

ಹನೂರು: ಪ್ರತ್ಯೇಕ ಹಾಗೂ ಹೆಚ್ಚುವರಿ ಬಸ್ ಸೌಕರ್ಯ ಕಲ್ಪಿಸುವಂತೆ ಆಗ್ರಹಿಸಿ ಶುಕ್ರವಾರ ಪಟ್ಟಣದ ಸರ್ಕಾರಿ ಬಸ್ ನಿಲ್ದಾಣದಲ್ಲಿ ನೂರಾರು ವಿದ್ಯಾರ್ಥಿಗಳು ಬಸ್ ಸಂಚಾರ ತಡೆದು ದಿಢೀರ್ ಪ್ರತಿಭಟನೆ ನಡೆಸಿದರು.
ಮಹದೇಶ್ವರ ಬೆಟ್ಟ, ಶಾಗ್ಯ, ಲೊಕ್ಕನಹಳ್ಳಿ, ಮಾರ್ಟಳ್ಳಿ, ರಾಮಾಪುರ ಸೇರಿದಂತೆ ಇತರ ಕಡೆಗಳಿಂದ ಸಾವಿರಾರು ವಿದ್ಯಾರ್ಥಿಗಳು ಹನೂರು ಹಾಗೂ ಕೊಳ್ಳೇಗಾಲಕ್ಕೆ ಶಾಲಾ-ಕಾಲೇಜಿಗೆ ತೆರಳುತ್ತಾರೆ. ಆದರೆ ಸಮರ್ಪಕ ಬಸ್ ಸೌಕರ್ಯವಿಲ್ಲ. ಈ ಬಗ್ಗೆ ಹಲವು ಬಾರಿ ಪ್ರತಿಭಟನೆ ನಡೆಸಲಾಗಿದೆ. ಆದರೂ ಪ್ರಯೋಜವಾಗಿಲ್ಲ. ಇದೀಗ ಶಕ್ತಿ ಯೋಜನೆ ಜಾರಿಯಾಗಿರುವುದರಿಂದ ಪ್ರತಿ ಬಸ್‌ನಲ್ಲೂ ಜನರು ಕಿಕ್ಕಿರಿದು ತುಂಬಿರುತ್ತಾರೆ. ಇದರಿಂದ ನೂಕುನುಗ್ಗಲಿನಲ್ಲೇ ಕಾಲೇಜಿಗೆ ತೆರಳಬೇಕಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ನಿಗದಿತ ಸಮಯಕ್ಕೆ ಕಾಲೇಜಿಗೆ ತೆರಳಲು ಸಾಧ್ಯವಾಗದಿರುವುದರಿಂದ ಪಾಠ ಪ್ರವಚನದಿಂದ ವಂಚಿತರಾಗಬೇಕಿದೆ. ಕಳೆದ ನಾಲ್ಕೈದು ದಿನಗಳಿಂದ ಹೆಚ್ಚಿನ ತೊಂದರೆ ಅನುಭವಿಸುವಂತಾಗಿದೆ. ಜತೆಗೆ ಕೆಲವು ಬಸ್‌ಗಳಲ್ಲಿ ಪಾಸ್ ಹೊಂದಿರುವ ವಿದ್ಯಾರ್ಥಿಗಳನ್ನು ಹತ್ತಿಸಿಕೊಳ್ಳದೆ ಕಂಡಕ್ಟರ್ ಅನುಚಿತವಾಗಿ ವರ್ತಿಸುತ್ತಾರೆ. ಆದ್ದರಿಂದ ಶಾಲಾ, ಕಾಲೇಜಿಗೆ ತೆರಳುವ ಹಾಗೂ ಆಗಮಿಸುವ ವೇಳೆ ವಿದ್ಯಾರ್ಥಿಗಳಿಗೆ ಪ್ರತ್ಯೇಕ ಬಸ್ ಸೌಕರ್ಯ ಕಲ್ಪಿಸಬೇಕು. ಇಲ್ಲವಾದಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸುದ್ದಿ ತಿಳಿದು ಸ್ಥಳಕ್ಕಾಗಮಿಸಿದ ಪೊಲೀಸರು, ಠಾಣೆಗೆ ಮಾಹಿತಿ ನೀಡದೆ ದಿಢೀರ್ ಪ್ರತಿಭಟನೆ ನಡೆಸುತ್ತಿರುವುದು ಸರಿಯಲ್ಲ. ಹಾಗಾಗಿ ಪ್ರತಿಭಟನೆಯನ್ನು ಕೈ ಬಿಡುವಂತೆ ತಿಳಿಸಿದಾಗ ಮಾತಿನ ಚಕಮಕಿ ನಡೆಯಿತು. ಇದರಿಂದ ರೊಚ್ಚಿಗೆದ್ದ ವಿದ್ಯಾರ್ಥಿಗಳು ಬಸ್ ನಿಲ್ದಾಣದ ಮುಂಭಾಗ ಧಿಕ್ಕಾರ ಕೂಗುತ್ತಾ ಧರಣಿ ಕುಳಿತರು. ಬಳಿಕ ವಿದ್ಯಾರ್ಥಿಗಳನ್ನು ಮನವೊಲಿಸಿದಾಗ ಸ್ಥಳಕ್ಕೆ ಕೂಡಲೇ ಸಾರಿಗೆ ಇಲಾಖೆಯ ಅಧಿಕಾರಿಗಳು ಆಗಮಿಸಿ ಸಮಸ್ಯೆಯನ್ನು ಬಗೆಹರಿಸಬೇಕು. ಇಲ್ಲವಾದಲ್ಲಿ ಪ್ರತಿಭಟನೆ ಮುಂದುವರಿಸಲಾಗುವುದು ಎಂದು ಎಚ್ಚರಿಸಿದರು.
ಅಧಿಕಾರಿಗೆ ತರಾಟೆ: ಬಳಿಕ ಸ್ಥಳಕ್ಕಾಗಮಿಸಿದ ಕೊಳ್ಳೇಗಾಲದ ಡಿಪೋ ನಿರೀಕ್ಷಕ ಲಿಂಗರಾಜು ಅವರನ್ನು ವಿದ್ಯಾರ್ಥಿಗಳು ತೀವ್ರ ತರಾಟೆಗೆ ತೆಗೆದುಕೊಂಡರು. ಈ ವೇಳೆ ಜಿಲ್ಲಾ ಸಾರಿಗೆ ಅಧಿಕಾರಿಗಳ ಗಮನಕ್ಕೆ ತಂದು 2 ಪ್ರತ್ಯೇಕ ಬಸ್ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಭರವಸೆ ನೀಡಿದ ಬಳಿಕ ಪ್ರತಿಭಟನೆಯನ್ನು ಕೈ ಬಿಡಲಾಯಿತು.
ಪ್ರತಿಭಟನೆಯ ಹಿನ್ನೆಲೆಯಲ್ಲಿ ಪಟ್ಟಣದಲ್ಲಿ ಸುಮಾರು 2 ಗಂಟೆಗಳ ಕಾಲ ಸಂಚಾರದಲ್ಲಿ ಅಸ್ತವ್ಯಸ್ತವಾಗಿತ್ತು. ಇದರಿಂದ ಮ.ಬೆಟ್ಟಕ್ಕೆ ತೆರಳುತ್ತಿದ್ದ ಭಕ್ತರು ಹಾಗೂ ಸಾರ್ವಜನಿಕರು ತೊಂದರೆ ಅನುಭವಿಸಿದರು. ವಿದ್ಯಾರ್ಥಿಗಳನ್ನು ನಿಯಂತ್ರಿಸುವಲ್ಲಿ ಪೊಲೀಸರು ಹರಸಾಹಸ ಪಟ್ಟರು.