ಪ್ರಥಮವಾರ್ಷಿಕ ಸಮ್ಮೇಳನಕ್ಕೆ ಸಿದ್ಧತೆ

23ydg03
Published on

ಯಾದಗಿರಿ: ಜಿಲ್ಲಾ ಸಹಕಾರಿ ಯುನಿಯನ್ ಒಕ್ಕೂಟದ ಪ್ರಥಮ ವಾರ್ಷಿಕ ಸಮ್ಮೇಳನವನ್ನು ಅದ್ದೂರಿಯಾಗಿ ಆಯೋಜಿಸಲು ನಿರ್ಧರಿಸಲಾಗಿದೆ ಎಂದು ಒಕ್ಕೂಟದ ಅಧ್ಯಕ್ಷ ವಿಶ್ವನಾಥರಡ್ಡಿ ದರ್ಶನಾಪುರ ತಿಳಿಸಿದರು.
ಬುಧವಾರ ನಗರದಲ್ಲಿನ ಒಕ್ಕೂಟದ ಕಚೇರಿಯಲ್ಲಿ ಸಮ್ಮೇಳನದ ಅಂಗವಾಗಿ ಕರೆಯಲಾಗಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ಜಿಲ್ಲೆಯಲ್ಲಿ ಸಹಕಾರಿ ಯುನಿಯನ್ ಸ್ಥಾಪನೆಯಾಗಬೇಕು ಎಂಬುದು ಕಳೆದ ಹಲವು ವರ್ಷಗಳಿಂದ ನಮ್ಮೆಲ್ಲರ ಕನಸಾಗಿತ್ತು. ಕಳೆದ ವರ್ಷ ಅಸ್ಥಿತ್ವಕ್ಕೆ ಬಂದಿದೆ. ಅಲ್ಲದೆ ಹಲವು ರಚನಾತ್ಮಕ ಚಟುವಟಿಕೆಗಳು ನಡೆದಿವೆ. ಸಮ್ಮೇಳನದಲ್ಲಿ ಜಿಲ್ಲೆಯ ಎಲ್ಲ ಸಹಕಾರಿ ಸಂಘಗಳು ಭಾಗವಹಿಸಲು ಮನವಿ ಮಾಡಿಕೊಳ್ಳಲಾಗುವುದು. ಇನ್ನೂ ಕಾರ್ಯಕ್ರಮ ಯಶಸ್ವಿಗೆ ಸಾರ್ವಜನಿಕರು ಸಲಹೆ, ಸೂಚನೆ ನೀಡಬಹುದು ಎಂದರು.
ಸೆಪ್ಟೆಂಬರ್ ತಿಂಗಳಲ್ಲಿ ಜಿಲ್ಲಾಕೇಂದ್ರದಲ್ಲೇ ಸಮ್ಮೇಳನ ಆಯೋಜಿಸುವ ಚಿಂತನೆ ಇದ್ದು, ಸಹಕಾರ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಶಾಸಕರ ದಿನಾಂಕ ಪಡೆದುಕೊಳ್ಳಲಾಗುವುದು. ಒಂದು ವಾರದೊಳಗಾಗಿ ಕಾರ್ಯಕ್ರಮದ ಸ್ಥಳ ಗೊತ್ತು ಪಡಿಸಲಾಗುವುದು. ಇಡೀ ಸಮಾರಂಭ ಯಶಸ್ಸಿಗೆ ತಂಡಗಳನ್ನು ರಚಿಸಲಾಗುವುದು ಎಂದು ವಿವರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net