

ಮೈಸೂರು: ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳ ಪೈಕಿ ಒಂದಾದ ಪ್ರಧಾನಮಂತ್ರಿ ಸ್ವನಿಧಿ ಯೋಜನೆಯನ್ನು ಕೃಷ್ಣರಾಜ ಕ್ಷೇತ್ರದಲ್ಲಿ ಸಮರ್ಪಕ ಅನುಷ್ಠಾನಕ್ಕಾಗಿ ಭರದ ಸಿದ್ದತೆ ನಡೆದಿದ್ದು, ಕೇಂದ್ರ ಸರ್ಕಾರದ ರಾಜ್ಯ ಹಣಕಾಸು ಸಚಿವ ಭಗವದ್ ಕಿಶನ್ ರಾವ್ ಕಾರಡ್ ಯೋಜನೆಗೆ ಕೃಷ್ಣರಾಜ ಕ್ಷೇತ್ರದಲ್ಲಿ ಸದ್ಯದಲ್ಲಿಯೇ ಚಾಲನೆ ನೀಡಲಿದ್ದಾರೆ.
ಇತ್ತೀಚಿಗೆ ಶಾಸಕ ಎಸ್.ಎ.ರಾಮದಾಸ್ ದೆಹಲಿಯಲ್ಲಿ ಸಚಿವರನ್ನು ಭೇಟಿ ಮಾಡಿ ಯೋಜನೆ ಕುರಿತು ಮಾಡಿರುವ ಕೆಲಸ ಕಾರ್ಯಗಳ ಬಗ್ಗೆ ವಿವರಿಸಿ, ಯೋಜನೆ ಅನುಷ್ಠಾನಕ್ಕೆ ಚಾಲನೆ ನೀಡಲು ಮೈಸೂರಿಗೆ ಆಗಮಿಸುವಂತೆ ಮನವಿ ಮಾಡಿದ್ದರು. ಇದಕ್ಕೆ ಒಪ್ಪಿರುವ ಸಚಿವ ಭಗವದ್ ಕಿಶನ್ ರಾವ್ ಕಾರಡ್ ಸದ್ಯದಲ್ಲೇ ಮೈಸೂರಿಗೆ ಆಗಮಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡುವ ಭರವಸೆ ನೀಡಿದ್ದಾರೆ.
ಈ ಹಿನ್ನೆಲೆಯಲ್ಲಿ ನಗರದ ಕೃಷ್ಣರಾಜ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿರುವ ಬೀದಿ ಬದಿ ವ್ಯಾಪಾರಿಗಳ ನೋಂದಣಿ ಕಾರ್ಯ ನಡೆದಿದೆ. ಬೀದಿ ಬದಿ, ತಳ್ಳುಗಾಡಿ, ಸಣ್ಣ ಸಣ್ಣ ವ್ಯಾಪಾರಿಗಳನ್ನು ಗುರುತಿಸಿ ಕೇಂದ್ರ ಸರ್ಕಾರದ ಸವಲತ್ತುಗಳನ್ನು ತಲುಪಿಸಲು ಈ ಕಾರ್ಯಕ್ರಮ ರೂಪಿಸಲಾಗಿದೆ. ಬಡತನದಲ್ಲಿದ್ದವರು ವ್ಯಾಪಾರ ಮಾಡುವ ಮೂಲಕ ಬದುಕು ಸಾಗಿಸುವವರ ನೊಂದಣಿ ಇದಾಗಿದೆ. ಮೀಟರ್ ಬಡ್ಡಿ ದಂದೆಕೋರರಿಂದ ರಸ್ತೆ ಬದಿ ವ್ಯಾಪಾರಿಗಳಿಗೆ ಆಗಬಹುದಾದ ತೊಂದರೆ ತಪ್ಪಿಸಲು ನೊಂದಣಿ ಕಾರ್ಯ ನಡೆದಿದೆ ಎಂದು ರಾಮದಾಸ್ ತಿಳಿಸಿದ್ದಾರೆ.
ಒಂದೊಂದು ವ್ಯಾಪಾರದಲ್ಲಿ ಒಂದೊಂದು ಸಮಸ್ಯೆ ಇದ್ದು, ಅದನ್ನು ಪರಿಹರಿಸುವ ನಿಟ್ಟಿನಲ್ಲಿ ಈ ಕಾರ್ಯಕ್ರಮ ಮಾಡಲಾಗಿದೆ. ಪೊಲೀಸರು, ಪಾಲಿಕೆ ಸಿಬ್ಬಂದಿ, ಕಂದಾಯ ಇಲಾಖೆ ಸಿಬ್ಬಂದಿ ಸಹಕಾರದಿಂದ ಈಗಾಗಲೇ ವ್ಯಾಪಾರಸ್ಥರನ್ನು ಗುರುತಿಸಲಾಗಿದೆ. ಒಟ್ಟು ಕ್ಷೇತ್ರ ವ್ಯಾಪ್ತಿಯಲ್ಲಿ ಐದು ಸಾವಿರ ಬೀದಿಬದಿ ವ್ಯಾಪಾರಿಗಳಿಗೆ ಕಾರ್ಡ್ ನೀಡುವ ಗುರಿ ಹೊಂದಲಾಗಿದೆ. ವ್ಯಾಪಾರದ ಕಾರ್ಡ್ ಜತೆಗೆ ಈ ಶ್ರಮ್ ಕಾರ್ಡ್ ಕೂಡ ನೀಡಲಾಗುತ್ತಿದೆ. ಈ ಶ್ರಮ್ ಕಾರ್ಡ್ ಉಳ್ಳವರಿಗೆ ಸರ್ಕಾರದ ಸವಲತ್ತುಗಳ ಬಗ್ಗೆ ಮಾಹಿತಿ ನೀಡಲಾಗುತ್ತದೆ ಎಂದು ಹೇಳಿದರು.
ಈ ಯೋಜನೆಯ ಕಾರ್ಡ್‌ದಾರರಿಗೆ ಪ್ರಧಾನಮಂತ್ರಿ ಕಡೆಯಿಂದ ಹತ್ತು ಸಾವಿರ ಬಂಡವಾಳ ದೊರೆಯಲಿದೆ. ನಂತರ ಇಪ್ಪತ್ತು, ನಲವತ್ತು ಹಾಗೂ ಕೊನೆಯ ಹಂತದಲ್ಲಿ ಎಂಬತ್ತು ಸಾವಿರದವರೆಗೆ ಬಡ್ಡಿ ರಹಿತ ಸಾಲ ಸೌಲಭ್ಯ ದೊರೆಯಲಿದೆ. ಈ ಮೂಲಕ ಬಡ್ಡಿ ರಹಿತ ಬಂಡವಾಳ ಒದಗಿಸುವುದು ಯೋಜನೆಯ ಉದ್ದೇಶವಾಗಿದೆ ಎಂದು ತಿಳಿಸಿದ್ದಾರೆ.