

ಚಾಮರಾಜನಗರ: ರಾಜ್ಯದಲ್ಲೇ ಮೊಟ್ಟಮೊದಲ ಬಾರಿಗೆ ಕೃತಕ ಮಂಡಿಚಿಪ್ಪು ಜೋಡಣೆ ಶಸ್ತ್ರಚಿಕಿತ್ಸೆಯ ಲೈವ್ ಪ್ರಾತ್ಯಕ್ಷಿಕೆ ಮಾಡುವ ಮೂಲಕ ಗಮನ ಸೆಳೆದಿದ್ದ ಸಿಮ್ಸ್ ವೈದ್ಯರು, ಸುಲಭ ವಿಧಾನದಲ್ಲಿ ರಾಜ್ಯದಲ್ಲೇ ಮೊದಲ ಬಾರಿಗೆ ಪ್ರೊಲ್ಯಾಪ್ಸ್ ಡಿಸ್ಕ್ (ಬೆನ್ನುಮೂಳೆ ಉರಿಯೂತ) ಶಸ್ತ್ರಚಿಕಿತ್ಸೆಯ ಲೈವ್ ಆಯೋಜನೆ ಮಾಡಲು ಮುಂದಾಗಿದೆ.
ಚಾಮರಾಜನಗರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಹಾಗೂ ಬೋಧನಾ ಆಸ್ಪತ್ರೆಯ ಕೀಲು ಮತ್ತು ಮೂಳೆ ವಿಭಾಗದ ವೈದ್ಯರು ಹಾಗೂ ಸಂಶೋಧನಾ ವಿದ್ಯಾರ್ಥಿಗಳ ಸಹಯೋಗದಲ್ಲಿ ನ.8 ರಂದು ಟ್ರಾನ್‌ಸೆೆರೋಮಿನಲ್ ಅಂಡ್ ಇಂಟರ್‌ಲ್ಯಾಮಿನರ್ ಎಂಡೋಸ್ಕೋಪಿ ಮೂಲಕ ಪ್ರೊಲ್ಯಾಪ್ಸ್ ಡಿಸ್ಕ್ ಶಸ ಚಿಕಿತ್ಸಾ ಕಾರ್ಯಾಗಾರವನ್ನು ಆಯೋಜಿಸಲಾಗಿದೆ. ಎಂಡೋಸ್ಕೋಪಿ ಮೂಲಕ ಬೆನ್ನುಮೂಳೆ ಶಸ ಚಿಕಿತ್ಸೆ ನಡೆಸುವಲ್ಲಿ ನುರಿತ ತಜ್ಞರಾದ ಚೆನ್ನೈನ ಡಾ.ಕೀರ್ತಿವಾಸನ್, ಮಂಗಳೂರಿನ ಡಾ.ಮಹೇಶ್ ಹಾಗೂ ಮೈಸೂರಿನ ಡಾ.ರವೀಂದ್ರನಾಥ್ ಕಾರ್ಯಕ್ರಮವನ್ನು ನಡೆಸಿಕೊಡಲು ಆಗಮಿಸುತ್ತಿದ್ದಾರೆ.
ಶಸ ಚಿಕಿತ್ಸೆಯ ಕುರಿತು ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ ನಡೆಯುವ ಕಾರ್ಯಾಗಾರದಲ್ಲಿ ಸಂಕ್ಷಿಪ್ತವಾಗಿ ವಿವರಣೆ ನೀಡಲಾಗುತ್ತದೆ. ಬಳಿಕ ಶಸ ಚಿಕಿತ್ಸೆಯನ್ನು ಲೈವ್ ಡೆಮಾನ್‌ಸ್ಟ್ರೇಷನ್ ಮೂಲಕ ತೋರಿಸಲಾಗುತ್ತದೆ. ಯಾವ ವಿಧದಲ್ಲಿ ಈ ಶಸಚಿಕಿತ್ಸೆಯನ್ನು ಮಾಡಲಾಗುತ್ತಿದೆ ಎಂಬ ಮಾಹಿತಿಯನ್ನು ಕೀಲು ಮತ್ತು ಮೂಳೆ ವಿಭಾಗದ ವೈದ್ಯರು ಹಾಗೂ ವೈದ್ಯಕೀಯ ವಿದ್ಯಾರ್ಥಿಗಳಿಗೆ ತಿಳಿಸಿಕೊಡಲಾಗುತ್ತದೆ. ಆಯುಷ್ಮಾನ್ ಭಾರತ್ ಕರ್ನಾಟಕ ಯೋಜನೆಯಡಿ 3 ರೋಗಿಗಳಿಗೆ ಈ ಶಸಚಿಕಿತ್ಸೆಯನ್ನು ಸಂಪೂರ್ಣ ಉಚಿತವಾಗಿ ಮಾಡಲಾಗುತ್ತದೆ. ರಾಜ್ಯದ ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಇದೇ ಮೊದಲ ಬಾರಿಗೆ ಇಂತಹ ಕಾರ್ಯಾಗಾರ ಹಾಗೂ ಪ್ರೊಲ್ಯಾಪ್ಸ್ ಡಿಸ್ಕ್ ಶಸ್ತ್ರಚಿಕಿತ್ಸೆಯನ್ನು ಆಯೋಜನೆ ಮಾಡಲಾಗಿದೆ. ಈ ಕಾರ್ಯಾಗಾರಕ್ಕೆ ರಾಜ್ಯ ಮತ್ತು ಹೊರ ರಾಜ್ಯಗಳಿಂದಲೂ ನೂರಾರು ಸಂಖ್ಯೆಯಲ್ಲಿ ಕೀಲು ಮತ್ತು ಮೂಳೆ ರೋಗ ತಜ್ಞರು ಭಾಗವಹಿಸುತ್ತಿದ್ದಾರೆ. ಈ ಮೂಲಕ ಸಿಮ್ಸ್ ಆಸ್ಪತ್ರೆ ಮುಂದುವರಿಯುತ್ತಿರುವ ವೈದ್ಯಕೀಯ ತಂತ್ರಜ್ಞಾನದ ಬಳಕೆಯನ್ನು ಸಮರ್ಪಕವಾಗಿ ಬಳಕೆ ಮಾಡಿಕೊಳ್ಳುತ್ತಿದೆ.
ಪ್ರೊಲ್ಯಾಪ್ಸ್ ಡಿಸ್ಕ್ ಎಂದರೇನು?:
ಬೆನ್ನುಮೂಳೆಯ ಯಾವುದೋ ಒಂದು ಭಾಗ ತನ್ನ ಸ್ಥಾನದಿಂದ ಸರಿದು, ಇದರ ಮೂಲಕ ಹಾದು ಹೋಗಿದ್ದ ನರದ ಮೇಲೆ ಅಪಾರವಾದ ಒತ್ತಡ ಬಿದ್ದರೆ ಎದುರಾಗುವ ನೋವು ತಡೆಯಲು ಸಾಧ್ಯವಿಲ್ಲ. ಇದನ್ನೇ ವೈದ್ಯಕೀಯ ಭಾಷೆಯಲ್ಲಿ ಪ್ರೊಲ್ಯಾಪ್ಸ್ ಡಿಸ್ಕ್ ಎಂದು ಕರೆಯುತ್ತಾರೆ. ಇದು ಯಾವುದೇ ಬೆನ್ನುಮೂಳೆಯ ಅಥವಾ ಕುತ್ತಿಗೆಯ ಪ್ರದೇಶದಲ್ಲಿ ಸಂಭವಿಸುತ್ತದೆ. ಬೆನ್ನುಮೂಳೆಯ ಮೇಲೆ ಅತಿಯಾದ ಒತ್ತಡದಿಂದ ಡಿಸ್ಕ್ ಪ್ರೋಲ್ಯಾಪ್ಸ್ ಉಂಟಾಗುತ್ತದೆ. ಇದರಿಂದ ಬೆನ್ನುಮೂಳೆ, ನರಗಳು, ಕೈ-ಕಾಲುಗಳು ಅಲ್ಲದೇ ಮೂತ್ರಕೋಶ ಹಾಗೂ ಕರುಳಿನ ಸಮಸ್ಯೆಗಳಿಗೆ ಕಾರಣವಾಗುತ್ತದೆ.
3 ರೋಗಿಗಳಿಗೆ ಶಸಚಿಕಿತ್ಸೆ:
ಸಿಮ್ಸ್ ಆಸ್ಪತ್ರೆಯಲ್ಲಿ ಆಯೋಜಿಸಲಾಗಿರುವ ಪ್ರೊಲ್ಯಾಪ್ಸ್ ಡಿಸ್ಕ್ ಶಸ್ತ್ರಚಿಕಿತ್ಸೆ ಕಾರ್ಯಾಗಾರದಲ್ಲಿ 3 ರೋಗಿಗಳಿಗೆ ಲೈವ್ ಸರ್ಜರಿ ಮಾಡಲಾಗುತ್ತದೆ. ಇದನ್ನು ಆಡಿಟೋರಿಯಂನಲ್ಲಿ ದೊಡ್ಡ ಪರದೆಯ ಮೂಲಕ ವೈದ್ಯಕೀಯ ವಿದ್ಯಾರ್ಥಿಗಳಿಗೆ ಹಾಗೂ ವೈದ್ಯರಿಗೆ ತೋರಿಸಲಾಗುತ್ತದೆ. ಒಂದು ಶಸ ಚಿಕಿತ್ಸೆಗೆ ಕೇವಲ 30 ನಿಮಿಷಗಳು ಮಾತ್ರ ವ್ಯಯವಾಗುತ್ತದೆ. ಆಯುಷ್ಮಾನ್ ಭಾರತ್ ಯೋಜನೆಯಡಿ ಸಂಪೂರ್ಣ ಉಚಿತವಾಗಿ ಈ ಶಸ ಚಿಕಿತ್ಸೆಯನ್ನು ಮಾಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಈ ಸಮಸ್ಯೆಯಿಂದ ಬಳಲುತ್ತಿರುವವರು ಸಿಮ್ಸ್ ಆಸ್ಪತ್ರೆಯಲ್ಲಿ ಈ ಸೌಲಭ್ಯವನ್ನು ಪಡೆದುಕೊಳ್ಳಬಹುದಾಗಿದೆ.
