಲಾಗುವುದು. ಅ.2ರಂದು ಗಾಂಧಿ ಜಯಂತಿಯಂದು ಆತ್ಮನಿರ್ಭರ ಭಾರತ್ ಯೋಜನೆಯಡಿ ಸ್ವದೇಶಿ ವಸ್ತುಗಳ ಬಳಕೆ, ಸ್ಥಳೀಯವಾಗಿ ತಯಾರಾಗುವ ಬಿದಿರು ಬುಟ್ಟಿ, ಮಡಕೆ, ಖಾದಿ ಉಡುಪುಗಳ ಖರೀದಿ ಮತ್ತು ಧರಿಸುವಿಕೆಯನ್ನು ಆಯೋಜಿಸಲಾಗಿದೆ. ಸ್ವಚ್ಛ ಭಾರತ್ ಆಂದೋಲನದಡಿ ಸಾರ್ವಜನಿಕ ಶೌಚಗೃಹಗಳ ಸ್ವಚ್ಛತೆ ಕುರಿತು ಅರಿವು ಮತ್ತು ಶ್ರಮದಾನ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಗ್ರಾಮಾಂತರ ಜಿಲ್ಲಾ ಉಸ್ತುವಾರಿ ಇ.ಅಶ್ವತ್ಥ ನಾರಾಯಣ್ ಮಾತನಾಡಿ, ರೈತ ಮೋರ್ಚಾ ಪದಾಧಿಕಾರಿಗಳು ಸಾಧ್ಯವಾದಷ್ಟು ಕಡೆ ಅರಳಿಮರಗಳನ್ನು ನೆಡುವ ಮತ್ತು ಸೀಡ್‌ಬಾಲ್ ತಯಾರಿಸುವ ಕಾರ್ಯ ನಡೆಸಲಿದ್ದಾರೆ. ಅ.2ರಂದು ಯೋಜನೆಗಳ ಫಲಾನುಭವಿಗಳೊಂದಿಗೆ ಸಂವಾದ ಮತ್ತು ಯೋಜನೆಯಿಂದಾದ ಸಹಾಯ ಕುರಿತು ಪ್ರಧಾನಿಗೆ ಕೃತಜ್ಞತಾ ಪತ್ರಗಳನ್ನು ಬರೆದು ಕಳುಹಿಸುವ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.
ತಾಲೂಕು ಅಧ್ಯಕ್ಷ ನಾಗಣ್ಣಗೌಡ, ನಗರಮಂಡಲ ಅಧ್ಯಕ್ಷ ಗಣೇಶ್ ಕುಮಾರಸ್ವಾಮಿ ಮಾತನಾಡಿ, 15 ದಿನಗಳ ಕಾರ್ಯಕ್ರಮಕ್ಕೆ ತಾಲೂಕಿನ ಜನತೆ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.