ರೋಗಿಗಳಿಗೆ ಸಹಕಾರಿ:
ಪ್ರೊಲ್ಯಾಪ್ಸ್ ಡಿಸ್ಕ್ ಶಸಚಿಕಿತ್ಸೆಯಿಂದ, ಈ ತರಹ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಅತ್ಯಂತ ಸಹಕಾರಿಯಾಗಿದೆ. ಇದು ಕಡಿಮೆ ಅವಧಿಯಲ್ಲಿ ಮಾಡುವ ಶಸ ಚಿಕಿತ್ಸೆ ಆಗಿರುವುದರಿಂದ ರೋಗಿಗಳು ಕೂಡ ಬೇಗ ಗುಣಮುಖರಾಗಲು ಅನುಕೂಲವಾಗುತ್ತದೆ. ಈ ಶಸಚಿಕಿತ್ಸೆಯಿಂದ ಮೂಳೆ ಮತ್ತು ಮಾಂಸಕ್ಕೆ ಯಾವುದೇ ತೊಂದರೆಯಾಗುವುದಿಲ್ಲ. ಮುಖ್ಯವಾಗಿ ಇದರಿಂದ ಯಾವುದೇ ಅಡ್ಡಪರಿಣಾಮಗಳು ಉಂಟಾಗುವುದಿಲ್ಲ. 1 ಸೆ.ಮೀ ನಷ್ಟು ಕೀ ವೋಲ್‌ನಲ್ಲಿ ಪೂರ್ತಿ ಶಸ ಚಿಕಿತ್ಸೆಯನ್ನು ನಡೆಸಲಾಗುತ್ತದೆ. ರೋಗಿಗಳಿಗೆ ಪೂರ್ಣ ಪ್ರಮಾಣದಲ್ಲಿ ಅನಸ್ತೇಶಿಯಾವನ್ನು ನೀಡುವುದಿಲ್ಲ. ಬದಲಾಗಿ ಕೇವಲ ನೋವು ಕಡಿಮೆಯಾಗುವ ಔಷಧಿಯನ್ನು ಮಾತ್ರ ನೀಡಿ ಶಸ ಚಿಕಿತ್ಸೆಯನ್ನು ನಡೆಸಲಾಗುತ್ತದೆ. ಈ ನಿಟ್ಟಿನಲ್ಲಿ ಇಂತಹ ಶಸ ಚಿಕಿತ್ಸೆಗಳು ರೋಗಿಗಳಿಗೆ ಸಹಕಾರಿಯಾಗಲಿದೆ.
ರಾಜ್ಯದ ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಇದೇ ಮೊದಲ ಬಾರಿಗೆ ಸಿಮ್ಸ್‌ನಲ್ಲಿ ಟ್ರಾನ್‌ಸೆೆರೋಮಿನಲ್ ಅಂಡ್ ಇಂಟರ್‌ಲ್ಯಾಮಿನರ್ ಎಂಡೋಸ್ಕೋಪಿ ಮೂಲಕ ಪ್ರೊಲ್ಯಾಪ್ಸ್ ಡಿಸ್ಕ್ ಶಸ ಚಿಕಿತ್ಸಾ ಕಾರ್ಯಾಗಾರವನ್ನು ಆಯೋಜನೆ ಮಾಡಲಾಗುತ್ತಿದೆ. ಈ ಕಾರ್ಯಾಗಾರದಿಂದ ವೈದ್ಯರು ಹಾಗೂ ಪ್ರೊಲ್ಯಾಪ್ಸ್ ಡಿಸ್ಕ್ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಸಹಕಾರಿಯಾಗಲಿದೆ.
-ಡಾ.ಮಾರುತಿ, ಮುಖ್ಯಸ್ಥರು, ಕೀಲು ಮತ್ತು ಮೂಳೆ ವಿಭಾಗ, ಸಿಮ್ಸ್, ಚಾಮರಾಜನಗರ